ಗುರುವಾರ , ಆಗಸ್ಟ್ 18, 2022
26 °C
ಹಳೆಯ ಕಟ್ಟಡಗಳಲ್ಲಿ ಸೌಕರ್ಯಗಳ ಕೊರತೆ, ಬಾಡಿಗೆ ಮನೆ ಇಷ್ಟ ಪಡುವ ಅಧಿಕಾರಿಗಳು

ಪೊಲೀಸ್‌ ವಸತಿಗೃಹ: ನಗರದಲ್ಲಿ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್‌ ಸಿಬ್ಬಂದಿಗಾಗಿ ಇಲಾಖೆ ನಿರ್ಮಿಸಿರುವ ವಸತಿ ಗೃಹಗಳಿಗೆ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಹೆಚ್ಚು ಬೇಡಿಕೆ ಇದೆ. ಆದರೆ, ಸಾಕಷ್ಟು ಸಂಖ್ಯೆಯಲ್ಲಿ ಇಲ್ಲ. 

ಹೋಬಳಿ ಮಟ್ಟದಲ್ಲಿ ವಸತಿಗೃಹಗಳಿದ್ದರೂ, ಅಲ್ಲಿ ಉಳಿದುಕೊಳ್ಳಲು ಮನಸ್ಸು ಮಾಡುವ ಸಿಬ್ಬಂದಿ ಕಡಿಮೆ. ಹಾಗಾಗಿ, ಸರ್ಕಾರಿ ನಿವಾಸಗಳಿದ್ದರೂ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ.

ನಗರದ ವಸತಿ ಗೃಹಗಳಿಗೆ ಬೇಡಿಕೆ: ಜಿಲ್ಲೆಯಲ್ಲಿ 1,200ರಷ್ಟು ಪೊಲೀಸ್‌ ಸಿಬ್ಬಂದಿ ಇದ್ದಾರೆ. ಠಾಣೆಗಳಿರುವ ಊರುಗಳಲ್ಲೇ ವಸತಿಗೃಹಗಳನ್ನು ನಿರ್ಮಿಸಲಾಗಿದೆ.

ಒಟ್ಟು ಸಿಬ್ಬಂದಿಯ ಪೈಕಿ ಶೇ 50ಕ್ಕೂ ಹೆಚ್ಚು ಮಂದಿ ಜಿಲ್ಲಾ ಕೇಂದ್ರದಲ್ಲೇ ಇದ್ದಾರೆ. ಚಾಮರಾಜನಗರದಲ್ಲಿ ಮೂರು ಕಡೆ ಪೊಲೀಸ್‌ ವಸತಿ ಪ್ರದೇಶಗಳಿದ್ದು, ಒಟ್ಟು 388 ಮನೆಗಳಿವೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಪಕ್ಕ (50), ರಾಮಸಮುದ್ರ (93) ಹಾಗೂ ಸಶಸ್ತ್ರ ಮೀಸಲು ಪಡೆ ಪ್ರಧಾನ ಕಚೇರಿ ಆವರಣದಲ್ಲಿ (245) ವಸತಿ ಗೃಹಗಳಿವೆ.

‘ನಗರ, ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿರುವ ವಸತಿ ಗೃಹಗಳೆಲ್ಲ ಭರ್ತಿಯಾಗುತ್ತವೆ. ಆದರೆ, ಹೋಬಳಿ ಕೇಂದ್ರಗಳಲ್ಲಿರುವ ಮನೆಗಳಲ್ಲಿ ವಾಸ್ತವ್ಯ ಹೂಡಲು ಸಿಬ್ಬಂದಿ ಒಪ್ಪುವುದಿಲ್ಲ. ರಾಮಾಪುರ, ಮಹದೇಶ್ವರ ಬೆಟ್ಟದಂತಹ ಪ್ರದೇಶದಲ್ಲಿ ಒತ್ತಾಯ ಮಾಡಿದರೂ ಸಿಬ್ಬಂದಿ ಉಳಿದುಕೊಳ್ಳುವುದಿಲ್ಲ’ ಎಂದು ಹೇಳುತ್ತಾರೆ ಉನ್ನತ ಅಧಿಕಾರಿಗಳು. 

‘ಹೋಬಳಿ, ಗ್ರಾಮೀಣ ಭಾಗದಲ್ಲಿರುವ ವಸತಿಗೃಹಗಳಲ್ಲಿ ಕುಟುಂಬದೊಂದಿಗೆ ಉಳಿಯುವುದು ಕಷ್ಟ. ಮಕ್ಕಳು ನಗರ, ಪಟ್ಟಣ ಪ್ರದೇಶದಲ್ಲಿ ಶಿಕ್ಷಣ ಪಡೆಯುತ್ತಿರುತ್ತಾರೆ. ಹೆಚ್ಚಿನ ಸಿಬ್ಬಂದಿ ಪ್ರತಿದಿನ ಜಿಲ್ಲಾ ಅಥವಾ ತಾಲ್ಲೂಕು ಕೇಂದ್ರಗಳಿಂದ ತಮ್ಮ ಠಾಣೆಗೆ ಹೋಗಿ ಬರುತ್ತಾರೆ. ರಾತ್ರಿ ಪಾಳಿ, ವಿಶೇಷ ಕಾರ್ಯಾಚರಣೆ ಹಾಗೂ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಕರ್ತವ್ಯದಲ್ಲಿರುವ ಕೇಂದ್ರ ಸ್ಥಾನದಲ್ಲಿರುತ್ತಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ ಹೇಳುತ್ತಾರೆ. 

‘ಹಿಂದೆ ನಗರ ಪ್ರದೇಶಗಳಂತೆ ಠಾಣೆಗಳಿರುವ ಹೋಬಳಿ ಕೇಂದ್ರಗಳಲ್ಲಿ ವಸತಿಗೃಹಗಳನ್ನು ನಿರ್ಮಿಸಲಾಗಿತ್ತು. ಈಗ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ವಸತಿಗೃಹಗಳಿಗೆ ಬೇಡಿಕೆ ಇರುವುದರಿಂದ ಇನ್ನು ಮುಂದೆ ತಾಲ್ಲೂಕು ಕೇಂದ್ರಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲೇ ವಸತಿಗೃಹಗಳನ್ನು ನಿರ್ಮಿಸಲು ಒತ್ತು ನೀಡಲಾಗುವುದು’ ಎಂಬುದು ಹಿರಿಯ ಅಧಿಕಾರಿಗಳ ಮಾತು.  

ಬಾಡಿಗೆ ಮನೆಯಲ್ಲಿ ಅಧಿಕಾರಿಗಳು

ಕಾನ್‌ಸ್ಟೆಬಲ್‌ಗಳು ಸೇರಿದಂತೆ ಇತರ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿಗೃಹಗಳಲ್ಲಿ ವಾಸಿಸುತ್ತಾರೆ. ಜಿಲ್ಲೆಯಲ್ಲೇ ಸ್ವಂತ ಮನೆಗಳನ್ನು ಹೊಂದಿರುವ ಸಿಬ್ಬಂದಿಯೂ ಇದ್ದಾರೆ.  ಎಸ್‌ಪಿ, ಎಎಸ್‌ಪಿ, ಡಿವೈೆಎಸ್‌ಪಿಯವರು ವಸತಿಗೃಹದಲ್ಲಿದ್ದಾರೆ. ಸಬ್‌ ಇನ್‌ಸ್ಪೆಕ್ಟರ್‌ಗಳು, ಇನ್‌ಸ್ಪೆಕ್ಟರ್‌ಗಳಲ್ಲಿ ಹೆಚ್ಚಿನವರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ವಸತಿಗೃಹ ಕೊರತೆ ಇದಕ್ಕೆ ಒಂದು ಕಾರಣವಾದರೆ, ವಸತಿಗೃಹದಲ್ಲಿ ಇರಲು ಇಚ್ಛೆ ಪಡದ ಅಧಿಕಾರಿಗಳು ಬಾಡಿಗೆ ಮನೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

‘ಚಿಕ್ಕ ಮನೆಗಳಾಗಿರುವುದರಿಂದ ಜಾಗದ ಕೊರತೆ ಇದೆ. ಮಕ್ಕಳೊಂದಿಗೆ ಕುಟುಂಬ ಸಮೇತ ಇರುವುದು ಕಷ್ಟ’ ಎಂಬುದು ಬಹುತೇಕರು ನೀಡುವ ಕಾರಣ. 

‘ಮೊದಲೆಲ್ಲ ಸಿಬ್ಬಂದಿ ಅಧಿಕಾರಿಗಳ ಶ್ರೇಣಿಗೆ ಅನುಸಾರವಾಗಿ ಒಂದು ಮಲಗುವ ಕೋಣೆಯ ಮನೆ, ಎರಡು ಮಲಗುವ ಕೋಣೆಗಳ ಮನೆ ಎಂದು ಹಂಚಿಕೆ ಮಾಡಲಾಗುತ್ತಿತ್ತು. ಆದರೆ, ಈಗ ಹಾಗಿಲ್ಲ. ಎಲ್ಲರಿಗೂ ಒಂದೇ ರೀತಿಯ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈಗ ಸಂಕೀರ್ಣದ ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಆಧುನಿಕ ಎಲ್ಲ ಸೌಲಭ್ಯಗಳು ಇವೆ. ಗುಣಮಟ್ಟವೂ ಚೆನ್ನಾಗಿದೆ’ ಎಂದು ಹೇಳುತ್ತಾರೆ ಸಿಬ್ಬಂದಿ.

ಹಳೆಯ ಮನೆ; ನಿರ್ವಹಣೆ ಸಮಸ್ಯೆ

ಚಾಮರಾಜನಗರ, ಕೊಳ್ಳೇಗಾಲ ಸೇರಿದಂತೆ ಕೆಲವು ಕಡೆಗಳಲ್ಲಿ ಹಳೆಯ ವಸತಿಗೃಹಗಳಿವೆ. ಇಲ್ಲಿ ಸಮಸ್ಯೆಗಳೂ ಇವೆ.

ಚಾಮರಾಜನಗರದಲ್ಲಿ ಎಸ್‌ಪಿ ಕಚೇರಿಯ ಪಕ್ಕದಲ್ಲೇ ಹಳೆಯ ಹೆಂಚಿನ ಮನೆಗಳಿವೆ. ಇಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ. ಪಿಟ್‌ ನಿರ್ಮಿಸಿ ಶೌಚಾಲಯದ ಸಂಪರ್ಕ ನೀಡಲಾಗಿದೆ. ಹಳೆಯ ಮನೆಗಳಾಗಿರುವುದರಿಂದ ಮಳೆಗಾಲದಲ್ಲಿ ಸೋರುತ್ತವೆ. ಮನೆಗಳ ಮುಂಭಾಗದ ರಸ್ತೆ ಇನ್ನೂ ಅಭಿವೃದ್ಧಿಯಾಗಿಲ್ಲ.  

ಕೊಳ್ಳೇಗಾಲದ ಪೊಲೀಸ್ ವಸತಿ ಗೃಹಗಳ ವ್ಯಾಪ್ತಿಯಲ್ಲಿ ಸ್ವಚ್ಛತೆಯ ಕೊರತೆ ಇದೆ.  ವಸತಿ ಗೃಹದ ಸುತ್ತಲು ಸ್ವಚ್ಛತೆ ಮರಿಚೀಕೆಯಾಗಿದೆ. ಆಳೆತ್ತರದ ಗಿಡಗಳು ಬೆಳೆದಿವೆ. ಕೆಲವರು ರಸ್ತೆಯ ಮಧ್ಯದಲ್ಲೇ ಕಸವನ್ನು ಬಿಸಾಡುತ್ತಾರೆ. ಚರಂಡಿಯೂ ಸ್ವಚ್ಛವಾಗಿಲ್ಲ. ಒಳಚರಂಡಿ ಸಮಸ್ಯೆಯೂ ಇದೆ. 

‘ವಸತಿ ಗೃಹದಲ್ಲಿ ಕಸ ಸಂಗ್ರಹಣೆ ಸರಿಯಾಗಿ ಆಗುತ್ತಿಲ್ಲ. ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಾರೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ’ ಎಂದು ಕಾನ್‌ಸ್ಟೆಬಲ್‌ ಒಬ್ಬರು ಹೇಳಿದರು. 

ಯಳಂದೂರಿನಲ್ಲಿರುವ ಹಳೆಯ ವಸತಿ ಗೃಹಗಳ ಸುತ್ತಲೂ ಗಿಡಗಂಟಿಗಳು ಬೆಳೆದಿವೆ. ಸೋಲಾರ್ ಮತ್ತು ನೀರಿನ ಸಮಸ್ಯೆಗಳು ಬಾಧಿಸುತ್ತವೆ. ಕೆಲವು ಕೊಠಡಿಗಳಲ್ಲಿ ಮಳೆ ಬಂದರೆ ನೀರು ಜಿನುಗುತ್ತಿದೆ. ಹತ್ತು ಹಲವು ಸಮಸ್ಯೆಗಳ ನಡುವೆ ಪೋಲಿಸ್‌ ಸಿಬ್ಬಂದಿ ವಾಸವಾಗಿದ್ದಾರೆ.

ಹಂತ ಹಂತವಾಗಿ ನಿರ್ಮಾಣ: ಎಸ್‌ಪಿ

‘ಪೊಲೀಸ್‌ ಸಿಬ್ಬಂದಿಗೆ ವಸತಿಗೃಹಗಳ ಕೊರತೆ ಇರುವುದು ನಿಜ. ಎಲ್ಲ ಜಿಲ್ಲೆಗಳಲ್ಲೂ ಇದೇ ಸ್ಥಿತಿ ಇದೆ. ಮೊದಲಿನಿಂದಲೂ ಹಂತ ಹಂತವಾಗಿ ವಸತಿಗೃಹಗಳನ್ನು ನಿರ್ಮಿಸುತ್ತಾ ಬರಲಾಗಿದೆ. ಇಲಾಖೆ ರಾಜ್ಯದಾದ್ಯಂತ ನಿರ್ದಿಷ್ಟ ಸಂಖ್ಯೆ ಮನೆಗಳನ್ನು ನಿರ್ಮಿಸಲು ನಿರ್ಧರಿಸುತ್ತದೆ. ಅವುಗಳಲ್ಲಿ ಜಿಲ್ಲಾವಾರು ಮನೆಗಳನ್ನು ಹಂಚಲಾಗುತ್ತದೆ. ಉದಾಹರಣೆಗೆ ರಾಜ್ಯದಲ್ಲಿ 1,000 ಮನೆಗಳನ್ನು ನಿರ್ಮಿಸಲು ತೀರ್ಮಾನ ಕೈಗೊಂಡರೆ, ಆ ಪೈಕಿ ಒಂದಷ್ಟು ಮನೆಗಳು ನಮ್ಮ ಜಿಲ್ಲೆಗೂ ಮಂಜೂರಾಗುತ್ತವೆ. ಜಿಲ್ಲೆಯ ಅಗತ್ಯದ ಬಗ್ಗೆ ನಾವು ಪ್ರಸ್ತಾವ ಕಳುಹಿಸುತ್ತಿರುತ್ತೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷ ಚಾಮರಾಜನಗರ ಹಾಗೂ ಸಂತೇಮರಹಳ್ಳಿಯಲ್ಲಿ ನೂತನ ವಸತಿಗೃಹ ಸಂಕೀರ್ಣಗಳನ್ನು ಉದ್ಘಾಟಿಸಲಾಗಿತ್ತು. ಈ ವರ್ಷ 48 ಮನೆಗಳಿಗೆ ಪ್ರಸ್ತಾವ ಕಳುಹಿಸಿದ್ದೇವೆ. ವಸತಿಗೃಹಗಳು ಅಥವಾ ಸಂಕೀರ್ಣಗಳ ದುರಸ್ತಿ, ನಿರ್ವಹಣೆಯನ್ನು ಇಲಾಖೆ ಕಾಲಕಾಲಕ್ಕೆ ನಡೆಸುತ್ತದೆ’ ಎಂದು ಹೇಳಿದರು.

ನಿರ್ವಹಣೆ: ಸೂರ್ಯನಾರಾಯಣ ವಿ. 

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಅವಿನ್ ಪ್ರಕಾಶ್‌, ಮಹದೇವ್ ಹೆಗ್ಗವಾಡಿಪುರ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು