ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇನಲ್ಲಿ ಕೈಕೊಟ್ಟ ಮಳೆ: ಮಳೆ ನಿಧಾನ- ಗುರಿ ತಲುಪೀತೇ ಬಿತ್ತನೆ?

ದ್ವಿದಳ ಧಾನ್ಯಗಳ ಬಿತ್ತನೆ ಮಾಡದ ರೈತರು
Last Updated 18 ಆಗಸ್ಟ್ 2021, 16:38 IST
ಅಕ್ಷರ ಗಾತ್ರ

ಚಾಮರಾಜನಗರ: ಮುಂಗಾರು ಪೂರ್ವ ಮಳೆ ಕೈಕೊಟ್ಟಿದ್ದರಿಂದ ಜಿಲ್ಲೆಯ ಗುಂಡ್ಲುಪೇಟೆ, ಹನೂರು ತಾಲ್ಲೂಕುಗಳ ರೈತರು ಅನುಭವಿಸಿದ ಪರಿಸ್ಥಿತಿಯನ್ನೇ ಚಾಮರಾಜನಗರ ತಾಲ್ಲೂಕಿನ ಕೃಷಿಕರೂ ಅನುಭವಿಸುತ್ತಿದ್ದಾರೆ.

ಮೇ ತಿಂಗಳಲ್ಲಿ ಸರಿಯಾಗಿ ಮಳೆಯಾಗದೇ ಇದ್ದುದರಿಂದ, ಮುಂಗಾರು ಅವಧಿಯಲ್ಲಿ ಉತ್ತಮ ಮಳೆಯಾದರೂ ರೈತರಿಗೆ ವ್ಯವಸಾಯದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಆಗಿಲ್ಲ.

ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಐದು ಹೋಬಳಿಗಳಲ್ಲಿ ಶೇ 95ರಷ್ಟು ಕೃಷಿ ಭೂಮಿ ಮಳೆಯಾಶ್ರಿತವಾಗಿದೆ. ರೈತರು ಮಳೆಯನ್ನೇ ಅವಲಂಬಿಸಿ ಜೋಳ, ಮುಸುಕಿನ ಜೋಳ, ರಾಗಿ, ಉದ್ದು, ಹುರುಳಿ, ಹೆಸರು, ನೆಲಗಡೆ, ಸೂರ್ಯಕಾಂತಿಯನ್ನು ಪ್ರಮುಖವಾಗಿ ಬೆಳೆಯುತ್ತಾರೆ. ನಾಲೆ ನೀರು ಲಭ್ಯವಿರುವ ಸಂತೇಮರಹಳ್ಳಿ ಹೋಬಳಿಯಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ.

‘ರೈತರು ಉದ್ದು, ಹುರುಳಿ, ಹೆಸರು ಮುಂತಾದ ದ್ವಿದಳ ಧಾನ್ಯಗಳನ್ನು ಮುಂಗಾರು ಪೂರ್ವ ಅವಧಿಯಲ್ಲಿ ಅಂದರೆ ಏಪ್ರಿಲ್‌– ಮೇ ತಿಂಗಳಲ್ಲಿ ಬಿತ್ತನೆ ಮಾಡುತ್ತಾರೆ. ಈ ಬಾರಿ ಏಪ್ರಿಲ್‌ನಲ್ಲಿ ಸ್ವಲ್ಪ ಮಳೆಯಾಗಿತ್ತು. ಮೇ ತಿಂಗಳಲ್ಲಿ ಶೇ 56ರಷ್ಟು ಮಳೆ ಕೊರತೆ ಉಂಟಾಗಿತ್ತು. ಹೀಗಾಗಿ ರೈತರು ಉದ್ದು, ಹೆಸರು, ಹುರುಳಿಗಳನ್ನು ಬಿತ್ತನೆ ಮಾಡಿಲ್ಲ. ರೈತ ಸಂಪರ್ಕ ಕೇಂದ್ರಗಳಿಂದ ಬಿತ್ತನೆ ಬೀಜ ಖರೀದಿಸಿದ್ದ ರೈತರು ಮಳೆ ಬಾರದ ಕಾರಣಕ್ಕೆ ಬಿತ್ತನೆ ಮಾಡಿಲ್ಲ. ಇದು ಕೃಷಿ ಚಟುವಟಿಕೆಯ ಮೇಲೆ ಪರಿಣಾಮ ಬೀರಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಬಿ.ಸಂದೀಪ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕಿನಲ್ಲಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ 26,455 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದ್ದು, 12,612 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಶೇಕಡವಾರು ಲೆಕ್ಕಾಚಾರದಲ್ಲಿ 48ರಷ್ಟು ಮಾತ್ರ ಬಿತ್ತನೆಯಾಗಿದೆ.

ಆಗಸ್ಟ್‌ನಲ್ಲಿ ಹೆಚ್ಚು ಮಳೆಯಾಗಿರುವುದರಿಂದ ಕೃಷಿ ಚುರುಕುಗೊಂಡಿದ್ದು, ರೈತರು ಜೋಳ, ರಾಗಿ ಬಿತ್ತನೆ ಬೀಜಗಳನ್ನು ಖರೀದಿಸುತ್ತಿದ್ದಾರೆ. ತಿಂಗಳ ಅಂತ್ಯಕ್ಕೆ ಬಿತ್ತನೆ ಪ್ರಮಾಣ ಶೇ 70 ದಾಟಬಹುದು ಎಂದು ಹೇಳುತ್ತಾರೆ ಅಧಿಕಾರಿಗಳು.

ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 850 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದ್ದು, ಇದುವರೆಗೆ ನಾಟಿ ಕೆಲಸ ಆರಂಭವಾಗಿಲ್ಲ.

ವಾಡಿಕೆಗಿಂತ ಹೆಚ್ಚು ಮಳೆ: ತಾಲ್ಲೂಕಿನಲ್ಲಿ ಈ ಬಾರಿ ವಾಡಿಕೆಗಿಂದ ಹೆಚ್ಚು ಮಳೆಯಾಗಿದೆ. ಮುಂಗಾರು ಅವಧಿಯಲ್ಲೂ ಶೇ 61ರಷ್ಟು ಹೆಚ್ಚು ಮಳೆ ಸುರಿದಿದೆ. ಜನವರಿಯಿಂದ ಆಗಸ್ಟ್‌ 18ರವರೆಗಿನ ಅವಧಿಯಲ್ಲಿ ಸಾಮಾನ್ಯವಾಗಿ 34.29 ಸೆಂ.ಮೀ ಮಳೆಯಾಗುತ್ತದೆ. ಈ ಬಾರಿ 38.12 ಸೆಂ.ಮೀ ಮಳೆ ಸುರಿದಿದೆ. ಶೇ 11ರಷ್ಟು ಹೆಚ್ಚು ಮಳೆ ಬಿದ್ದಿದೆ.

ಜೋಳಕ್ಕೆ ಸೈನಿಕ ಹುಳು ಬಾಧೆ

ಈ ಮಧ್ಯೆ, ಜೋಳದ ಬೆಳೆಗೆ ತಾಲ್ಲೂಕಿನ ಅಲ್ಲಲ್ಲಿ ಸೈನಿಕ ಹುಳುವಿನ ಬಾಧೆ ಕಾಣಿಸಿಕೊಂಡಿದೆ. ಹುಳುಗಳು ಗಿಡದ ತಿರುಳು, ಎಲೆಗಳನ್ನು ಕೊರೆಯುತ್ತಿವೆ.

‘ಸೈನಿಕ ಹುಳುವಿನ ಕಾಟದಿಂದ ಬೆಳೆಯನ್ನು ಮುಕ್ತಗೊಳಿಸಲು ರೈತರು ಇಮಾಮೆಕ್ಟೀನ್‌ ಬೆಂಜೊಯೇಟ್‌ ಎಂಬ ಕ್ರಿಮಿನಾಶಕವನ್ನು ಸಿಂಪಡಿಸಬೇಕಾಗುತ್ತದೆ. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಇದು ಲಭ್ಯವಿದ್ದು, ರೈತರು ಭೇಟಿ ನೀಡಿ ಖರೀದಿ ಮಾಡಬಹುದು’ ಎಂದು ಸಂದೀಪ್‌ ಅವರು ಮಾಹಿತಿ ನೀಡಿದರು.

--------------

ರೈತರು ಗದ್ದೆಗಳನ್ನು ಉಳುಮೆ ಮಾಡಿದ್ದಾರೆ. ಸಸಿಮಡಿ ತಯಾರಿ ಮಾಡಿಕೊಳ್ಳುತ್ತಿದ್ದು ಶೀಘ್ರ ಭತ್ತದ ನಾಟಿ ಆರಂಭಿಸಲಿದ್ದಾರೆ

- ಕೆ.ಬಿ.ಸಂದೀಪ್‌, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT