ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು | ಹೂವು ಕೊರತೆ, ದುಂಬಿ, ಜೇನ್ನೊಣ ಅತಂತ್ರ

ಬಿಸಿಲು: ಆಲೆಮನೆಗಳತ್ತ ಹುಳುಗಳ ವಲಸೆ; ಜೇನ್ನೊಣಗಳ ಜೊತೆ ಕಾರ್ಮಿಕರ ಸರಸ
ನಾ.ಮಂಜುನಾಥಸ್ವಾಮಿ
Published 6 ಮೇ 2024, 6:03 IST
Last Updated 6 ಮೇ 2024, 6:03 IST
ಅಕ್ಷರ ಗಾತ್ರ

ಯಳಂದೂರು: ಬಿಸಿಲ ಧಗೆ ಧಗಧಗಿಸುತ್ತಿದೆ. ಬಿಸಿಗಾಳಿ ಬೀಸುತ್ತಿದೆ. ಅತಿಯಾದ ಶಾಖದಿಂದ ಹೂವಿನ ಗಿಡಗಳು, ಹೂವು ಅರಳಿಸುವ ಕಾಡು ಸಸ್ಯಗಳು ಬಾಡಿ ಇಲ್ಲವೇ ಒಣಗಿ ಹೋಗುತ್ತಿದ್ದು, ದುಂಬಿ ಮತ್ತು ಜೇನ್ನೊಣಗಳಿಗೆ ಮಕರಂದ ಹೀರಲು ಹೂವುಗಳು ಇಲ್ಲದಂತಾಗಿದೆ. ಹೀಗಾಗಿ, ದುಂಬಿ ಜೇನ್ನೊಣಗಳು ತಂಪು ಅರಸಿ ಆಲೆಮನೆ ಮತ್ತು ನೀರಿನ ಜೌಗು ಪ್ರದೇಶಗಳತ್ತ ವಲಸೆ ಹೋಗುತ್ತಿವೆ.  

ಕಬ್ಬಿನ ಹಾಲು, ಜೋನಿ ಬೆಲ್ಲಕ್ಕೆ ನೊಣದ ದಂಡು ಮುತ್ತುತ್ತಿದೆ. ಇದರಿಂದ ಇಲ್ಲಿ ದುಡಿಯುವ ಶ್ರಮಿಕರ ನೆಮ್ಮದಿಗೂ ಭಂಗ ಉಂಟಾಗಿದೆ. ಪ್ರತಿದಿನ ಜೇನ್ನೊಣಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಕಾಯಕ ಕಟ್ಟಬೇಕಾದ ಸ್ಥಿತಿ ಇದೆ! 

‘ಹೂವಾಡುವ ಹಂತದಲ್ಲಿ ದುಂಬಿಗಳು ಮತ್ತು ಜೇನುನೊಣ, ಕೀಟಗಳು ಪರಾಗಸ್ಪರ್ಶ ಮಾಡಬೇಕು. ಇದರಿಂದ ಹೂ ಕಾಳು ಕಟ್ಟಿ ಇಳುವರಿ ತಂದುಕೊಡುತ್ತದೆ. ಆದರೆ, ಪ್ರಸಕ್ತ ವರ್ಷ ಉರಿಬಿಸಿಲ ಅಬ್ಬರ ಕೃಷಿಗೂ ಹಿನ್ನಡೆಯಾಗಿದೆ. ಮಕರಂದ ಸಂಗ್ರಹಿಸುವ ಜೀವ ಜಗತ್ತಿಗೂ ಕಂಟಕ ಎದುರಾಗಿದೆ. ಈರುಳ್ಳಿ ಮತ್ತು ಚೆಂಡು ಹೂ ಬೇಸಾಯಕ್ಕೆ ಕೀಟಗಳು ಅಷ್ಟಾಗಿ ಮುತ್ತುತ್ತಿಲ್ಲ. ಕೆಲವರು ಬಾಳೆ ಮತ್ತಿತರ ಬೆಳೆಗಳಿಗೆ ಕೀಟನಾಶಕ ಬಳಸುತ್ತಿದ್ದು ವಾಸನೆಗೆ ಹೆದರಿ ಜೇನು ನೊಣಗಳು ಸುರಕ್ಷಿತ ತಾಣ ಸೇರಿವೆ’ ಎಂದು ರೈತರಾದ ಹೊನ್ನೂರು ಪ್ರಸನ್ನ ಹಾಗೂ ಮೆಲ್ಲಹಳ್ಳಿ ಗುರುಮಲ್ಲಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಸಕ್ತ ಸಾಲಿನಲ್ಲಿ ಸಣ್ಣ ಈರುಳ್ಳಿ, ಟೊಮೆಟೊ ಬೆಳೆಗಾರರ ಸಂಖ್ಯೆ ಕುಸಿದಿದೆ. ಬಿತ್ತನೆಯೂ ನಡೆದಿಲ್ಲ. ಹೆಚ್ಚಾದ ಉಷ್ಣಾಂಶದಿಂದ ನೀರಿನ ಕೊರತೆಯೂ ಕಾಡಿದೆ. ಇದು ಇಳುವರಿ ಮೇಲೆ ಪರಿಣಾಮ ಬೀರಲಿದೆ ‌ಎಂಬ ಆತಂಕ ರೈತರದ್ದು. 

‘ಕೃಷಿ ಭೂಮಿಯತ್ತ ದುಂಬಿ, ಜೇನು, ಕೀಟ ಆಕರ್ಷಿಸಲು ಯಾವುದೇ ರಾಸಾಯನಿಕ ಸಿಗದು. ಆದರೆ, ತೋಟ, ಹೊಲ, ಗದ್ದೆಗಳ ಬದುಗಳಲ್ಲಿ ನುಗ್ಗೆ, ಕುಂಬಳ, ಹೀರೇಕಾಯಿ, ಹಾಗಲಕಾಯಿ, ಚೆಂಡು ಹೂಗಳನ್ನು ಬೆಳೆದರೆ ದುಂಬಿ, ಜೇನ್ನೊಣಗಳನ್ನು ಆಕರ್ಷಿಸಬಹುದು’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಎಸ್.ರಾಜು ‘ಪ್ರಜಾವಾಣಿ’ಗೆ ತಿಳಿಸಿದರು. 

ಕಬ್ಬಿನ ರಸವನ್ನು ಕಾಯಿಸುವ ಕೊಪ್ಪರಿಗೆಗೆ ಮುತ್ತಿರುವ ಜೇನ್ನೊಣಗಳು
ಕಬ್ಬಿನ ರಸವನ್ನು ಕಾಯಿಸುವ ಕೊಪ್ಪರಿಗೆಗೆ ಮುತ್ತಿರುವ ಜೇನ್ನೊಣಗಳು

ಕಬ್ಬಿನ ಹಾಲು, ಜೋನಿ ಬೆಲ್ಲಕ್ಕೆ ನೊಣದ ದಂಡು ಶ್ರಮಿಕರ ನೆಮ್ಮದಿಗೂ ಭಂಗ

ಆಲೆಮನೆ ಮುತ್ತುವ ಜೇನ್ನೊಣ! ಈಗ ಆಲೆಮನೆಗಳಿಗೆ ತೆರಳಿದರೆ ಸಾವಿರಾರು ಜೇನ್ನೊಣಗಳು ಗುಂಯ್ ಗುಟ್ಟುವುದನ್ನು ಕಾಣಬಹುದು. ಇಲ್ಲಿ ಸದಾ ಸಿಗುವ ಸಿಹಿ ತಣ್ಣನೆ ನೀರು ಹಾಗೂ ನೆರಳು ಜೇನು ಸಂತತಿಗೆ ವರವಾಗಿದೆ. ಇದೇ ವೇಳೆ ಇಲ್ಲಿ ದುಡಿಯುವ ಕಾರ್ಮಿಕರಿಗೂ ಜೇನ್ನೊಣಗಳ ಜೊತೆ ಸಹಬಾಳ್ವೆ ಮಾಡುವುದು ಅನಿವಾರ್ಯ ಆಗಿದೆ.  ‘ಮೈಕೈ ಮೇಲೆ ಕುಳಿತರೂ ನೊಣಗಳು‌ ಅಷ್ಟಾಗಿ ತೊಂದರೆ ಕೊಡದು. ಆದರೆ ಸದಾ ಕೆಲಸದ ಸ್ಥಳದಲ್ಲಿ ಮುತ್ತುವುದರಿಂದ ಕೆಲಸ ನಿಧಾನವಾಗುತ್ತಿದೆ. ಕೆಲವೊಮ್ಮೆ ಕಚ್ಚಿದರೂ ಸಹಿಸಿಕೊಳ್ಳಬೇಕು. ಕೊಪ್ಪರಿಗೆ ಬೆಲ್ಲದ ಅಚ್ಚು ನೆಲಪೂರ್ತಿ ಜೇನು ಹುಳಗಳ ಸಾಮ್ರಾಜ್ಯವೇ ಮನೆ ಮಾಡಿದೆ. ಮಳೆ ಸುರಿದು ಪರಿಸರದಲ್ಲಿ ಹೂ ಗಿಡಗಳು ಕಾಣುವ ತನಕ ಈ ಸಮಸ್ಯೆ ಇರುತ್ತದೆ. ಜೇನ್ನೊಣಗಳಿಗೆ ಹೆದರಿದರೆ ದಿನದ ದುಡಿಮೆ ಮತ್ತು ಕೂಲಿ ಕೈತಪ್ಪುತ್ತದೆ’ ಎಂದು ಗೂಳಿಪುರ ಚಾಮುಂಡನಾಯಕ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT