ಬುಧವಾರ, ಜುಲೈ 6, 2022
21 °C
ಸರಾಗ ಮತದಾನ; ಶೇ 45 ರಷ್ಟು ಮಂದಿ ಹಕ್ಕು ಚಲಾವಣೆ, 643 ಮತಗಳ ಅಂತರದ ಗೆಲುವು

ಚಾಮರಾಜನಗರ ಜಿಲ್ಲಾ ಕಸಾಪಕ್ಕೆ ಶೈಲಕುಮಾರ್ ಸಾರಥ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಎಂ.ಶೈಲಕುಮಾರ್‌ ಅವರು ಗೆಲುವು ಸಾಧಿಸಿದ್ದಾರೆ. ಮುಂದಿನ ಐದು ವರ್ಷಗಳ ಅವಧಿಗೆ ಗಡಿಜಿಲ್ಲೆಯ ಕನ್ನಡ ತೇರಿನ ಸಾರಥ್ಯವನ್ನು ಅವರು ವಹಿಸಲಿದ್ದಾರೆ. 

ಶೈಲಕುಮಾರ್‌ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿ.ಎಂ.ನರಸಿಂಹಮೂರ್ತಿ ಅವರನ್ನು 643 ಮತಗಳಿಂದ ಸೋಲಿಸಿದ್ದಾರೆ. ‌

ಈ ಬಾರಿ 4,830 ಮಂದಿ ಮತದಾರರಿದ್ದರು. ಕಣದಲ್ಲಿ ಸಿ.ಎಂ.ನರಸಿಂಹಮೂರ್ತಿ, ನಾಗೇಶ್‌ ಸೋಸ್ಲೆ, ಶೈಲಕುಮಾರ್‌ ಹಾಗೂ ಸ್ನೇಹ ಇದ್ದರು. 

ಭಾನುವಾರ ನಡೆದ ಚುನಾವಣೆಯಲ್ಲಿ 2,183 ಮಂದಿ ಮತ ಚಲಾಯಿಸಿದ್ದರು. ಈ ಪೈಕಿ ಶೈಲಕುಮಾರ್‌ ಅವರು 1,316 ಮತಗಳನ್ನು ಪಡೆದರು. ಸಮೀಪದ ಪ್ರತಿಸ್ಪರ್ಧಿ ಸಿ.ಎಂ.ನರಸಿಂಹಮೂರ್ತಿ ಅವರು 673 ಮತಗಳನ್ನು ಪಡೆದರೆ, ನಾಗೇಶ್‌ ಸೋಸ್ಲೆ ಅವರು 150 ಮತಗಳನ್ನು ಗಳಿಸಿದರು. ತಟಸ್ಥರಾಗಿದ್ದ ಸ್ನೇಹ ಅವರಿಗೆ 22 ಮತಗಳು ಬಿದ್ದಿವೆ. 22 ಮತಗಳು ತಿರಸ್ಕೃತಗೊಂಡಿವೆ.

ಶಾಂತಿಯುತ ಮತದಾನ: ಮತದಾನಕ್ಕಾಗಿ ಜಿಲ್ಲಾ ಕೇಂದ್ರದಲ್ಲಿ ಮೂರು ಸೇರಿದಂತೆ ಒಟ್ಟು ಏಳು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ‌ಬೆಳಿಗ್ಗೆ 8ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. 

‘ಯಾವುದೇ ಅಡಚಣೆ ಇಲ್ಲದೆ ಶಾಂತಿಯುತವಾಗಿ ಮತದಾನ ನಡೆದಿದೆ’ ಎಂದು ಚುನಾವಣಾಧಿಕಾರಿಯಾಗಿದ್ದ ಚಿದಾನಂದ ಗುರುಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಚಾಮರಾಜನಗರ ತಾಲ್ಲೂಕಿನಲ್ಲಿ 2,524 ಮತಗಳಿದ್ದವು. ಈ ಪೈಕಿ 1,178 ಮಂದಿ ಹಕ್ಕು ಚಲಾಯಿಸಿದ್ದಾರೆ. 829 ಮತಗಳಿರುವ ಗುಂಡ್ಲುಪೇಟೆಯಲ್ಲಿ 375, ಕೊಳ್ಳೇಗಾಲದಲ್ಲಿ 554 ಮತದಾರರ ಪೈಕಿ 275, 623 ಮತದಾರರಿರುವ ಯಳಂದೂರಿನಲ್ಲಿ 265 ಮಂದಿ ಹಾಗೂ ಹನೂರಿನ 309 ಮತದಾರರಲ್ಲಿ 90 ಮಂದಿ ಮತ ಚಲಾಯಿಸಿದ್ದಾರೆ.‌

ಶೈಲಕುಮಾರ್‌ ಮುನ್ನಡೆ: ಮತದಾನ ಪೂರ್ಣಗೊಂಡ ಬಳಿಕ ಆಯಾ ಮತಗಟ್ಟೆಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಶೈಲಕುಮಾರ್‌ ಅವರು ಐದೂ ತಾಲ್ಲೂಕುಗಳಲ್ಲಿ ಸಿ.ಎಂ.ನರಸಿಂಹಮೂರ್ತಿ ಅವರಿಗಿಂತ ಹೆಚ್ಚು ಮತಗಳನ್ನು ಗಳಿಸಿದ್ದಾರೆ. 

ಶೈಲಕುಮಾರ್‌ ಅವರಿಗೆ ಚಾಮರಾಜನಗರ ತಾಲ್ಲೂಕಿನಲ್ಲಿ 601, ಯಳಂದೂರು ತಾಲೂಕಿನಲ್ಲಿ 143, ಕೊಳ್ಳೇಗಾಲ ತಾಲೂಕಿನಲ್ಲಿ 177, ಗುಂಡ್ಲುಪೇಟೆ ತಾಲೂಕಿನಲ್ಲಿ 328 ಹಾಗೂ ಹನೂರು ತಾಲೂಕಿನಲ್ಲಿ 67 ಮತಗಳು ಬಿದ್ದಿವೆ.

ನರಸಿಂಹಮೂರ್ತಿ ಅವರು ಚಾಮರಾಜನಗರ ತಾಲ್ಲೂಕಿನಲ್ಲಿ 422, ಯಳಂದೂರು ತಾಲೂಕಿನಲ್ಲಿ 99, ಕೊಳ್ಳೇಗಾಲ ತಾಲೂಕಿನಲ್ಲಿ 90, ಗುಂಡ್ಲುಪೇಟೆ ತಾಲೂಕಿನಲ್ಲಿ 38 ಹಾಗೂ ಹನೂರು ತಾಲೂಕಿನಲ್ಲಿ 23 ಮತಗಳನ್ನು ಗಳಿಸಿದರು.

ವಿಜಯೋತ್ಸವ: ಶೈಲಕುಮಾರ್ ಆಯ್ಕೆಯಾಗುತ್ತಿದ್ದಂತೆ ಖಚಿತವಾಗು


ಜಿಲ್ಲಾ ಕಸಾಪದ ಅಧ್ಯಕ್ಷರಾಗಿ ಆಯ್ಕೆಯಾದ ಶೈಲಕುಮಾರ್‌ ಅವರನ್ನು ಕಸಾಪದ ಮಾಜಿ ಅಧ್ಯಕ್ಷರು, ಸದಸ್ಯರು ಹಾಗೂ ಬೆಂಬಲಿಗರು ಹಾರಹಾಕಿ ಅಭಿನಂದಿಸಿದರು

ತ್ತಿದ್ದಂತೆ, ಅವರ ಬೆಂಬಲಿಗರು, ಅಭಿಮಾನಿಗಳು ಹೂವಿನ ಹಾರ ಹಾಕಿ, ಸಿಹಿ ತಿನ್ನಿಸುವ ಮೂಲಕ ವಿಜಯೋತ್ಸವ ಆಚರಿಸಿದರು.

ಕಸಾಪ ಮಾಜಿ ಅಧ್ಯಕ್ಷರಾದ ನಾಗಮಲ್ಲಪ್ಪ, ಸೋಮಶೇಖರ್ ಬಿಸಲ್ವಾಡಿ, ಬಿ.ಎಸ್.ವಿನಯ್, ಸದಸ್ಯರಾದ ಡಾ. ಪರಮೇಶ್ವರಪ್ಪ, ಸಿದ್ದಮಲ್ಲಪ್ಪ, ಎಸ್. ಬಾಲಸುಬ್ರಮಣ್ಯ, ಸುರೇಶ್‌ಋಗ್ವೇದಿ, ಪ್ರದೀಪ್‌ಕುಮಾರ್ ದೀಕ್ಷೀತ್, ಕೊತ್ತಲವಾಡಿ ಮಹದೇವಸ್ವಾಮಿ, ಅರ್ಕಪ್ಪ, ಮಹದೇವಸ್ವಾಮಿ ಐಟಿಐ, ವೃಷಬೇಂದ್ರಪ್ಪ, ಮದ್ದೂರು ವಿರೂಪಾಕ್ಷ, ಶಿವಲಂಕಾರ್, ಮಾದಾಪುರ ರವಿಕುಮಾರ್, ಎಸ್. ನಿರಂಜನ್‌ಕುಮಾರ್, ದುಂಡಮಾದಪ್ಪ, ಸಿದ್ದರಾಜು, ಮನೋಜ್‌ಗೌಡ, ವೀರಭದ್ರ, ನಾಗರಾಜು, ಮ.ಮಹೇಶ್, ಕಿಶೋರ್ ಇತರರು ಇದ್ದರು.

‘ಸಾಹಿತ್ಯ ಭವನ ನಿರ್ಮಾಣ, ಸಮ್ಮೇಳನಕ್ಕೆ ಒತ್ತು’ 

ಗೆಲುವಿನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ  ಶೈಲಕುಮಾರ್ ಅವರು, ‘ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಹೋಬಳಿ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನವನ್ನು ಮಾಡುವ ಯೋಜನೆಯನ್ನು ಪ್ರಸ್ತಾಪಿಸಿ ಮತ ನೀಡುವಂತೆ ಎಲ್ಲರಲ್ಲೂ ಮನವಿ ಮಾಡಿದ್ದೇನೆ. ಅವುಗಳನ್ನು ಜಾರಿಗೆ ತರುತ್ತೇನೆ’ ಎಂದರು. 

‘ಹೆಚ್ಚಿನ ಸದಸ್ಯರು ನನ್ನನ್ನು ಬೆಂಬಲಿಸುವ ಮೂಲಕ ಗೆಲ್ಲಿಸಿದ್ದಾರೆ. ಅವರಿಗೆ ಅಭಾರಿಯಾಗಿದ್ದೇನೆ. ನನ್ನ ಗೆಲುವಿಗೆ ಕಾರಣಕರ್ತರಾದ ಪರಿಷತ್‌ನ ಹಿಂದಿನ ಅಧ್ಯಕ್ಷರಾದ ಮಲೆಯೂರು ಗುರುಸ್ವಾಮಿ, ನಾಗಮಲ್ಲಪ್ಪ, ಸೋಮಶೇಖರ್ ಬಿಸಲ್ವಾಡಿ ಹಾಗೂ ಬಿ.ಎಸ್.ವಿನಯ್ ಅವರು ಹಾಗು ಜಿಲ್ಲೆಯ ಎಲ್ಲ ಸಾಹಿತ್ಯಸಕ್ತರು ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು. 

ಮುಂದಿನ ದಿನಗಳಲ್ಲಿ ಎಲ್ಲ ಸಾಹಿತ್ಯಕ್ತರು, ಚುನಾಯಿತ ಪ್ರತಿನಿಧಿಗಳ ಸಹಕಾರದೊಂದಿಗೆ ಗಡಿ ಜಿಲ್ಲೆಯಲ್ಲಿ ಕಸಾಪವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತೇನೆ ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು