ಮಂಗಳವಾರ, ಅಕ್ಟೋಬರ್ 20, 2020
26 °C
ಅನುದಾನ ಘೋಷಿಸದ ಸರ್ಕಾರ, ಒಂದು ಗಂಟೆಯ ಸಾಂಸ್ಕೃತಿಕ ಕಾರ್ಯಕ್ರಮಕ್ಕಷ್ಟೇ ಸೀಮಿತ

ಚಾಮರಾಜನಗರ: ಸರಳ ದಸರಾಗೆ ಸಿದ್ಧತೆ, ನಾಳೆ ಚಾಲನೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌ ಕಾರಣಕ್ಕೆ ಜಿಲ್ಲೆಯಲ್ಲೂ ಈ ಬಾರಿ ದಸರಾ ಸರಳ ಆಚರಣೆಗಷ್ಟೇ ಸೀಮಿತವಾಗಿದ್ದು, ಶನಿವಾರ ಚಾಲನೆ ಸಿಗಲಿದೆ.

17ರಿಂದ 20ರವರೆಗೆ ಸಾಂಪ್ರದಾಯಿಕ ಹಾಗೂ ಸರಳವಾಗಿ ಜಿಲ್ಲಾ ದಸರಾ ಆಚರಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. 

ಶನಿವಾರ ಬೆಳಿಗ್ಗೆ ಚಾಮರಾಜೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ದಸರಾ ಉದ್ಘಾಟನೆಗೊಳ್ಳಲಿದೆ. 

ನಾಲ್ಕು ದಿನಗಳ ಕಾಲ ರಾತ್ರಿ 7ರಿಂದ 8 ಗಂಟೆಯವರೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲು ತೀರ್ಮಾನಿಸಲಾಗಿದೆ. ಚಾಮರಾಜರಾಜೇಶ್ವರ ಸ್ವಾಮಿ ದೇವಾಲಯದ ಒಳ ಆವರಣದಲ್ಲೇ ವೇದಿಕೆ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇದು ಬಿಟ್ಟು, ಬೇರೇನೂ ವಿಶೇಷ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಹಮ್ಮಿಕೊಂಡಿಲ್ಲ.

ಅನುದಾನ ಘೋಷಿಸದ ಸರ್ಕಾರ: ಪ್ರತಿ ವರ್ಷ ಸರ್ಕಾರ ಜಿಲ್ಲಾ ದಸರಾ ಮಹೋತ್ಸವಕ್ಕಾಗಿ ‌ಅನುದಾನ ಘೋಷಿಸುತ್ತಿತ್ತು. ಎರಡು ವರ್ಷಗಳಿಂದ ತಲಾ ₹1 ಕೋಟಿ ನೀಡಿತ್ತು. ಈ ವರ್ಷ ಕೋವಿಡ್‌ ಕಾರಣದಿಂದ ಮೈಸೂರಿನಲ್ಲೇ ಸರಳಾ ದಸರಾ ಆಚರಿಸುತ್ತಿರುವುದರಿಂದ, ಜಿಲ್ಲೆಗೆ ಅನುದಾನ ಘೋಷಿಸಿಲ್ಲ. 

ಅನುದಾನ ಲಭ್ಯವಿದ್ದುದರಿಂದ ಜಿಲ್ಲೆಯಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಕಲಾತಂಡಗಳ ಮೆರವಣಿಗೆ, ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮಗಳು, ರೈತ ದಸರಾ, ಮಹಿಳಾ ದಸರಾ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ದೀಪಾಲಂಕಾರ ಸೇರಿದಂತೆ ನಾಲ್ಕು ದಿನಗಳ ಕಾಲ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. 

ಈ ಬಾರಿ ಅನುದಾನ ಲಭ್ಯವಿಲ್ಲದೇ ಇರುವುದರಿಂದ ಎಲ್ಲ ಕಾರ್ಯಕ್ರಮಗಳನ್ನು ಕೈಬಿಡಲಾಗಿದೆ. 

ಸಾಂಸ್ಕೃತಿಕ ಕಾರ್ಯಕ್ರಮ: ಸ್ಥಳೀಯ ಕಲಾವಿದರಿಂದ ಒಂದು ಗಂಟೆ ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರ ನಡೆಸಲು ತೀರ್ಮಾನಿಸಲಾಗಿದೆ. ಆದರೆ, ಕಾರ್ಯಕ್ರಮಗಳು, ಕಲಾವಿದರ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. 

‘ಪ್ರತಿ ದಿನ ಸಂಜೆ 7 ಗಂಟೆಯಿಂದ 8 ಗಂಟೆವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬಹುತೇಕ ಗಾಯನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ. ಸ್ಥಳೀಯ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ದಸರಾದಲ್ಲಿ ಭಾಗವಹಿಸುವವರು ಕೂಡ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕು ಎಂದು ಸರ್ಕಾರದ ಸೂಚನೆ ಇರುವುದರಿಂದ ಕೆಲವು ಕಲಾವಿದರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಗಿರೀಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ವರ್ಚ್ಯುವಲ್‌ ಪ್ರಸಾರ: ಕಾರ್ಯಕ್ರಮದಲ್ಲಿ ಸೀಮಿತ ಆಸನಗಳ ವ್ಯವಸ್ಥೆ ಮಾಡಿ, ಜನರಿಗೆ ವೀಕ್ಷಿಸಲು ಅನುಕೂಲವಾಗುವಂತೆ ದೇವಾಲಯದ ಹೊರಗಡೆ ಬೃಹತ್‌ ಪರದೆ ಅಳವಡಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಫೇಸ್‌ಬುಕ್‌, ಕೇಬಲ್‌ ಚಾನೆಲ್‌ಗಳ ಮೂಲಕ ಕಾರ್ಯಕ್ರಮದ ನೇರಪ್ರಸಾರ ಮಾಡಲು ಸಿದ್ಧತೆ ನಡೆಸಿದೆ.

ದಸರಾ ಸಿದ್ಧತೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌ ಅವರು, ‘ಕೋವಿಡ್‌ ಕಾರಣದಿಂದ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲಾಗುವುದು. ಶನಿವಾರ ಬೆಳಿಗ್ಗೆ ದೇವಾಲಯದಲ್ಲಿ ಪೂಜೆ ನಡೆಸಲಾಗುವುದು. ಸಂಜೆ ಒಂದು ಗಂಟೆ ಸ್ಥಳೀಯ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ’ ಎಂದು ಹೇಳಿದರು. 

ದೀಪಾಲಂಕಾರ ಅನುಮಾನ

ದಸರಾ ಸಮಯದಲ್ಲಿ ಜಿಲ್ಲಾಡಳಿತ ಭವನ, ಬಿ.ರಾಚಯ್ಯ ಜೋಡಿ ರಸ್ತೆ, ಭುವನೇಶ್ವರಿ ವೃತ್ತ, ಚಾಮರಾಜೇಶ್ವರ ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳಿಗೆ ದೀಪಾಲಂಕಾರ ಮಾಡಲಾಗುತ್ತಿತ್ತು. ಈ ವರ್ಷವೂ ಅದೇ ರೀತಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು. 

ಪ್ರಯೋಜಕರ ನೆರವಿನಿಂದ ದೀಪಾಲಂಕಾರ ಮಾಡಿಸುವ ಪ್ರಯತ್ನವನ್ನು ಜಿಲ್ಲಾಡಳಿತ ಮಾಡಿತ್ತು. ಆದರೆ, ಇದುವರೆಗೆ ಯಾರೂ ಪ್ರಾಯೋಜರು ಮುಂದೆ ಬಂದಿಲ್ಲ‌ ಎಂದು ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ ದೀಪಾಲಂಕಾರದ ಕೆಲಸವನ್ನು ದಸರಾ ಆರಂಭಕ್ಕೂ ಎರಡು ಮೂರು ದಿನ ಮೊದಲೇ ಆರಂಭಿಸಲಾಗುತ್ತದೆ. ದಸರಾ ಆರಂಭಿಸಲು ಇನ್ನು ಒಂದೇ ದಿನ ಬಾಕಿ ಇದ್ದು, ಇದುವರೆಗೆ ದೀಪಾಲಂಕಾರಕ್ಕೆ ಸಂಬಂಧಿಸಿದ ಸಿದ್ಧತೆ ನಡೆದಿಲ್ಲ. ಹಾಗಾಗಿ, ದೊಡ್ಡ ಮಟ್ಟಿನ ಅಲಂಕಾರ ನಡೆಯುವುದು ಅನುಮಾನ. 

ಅನುದಾನ ಕೊರತೆ: ಕಳೆದ ವರ್ಷ ಸೆಸ್ಕ್‌ ವತಿಯಿಂದ ಅತ್ಯುತ್ತಮ ರೀತಿಯಲ್ಲಿ ದೀಪಲಂಕಾರ ಮಾಡಲಾಗಿತ್ತು. ಈ ಬಾರಿಯೂ ಸೆಸ್ಕ್‌ಗೆ ಸೂಚಿಸಲಾಗಿತ್ತು. ಆದರೆ, ಅನುದಾನದ ಅಗತ್ಯವಿದೆ ಎಂದು ಸೆಸ್ಕ್‌ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಕಳೆದ ವರ್ಷ ದೀಪಾಲಂಕಾರಕ್ಕಾಗಿ ₹25 ಲಕ್ಷ ಖರ್ಚು ಮಾಡಲಾಗಿತ್ತು. 

ದೀಪಾಲಂಕಾರದ ಬಗ್ಗೆ ಪ್ರತಿಕ್ರಿಯಿಸಿದ ಸಿ.ಎಲ್‌.ಆನಂದ್‌ ಅವರು, ‘ಲಭ್ಯವಿರುವ ಸಂಪನ್ಮೂಲದಲ್ಲಿ ದೀಪಗಳ ಅಲಂಕಾರ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು