ಚಾಮರಾಜನಗರ: ‘ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬೇಕು. ಜಿಲ್ಲೆಯಲ್ಲೊಂದು ಶೂಟಿಂಗ್ ಕ್ಲಬ್ ಸ್ಥಾಪಿಸಬೇಕು. ಶೂಟಿಂಗ್‌ನಲ್ಲಿ ಆಸಕ್ತಿ ಹೊಂದಿರುವವರಿಗೆ ತರಬೇತಿ ನೀಡಬೇಕು ಎಂಬುದು ಜೀವನದ ಆಸೆ. ಅದನ್ನು ಈಡೇರಿಸಲು ಶ್ರಮಿಸುತ್ತಿದ್ದೇನೆ. ಅದಕ್ಕಾಗಿ ಪ್ರೋತ್ಸಾಹ ಬೇಕಾಗಿದೆ...’
ಜಿಲ್ಲೆಯ ರೈಫಲ್ ಶೂಟಿಂಗ್ ಪ್ರತಿಭೆ, ನಗರದ ಯುವಕ ರಮೇಶ್ ಬಾಬು ಅವರ ಮಹದಾಸೆ ಇದು.
ಈಗ ಸ್ವಂತ ಶ್ರಮದಿಂದಲೇ ಶೂಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸುತ್ತಿರುವ ರಮೇಶ್ ಬಾಬು ಅವರಿಗೆ ಇನ್ನಷ್ಟು ಸಾಧನೆ ಮಾಡಬೇಕು ಎಂಬ ಛಲ ಇದೆ. ಆದರೆ, ಅದಕ್ಕೆ ಪ್ರಾಯೋಜಕತ್ವ ಬೇಕು. ಪ್ರೋತ್ಸಾಹ ಬೇಕು. ಇದರ ನಿರೀಕ್ಷೆಯಲ್ಲಿ ಅವರಿದ್ದಾರೆ. ಅಂದ ಮಾತ್ರಕ್ಕೆ ಅವರು ಸುಮ್ಮನೆ ಕುಳಿತಿಲ್ಲ. ಶೂಟಿಂಗ್ ಚಾಂಪಿಯನ್‌ಶಿಪ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪದಕಗಳಿಗೆ ಕೊರಳು ಒಡ್ಡುತ್ತಲೇ ಇದ್ದಾರೆ.
32 ವರ್ಷದ ರಮೇಶ್ ಬಾಬು ಚಾಮರಾಜನಗರದವರು. ಎಲೆಕ್ಟ್ರಾನಿಕ್ಸ್‌ನಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಕಂಪ್ಯೂಟರ್, ಬಿಡಿ ಭಾಗಗಳ ಮಾರಾಟದ ಅಂಗಡಿಯನ್ನು ನಡೆಸುತ್ತಿದ್ದಾರೆ.
8 ವರ್ಷಗಳಿಂದ ಶೂಟಿಂಗ್: ಗನ್ ಬಗ್ಗೆ ಬಾಲ್ಯದಿಂದಲೂ ವಿಶೇಷ ಮೋಹ ಹೊಂದಿದ್ದ ರಮೇಶ್ ಬಾಬು ಅವರು ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಶೂಟಿಂಗ್ ಅಭ್ಯಾಸ ಆರಂಭಿಸಿದರು.
ಮೈಸೂರಿನ ಜಿಲ್ಲಾ ರೈಫಲ್ ಅಸೋಸಿಯೇಷನ್‌ಗೆ ಸೇರಿ ಎರಡು ವರ್ಷಗಳ ಕಾಲ 0.22 ರೈಫಲ್ ಶೂಟಿಂಗ್ ತರಬೇತಿ ಪಡೆದು ಪರಿಣತಿ ಸಾಧಿಸಿದರು. ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ಸದಸ್ಯರೂ ಆಗಿರುವ ರಮೇಶ್, ಹಲವು ಚಾಂಪಿಯನ್ ಶಿಪ್‌ನಲ್ಲಿ ಪಾಲ್ಗೊಂಡಿದ್ದಾರೆ.
‘2015 ರಿಂದ ಶೂಟಿಂಗ್ ಕ್ಷೇತ್ರದಲ್ಲಿ ಇದ್ದೇನೆ. ಬಾಲ್ಯದ ನನ್ನ ಕನಸನ್ನು ಶಿಕ್ಷಣ ಪೂರೈಸಿದ ನಂತರ ನನಸು ಮಾಡಿಕೊಂಡೆ. ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದೇನೆ. ಈಗ ತುಮಕೂರಿನ ಅನಿಲ್ ಎಂಬುವವರು ಮೂರು ವರ್ಷಗಳಿಂದ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ಸಲಹೆಗಳನ್ನು ಪಡೆಯುತ್ತಾ ಚಾಂಪಿಯನ್‌ಶಿಪ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ’ ಎಂದು ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ರಮೇಶ್ ಅವರು ಬಿಡುವಿನ ವೇಳೆಯಲ್ಲಿ ಮನೆಯ ಟೆರೇಸ್‌ನಲ್ಲಿ ಅಭ್ಯಾಸ ನಡೆಸುತ್ತಾರೆ. ಸ್ನೇಹಿತರ ಫಾರ್ಮ್ ಹೌಸ್‌ಗಳಲ್ಲೂ ಶೂಟಿಂಗ್ ತಾಲೀಮು ಮಾಡುತ್ತಾರೆ. ಚಾಂಪಿಯನ್‌ಶಿಪ್ ಹತ್ತಿರದಲ್ಲಿರುವಾಗ ಬೆಂಗಳೂರಿನ ರಾಜ್ಯ ರೈಫಲ್ ಅಸೋಸಿಯೇಷನ್‌ಗೆ ತೆರಳಿ ಅಭ್ಯಾಸ ನಡೆಸುತ್ತಾರೆ.
106 ಪದಕ: ಏಳು ವರ್ಷಗಳಿಂದ ರಮೇಶ್ ಅವರು ವಿವಿಧ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಜುಲೈ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಶೂಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಮೊದಲ ಸ್ಥಾನ ಮತ್ತು ತಂಡ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿದ್ದರು.
ಬೆಂಗಳೂರು, ಮೈಸೂರು, ಮಂಗಳೂರು, ಚೆನ್ನೈ, ಪುಣೆ ಸೇರಿದಂತೆ ವಿವಿಧ ಕಡೆಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದೇನೆ. ಇದುವರೆಗೆ 106 ಪದಕಗಳನ್ನು ಗಳಿಸಿದ್ದೇನೆ. ಇನ್ನಷ್ಟು ಸಾಧನೆ ಮಾಡುವ ಛಲವಿದೆ’ ಎಂದು ರಮೇಶ್ ಬಾಬು ಹೇಳಿದರು.
ಕುಟುಂಬದವರ ಬೆಂಬಲ: ‘ನನ್ನ ತಾಯಿ ಇರುವವರೆಗೂ ನನಗೆ ಬೆಂಬಲ ನೀಡಿದ್ದರು. ಕೋವಿಡ್ ಸಮಯದಲ್ಲಿ ಆಸ್ಪತ್ರೆಗೆ ಸಕಾಲದಲ್ಲಿ ಆಮ್ಲಜನಕ ಪೂರೈಕೆಯಾಗದೆ ಅವರು ಕೊನೆಯುಸಿರೆಳೆದರು. ಈಗ ನನ್ನ ಪತ್ನಿ ಬೆಂಬಲ ನೀಡುತ್ತಿದ್ದಾಳೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.