ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಬೆಲೆ ಏರಿಕೆಗೆ ಖಂಡನೆ: ಎಸ್‌ಡಿಪಿಐ ಪ್ರತಿಭಟನೆ

Last Updated 14 ಜೂನ್ 2021, 14:29 IST
ಅಕ್ಷರ ಗಾತ್ರ

ಚಾಮರಾಜನಗರ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್‌ಡಿಪಿಐ) ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಸತ್ಯಮಂಗಲ ರಸ್ತೆಯಲ್ಲಿರುವ ಭಾರತ್ ಪೆಟ್ರೋಲಿಯಂ ಬಂಕ್‌ನಲ್ಲಿ ಸೇರಿದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಸಂದೇಶಗಳನ್ನು ಬರೆದಿದ್ದ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಕಲೀಲ್ ಉಲ್ಲಾ ಅವರು ಮಾತನಾಡಿ, ‘ಐದು ರಾಜ್ಯಗಳ ಚುನಾವಣೆ ನಡೆಯುವವರೆಗೆ ಸುಮ್ಮನಿದ್ದ ಕೇಂದ್ರ ಸರ್ಕಾರ, ಬಳಿಕ 23 ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದೆ. ಹೀಗಾಗಿ ಎರಡೂ ಇಂಧನಗಳ ಬೆಲೆ ಲೀಟರ್‌ಗೆ ₹100 ದಾಟಿದೆ’ ಎಂದು ಆರೋಪಿಸಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆರಿಗೆ ಸಂಗ್ರಹ ರೂಪದಲ್ಲಿ ಜನರಿಂದ ಬಲವಂತವಾಗಿ ಹಣ ದೋಚುತ್ತಿವೆ. ಬೆಲೆ ಏರುತ್ತಿರುವುದನ್ನು ಸರ್ಕಾರ ಕೂಡಲೇ ನಿಯಂತ್ರಣಕ್ಕೆ ತರಬೇಕು’ ಎಂದು ಒತ್ತಾಯಿಸಿದರು.

ಎಸ್‌ಡಿಪಿಐರಾಜ್ಯ ಕಾರ್ಯದರ್ಶಿ ಅಬ್ರಾರ್ ಅಹಮ್ಮದ್ ಅವರು ಮಾತನಾಡಿ, ‘ದೇಶದಾದ್ಯಂತ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಜನರ ಮೇಲೆ ಕೇಂದ್ರ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ. ತೆರಿಗೆ ಸಂಗ್ರಹ ನೆಪ ಇಟ್ಟುಕೊಂಡು ಜನರಿಂದ ಲೂಟಿ ಮಾಡಲಾಗುತ್ತಿದೆ. ಬಂಡವಾಳಶಾಹಿಗಳಿಗೆ ಲಾಭ ಮಾಡುವ ನಿಟ್ಟಿನಲ್ಲಿ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ರಾಜಸ್ಥಾನದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹೆಚ್ಚಿನ ವ್ಯಾಟ್ ವಿಧಿಸಿದೆ’ ಎಂದು ದೂರಿದರು.

ಎಸ್‌ಡಿಪಿಐ ಜಿಲ್ಲಾ ಘಟಕದ ಉಪಾಧ್ಯಕ್ಷ ಸೈಯದ್ ಆರೀಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್, ಜಿಲ್ಲಾ ಕಾರ್ಯದರ್ಶಿ ಜಬೀನೂರ್, ಜಿಲ್ಲಾ ಸಮಿತಿ ಸದಸ್ಯರಾದ ಕಿಜರ್, ಇಸ್ರಾರ್ ಸೇರಿದಂತೆ ಇತರರು ಇದ್ದರು.

ಕಾಂಗ್ರೆಸ್‌ನಿಂದಲೂ ಮುಂದುವರಿದ ಪ್ರತಿಭಟನೆ

ತೈಲ, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಮುಖಂಡರು ಸತತ ನಾಲ್ಕನೇ ದಿನವೂ ಪ್ರತಿಭಟನೆ ನಡೆಸಿದರು.

ನಗರದ ವೀರನಪುರ ಕ್ರಾಸ್ ಬಳಿಯ ಪೆಟ್ರೋಲ್ ಬಂಕ್ ಮುಂಭಾಗ ಸೇರಿದ ಪ್ರತಿಭಟನಕಾರರುಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಜ್ಗರ್ ಮುನ್ನಾ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡುವ ಮೂಲಕ ಜನರನ್ನು ಶೋಷಣೆ ಮಾಡುತ್ತಿದೆ. ಕೋವಿಡ್‌ ಸಂಕಷ್ಷದ ಪರಿಸ್ಥಿತಿಯಲ್ಲೂ 30ಕ್ಕೂ ಹೆಚ್ಚು ಬಾರಿ ಹೆಚ್ಚು ಪೆಟ್ರೋಲ್, ಡೀಸೆಲ್‌ ದರ ಏರಿಕೆ ಮಾಡಲಾಗಿದೆ. ಅಲ್ಲದೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಇದರಿಂದ ಜನತೆಗೆ ತುಂಬಾ ತೊಂದರೆಯಾಗಿದೆ’ ಎಂದರು.

ಜನರು ಕೋವಿಡ್‌ನಿಂದ ತತ್ತರಿಸಿದ್ದಾರೆ. ಈ ಸಂದರ್ಭದಲ್ಲಿ ಇಂಧನ ಬೆಲೆ ಏರಿಕೆ ಮಾಡುವುದು ಎಷ್ಟು ಸರಿ? ಆದ್ದರಿಂದ ಕೂಡಲೇ ತೈಲ ಬೆಲೆ ಇಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಕಾಂಗ್ರೆಸ್‌ ಜಿಲ್ಲಾ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಕಾರ್ಯದರ್ಶಿ ಚಿಕ್ಕ ಮಹದೇವ್, ಮುಖಂಡರಾದ ಬಾಲಚಂದ್ರ, ಸೋಮಲಿಂಗಪ್ಪ, ಎಪಿಎಂಸಿ ಸದಸ್ಯ ಶಿವಸ್ವಾಮಿ, ಕಿರಗಸೂರು ತೌಸೀಫ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT