ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ– ನೆಹರು ಹೋಲಿಕೆ ಬೇಡ; ಸಂಸದ ಶ್ರೀನಿವಾಸಪ್ರಸಾದ್

Last Updated 8 ಜೂನ್ 2022, 2:35 IST
ಅಕ್ಷರ ಗಾತ್ರ

ಚಾಮರಾಜನಗರ: ‘ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಗೆ ದೂರದೃಷ್ಟಿ ಇದೆ. ಉತ್ತಮ ನಾಯಕತ್ವ ಇದೆ. ಪ್ರಧಾನಿ ಮೋದಿ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಹಾಗಾಗಿ, ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಪದವೀಧರರು ಪಕ್ಷದ ಅಭ್ಯರ್ಥಿ ಮೈ.ವಿ.ರವಿಶಂಕರ್‌ ಅವರನ್ನು ಬೆಂಬಲಿಸಬೇಕು’ ಎಂದು ಸಂಸದ ವಿ.ಶ್ರೀನಿವಾಸ ಪ‍್ರಸಾದ್‌ ಮಂಗಳವಾರ ಮನವಿ ಮಾಡಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎಂಟು ವರ್ಷಗಳ ಆಡಳಿತವನ್ನು ಶ್ಲಾಘಿಸಿದರು.

‘ಮೋದಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಮನಮೋಹನ್‌ ಸಿಂಗ್‌ ಅವರ ಆಡಳಿತದಲ್ಲಿ ಸಾವಿರಾರು ಕೋಟಿ ರೂಪಾಯಿ ಮೊತ್ತದ ಹಗರಣಗಳು ನಡೆದಿತ್ತು. ಮೋದಿ ಸರ್ಕಾರದ ಎಂಟು ವರ್ಷಗಳ ಆಡಳಿತದಲ್ಲಿ ಒಂದು ಹಗರಣವೂ ನಡೆದಿಲ್ಲ. ಇದೇ ಕಾರಣಕ್ಕೆ ಐದು ರಾಜ್ಯಗಳಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಉತ್ತಮ ಆಡಳಿತ ನೀಡಿದ್ದಾರೆ. ಆ ಕಾರಣಕ್ಕೆ ಅವರು ಅಲ್ಲಿ ಮತ್ತೆ ಗೆದ್ದಿದ್ದಾರೆ’ ಎಂದರು.

ಹೋಲಿಕೆ ಬೇಡ: ‘ನೆಹರು ಅವರು ಪ್ರಧಾನಿಯಾದ ನಂತರ ಪ್ರಧಾನಿ ಮೋದಿ ಹುಟ್ಟಿದ್ದಾರೆ. ಹಾಗಾಗಿ, ನೆಹರು ಹಾಗೂ ಮೋದಿ ಅವರ ನಡುವೆ ಹೋಲಿಕೆ ಮಾಡುವುದು ಬೇಡ. ಇವತ್ತಿನ ಪರಿಸ್ಥಿತಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಮೋದಿ ಅವರ ನಡುವೆ ಹೋಲಿಕೆ ಮಾಡಬೇಕು. ಜನರು ಎಲ್ಲವನ್ನೂ ಯೋಚನೆ ಮಾಡುತ್ತಾರೆ. ಕಾಂಗ್ರೆಸ್‌ನ ನಾಯಕತ್ವ ದುರ್ಬಲವಾಗಿದೆ’ ಎಂದು
ಟೀಕಿಸಿದರು.

‘ಕಾಂಗ್ರೆಸ್‌ ಇತ್ತೀಚೆಗೆ ರಾಜಸ್ಥಾನದಲ್ಲಿ ಚಿಂತನ ಶಿಬಿರ ನಡೆಸಿತು. ಇಬ್ಬರನ್ನು ಕಾಂಗ್ರೆಸ್‌ ಕೇಂದ್ರ ಸಮಿತಿಗೆ ಸೇರಿಸಿದ್ದು ಬಿಟ್ಟರೆ ಅಲ್ಲಿ ಬೇರೇನೂ ನಡೆದಿಲ್ಲ. ನಮ್ಮ ರಾಜ್ಯ ನಾಯಕರು ಸುಮ್ಮನೆ ಭಾಷಣೆ ಮಾಡುತ್ತಾರೆ. ಬಿಜೆಪಿ ಬಿಟ್ಟರೆ ಕೇಂದ್ರದಲ್ಲಿ ಬಲಿಷ್ಠ ರಾಜಕೀಯ ಪಕ್ಷಗಳಿಲ್ಲ. ಮೋದಿ ಸರ್ಕಾರ ಕೋವಿಡ್‌ ಸಮಯದಲ್ಲಿ ಮೂಲೆ ಗುಂಪಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಚೆನ್ನಾಗಿ ಕೆಲಸ ಮಾಡಿತು. ಇನ್ನೂ ಎರಡು ವರ್ಷಗಳ ಆಡಳಿತ ಇದೆ. ಜನರ ಮನಸ್ಸನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಪದವೀಧರರು ಇದನ್ನು ಯೋಚನೆ ಮಾಡಬೇಕು. ಪದವೀಧರರ ಕ್ಷೇತ್ರದಲ್ಲಿ ನಮಗೆ ಬೆಂಬಲ ಕೊಡಬೇಕು’ ಎಂದರು.

ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಆರ್‌.ಸುಂದರ್‌, ಕೇಂದ್ರ ಬರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಹಾಸನ ಜಿಲ್ಲಾ ಪ್ರಭಾರಿ ನಿಜಗುಣರಾಜು, ಮುಖಂಡರಾದ ಮಲ್ಲೇಶ್‌, ಹನುಮಂತ ಶೆಟ್ಟೆ, ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್‌, ಧೀರಜ್‌ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT