ಸೋಮವಾರ, ಏಪ್ರಿಲ್ 6, 2020
19 °C
ಸರಳ ವಿವಾಹ ಕಾರ್ಯಕ್ರಮ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ

ಏ.26: ಚಾಮರಾಜೇಶ್ವರ ದೇವಸ್ಥಾನದಲ್ಲಿ ಸಪ್ತಪದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಹಿಂದೂ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಾಲಯದಲ್ಲಿ ಏಪ್ರಿಲ್‌ 26ರಂದು ‘ಸಪ್ತಪದಿ’ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮ ನಡೆಯಲಿದೆ. 

ಶುಕ್ರವಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.

‘ಯೋಜನೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಕರಪತ್ರ, ಬ್ಯಾನರ್‌ಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳಲ್ಲಿ ಸಪ್ತಪದಿ ವಿವಾಹ ಕುರಿತ ಮಾಹಿತಿ ಪೋಸ್ಟರ್‌ಗಳನ್ನು ಅಳವಡಿಸಬೇಕು’ ಎಂದು ಅವರು ಸೂಚಿಸಿದರು.

ಸಪ್ತಪದಿ ರಥ: ಈ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದ ಬಗ್ಗೆ ಪ್ರಚಾರ ಕೈಗೊಳ್ಳುವ ಉದ್ದೇಶದಿಂದ  ಜಿಲ್ಲೆಯಾದ್ಯಂತ ಸಪ್ತಪದಿ ರಥ ಸಂಚರಿಸಲಿದೆ. ರಥವು ಆಕರ್ಷಣೀಯವಾಗಿಯೂ ಹಾಗೂ ಮಾಹಿತಿದಾಯಕವಾಗಿರುವಂತೆ ನೋಡಿಕೊಳ್ಳಬೇಕು. ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಅದರಲ್ಲಿರಬೇಕು’ ಎಂದರು.

‘ವರನಿಗೆ ಪಂಚೆ, ಶರ್ಟ್, ಶಲ್ಯ, ವಧುವಿಗೆ ಧಾರೆ ಸೀರೆ, ರವಿಕೆ ಕಣ, ಚಿನ್ನದ ತಾಳಿ ಹಾಗೂ ಎರಡು ಚಿನ್ನದ ಗುಂಡು ಇನ್ನಿತರ ವಿವಾಹ ಸಂಬಂಧ ಸಾಮಾಗ್ರಿಗಳನ್ನು ನೀಡಲಾಗುತ್ತದೆ. ಈ ಬಗ್ಗೆಯೂ ಮಾಹಿತಿ ನೀಡಬೇಕು. ಅರ್ಜಿಗಳ ವಿತರಣೆ ಸರಿಯಾದ ರೀತಿಯಲ್ಲಿ ಆಗಬೇಕು. ಯೋಜನೆಯ ಅರ್ಜಿಗಳು ಜಿಲ್ಲಾಧಿಕಾರಿ ಕಚೇರಿ, ನಾಡಕಚೇರಿ ಹಾಗೂ ದೇವಸ್ಥಾನಗಳಲ್ಲಿ ಸಮರ್ಪಕವಾಗಿ ದೊರೆಯುವ ವ್ಯವಸ್ಥೆ ಮಾಡಬೇಕು’ ಎಂದು ತಿಳಿಸಿದರು.

‘ಇದು ಸರ್ಕಾರದ ಮಹತ್ವಾಂಕ್ಷೆಯ ಯೋಜನೆ. ಮೊಟ್ಟಮೊದಲ ಬಾರಿಗೆ ಚಾಮರಾಜನಗರದಲ್ಲಿ ಆಯೋಜನೆ ಯಾಗುತ್ತಿರುವ ಸರಳ ವಿವಾಹ ಕಾರ್ಯಕ್ರಮವನ್ನು ಹೆಚ್ಚು ಜೋಡಿಗಳು ಸದುಪಯೋಗ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಡಿವೈಎಸ್‌ಪಿ ಜೆ.ಮೋಹನ್, ತಹಶೀಲ್ದಾರ್ ಮಹೇಶ್, ಬಿಳಿಗಿರಿರಂಗನಬೆಟ್ಟದ ವ್ಯವಸ್ಥಾಪಕರ ಸಂಘದ ಅಧ್ಯಕ್ಷರಾದ ಆಲ್ದೂರು ರಾಜಶೇಖರ್, ಸದಸ್ಯರಾದ ಮಹೇಶ್ ಕಾಂದಳ್ಳಿ, ದೇವಾಲಯದ ಅರ್ಚಕರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಮಾರ್ಚ್‌ 28ಕ್ಕೆ ಕೊನೆ ದಿನ

ಯೋಜನೆ ಅಡಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲು ಬಯಸುವ ವಧು ವರರಿಗೆ ನೋಂದಣಿ ಮಾಡಿಕೊಳ್ಳಲು ಇದೇ 28ರವರೆಗೆ ಅವಕಾಶ ಇದೆ. ವಧು-ವರರ ಪಟ್ಟಿಗೆ ಆಕ್ಷೇಪಣೆ ಇದ್ದಲ್ಲಿ ಏಪ್ರಿಲ್ 7ರವರೆಗೂ ಸಲ್ಲಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)