ಶುಕ್ರವಾರ, 25 ಜುಲೈ 2025
×
ADVERTISEMENT
ADVERTISEMENT

ಭರಚುಕ್ಕಿ ಜಲಪಾತಕ್ಕೆ ಜೀವಕಳೆ: ಪ್ರವಾಸಿಗರ ಕಣ್ಣಿಗೆ ಹಬ್ಬ; ವ್ಯಾಪಾರವೂ ಜೋರು

ಪ್ರಕೃತಿ ಸೌಂದರ್ಯ ಸವಿಯಲು ಬರುತ್ತಿರುವ ಪ್ರವಾಸಿಗರ ದಂಡು
Published : 21 ಜೂನ್ 2025, 5:51 IST
Last Updated : 21 ಜೂನ್ 2025, 5:51 IST
ಫಾಲೋ ಮಾಡಿ
0
ಭರಚುಕ್ಕಿ ಜಲಪಾತಕ್ಕೆ ಜೀವಕಳೆ: ಪ್ರವಾಸಿಗರ ಕಣ್ಣಿಗೆ ಹಬ್ಬ; ವ್ಯಾಪಾರವೂ ಜೋರು
ಕೊಳ್ಳೇಗಾಲ ತಾಲ್ಲೂಕಿನ ಸುಪ್ರಸಿದ್ಧ ಭರಚುಕ್ಕಿ ಜಲಪಾತಕ್ಕೆ ಜೀವಕಳೆ ಬಂದಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ

ಕೊಳ್ಳೇಗಾಲ: ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯಗಳಿಂದ ನದಿಗೆ ನೀರು ಹರಿಬಿಟ್ಟಿರುವುದರಿಂದ ತಾಲ್ಲೂಕಿನ ಸುಪ್ರಸಿದ್ಧ ಭರಚುಕ್ಕಿ ಜಲಪಾತಕ್ಕೆ ಜೀವಕಳೆ ಬಂದಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ADVERTISEMENT
ADVERTISEMENT

ಕೇರಳದ ವಯನಾಡು ಸಹಿತ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದು ಕೂಡ ಭರಚುಕ್ಕಿ ಜಲಪಾತ ಮೈದುಂಬಿಕೊಳ್ಳಲು ಕಾರಣವಾಗಿದೆ. ಕಾನನದ ನಡುವೆ ಹಾಲ್ನೊರೆಯಂತೆ ಭೋರ್ಗರೆಯುತ್ತ ಧುಮ್ಮಿಕ್ಕುವ ಭರಚುಕ್ಕಿ ಜಲಪಾತದ ಸೊಬಗು ವರ್ಣನಾತೀತ. 

ಸದ್ಯ ಕಬಿನಿ ಜಲಾಶಯದಿಂದ 25,000 ಕ್ಯುಸೆಕ್‌ ಹಾಗೂ ಕಾವೇರಿ ಜಲಾಶಯದಿಂದ 1,000 ಕ್ಯೂಸೆಕ್ ಮಾತ್ರ ನದಿಗೆ ಬಿಡಲಾಗಿದೆ. ಈ ಪ್ರಮಾಣ ಹೆಚ್ಚಾದರೆ ಜಲಾಶಯದ ಸೊಬಗು ಮತ್ತಷ್ಟು ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗುವುದರಿಂದ ನಿಸರ್ಗ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಈ ವರ್ಷವೂ ಪ್ರವಾಸಿಗರು ಜಲಪಾತ ನೋಡಲು ಉತ್ಸಾಹ ತೋರುತ್ತಿದ್ದು ದಿನದಿಂದ ದಿನಕ್ಕೆ ಸಂಖ್ಯೆ ಹೆಚ್ಚುತ್ತಿದೆ.

ಪ್ರತಿ ವರ್ಷ ಜೂನ್, ಜುಲೈನಲ್ಲಿ ಮುಂಗಾರು ಮಳೆಯ ಅಬ್ಬರ ಹೆಚ್ಚಾಗಿ ಕಾವೇರಿ ಮೈದುಂಬಿಕೊಂಡು ಭರಚುಕ್ಕಿಯೂ ಧುಮ್ಮಿಕ್ಕುತ್ತದೆ. ಆದರೆ, ಈ ವರ್ಷ ಅವಧಿಗೂ ಮುನ್ನವೇ ಮಳೆಯಾಗಿರುವುದರಿಂದ ತಿಂಗಳ ಹಿಂದೆ ನೀರಿಲ್ಲದೆ ಸೊರಗಿದ್ದ ಭರಚುಕ್ಕಿ ಜಲಪಾತ ಸದ್ದು ಮಾಡುತ್ತಿದೆ.ಜುಲೈ ಹಾಗೂ ಆಗಸ್‌ನಲ್ಲಿ ನೀರಿನ ಅಬ್ಬರ ಹೆಚ್ಚಾಗಿ ಭೋರ್ಗರೆಯಲಿದೆ. 

ADVERTISEMENT

ಭರಚುಕ್ಕಿ ಜಲಪಾತ ವೀಕ್ಷಣೆಗೆ ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುತ್ತಾರೆ. ಜಿಟಿ ಮಳೆ ಹಿಡಿದರೆ ಜಲಪಾತದ ಬಳಿ ಪ್ರವಾಸಿಗರ ದಟ್ಟಣೆ ಹೆಚ್ಚುತ್ತದೆ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ.

ಭರ್ಜರಿ ವ್ಯಾಪಾರ: ಭರಚುಕ್ಕಿ ಮೈದುಂಬಿಕೊಳ್ಳುತ್ತಿದ್ದಂತೆ ಸ್ಥಳೀಯ ಸಣ್ಣಪುಟ್ಟ ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಕಾಣುತ್ತದೆ. ಭರಚುಕ್ಕಿಯ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರತಿನಿತ್ಯ ಬರುವ ಸಾವಿರಾರು ಪ್ರವಾಸಿಗರು ಸ್ಥಳೀಯರಿಂದ ಭರ್ಜರಿ ವ್ಯಾಪಾರ ಮಾಡುತ್ತಾರೆ. 

ಬೇಸಗೆ ಹಾಗೂ ಚಳಿಗಾಲದ ಏಳೆಂಟು ತಿಂಗಳು ವ್ಯಾಪಾರವಿಲ್ಲದೆ ಸೊರಗುವ ಬೀದಿಬದಿ ವ್ಯಾಪಾರಿಗಳಿಗೆ ಮಳೆಗಾಲದಲ್ಲಿ ಉತ್ತಮ ವ್ಯಾಪಾರ ನಡೆಯುತ್ತದೆ. ಚುರುಮುರಿ, ನಿಪಿಟ್ಟು ಮಸಾಲೆ, ಸೌತೆಕಾಯಿ ಮಸಾಲಾ, ಕಲ್ಲಂಗಡಿ, ಪೈನಾಪಲ್, ಪಪ್ಪಾಯ, ಕಬ್ಬಿನ ಹಾಲು, ಎಳನೀರು, ಬಿಸಿ ಬೋಂಡಾ, ಬಜ್ಜಿ, ಚಹಾ ಸೇರಿದಂತೆ ಗರಿ ಗರಿಯಾದ ತಿನಿಸುಗಳ ಮಾರಾಟ ಜೋರಾಗುತ್ತದೆ.

ಮುಸ್ಲಿಮರ ದರ್ಗಾದ ಬಳಿ ಸೇರಿದಂತೆ ದಾರಿಯುದ್ದಕ್ಕೂ ಫಿಶ್ ಫ್ರೈ, ಫಿಶ್ ಕರಿ ಸೇರಿ ತರಹೇವಾರಿ ಮಾಂಸಾಹಾರಿ ಪದಾರ್ಥಗಳು ದೊರೆಯುತ್ತವೆ.

ಭರಚುಕ್ಕಿಯ ಸೌಂದರ್ಯದ ಜೊತೆಗೆ ಶಿವನಸಮುದ್ರ ಸುತ್ತಮುತ್ತಲಿರುವ ಬೆಟ್ಟ-ಗುಡ್ಡಗಳು ಹಸಿರು ಹೊದ್ದುಕೊಳ್ಳುವುದರಿಂದ ಪ್ರವಾಸಿಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಪರಿಸರದಲ್ಲಿ ಮರ-ಗಿಡಗಳು ನಳನಳಿಸುತ್ತಿವೆ. ಬ್ರಿಟಿಷ್ ಕಾಲದಲ್ಲಿ ಕಟ್ಟಿರುವ ವೆಸ್ಲಿ ಸೇತುವೆ, ಶಿವನ ಸಮುದ್ರದ ಸಮೂಹ ದೇವಾಲಯಗಳು, ದರ್ಗಾ, ಬೆಂಗಳೂರು ಮಾರ್ಗಕ್ಕೆ ಅಡ್ಡಲಾಗಿ ನಿರ್ಮಿಸಿರುವ ಹೊಸ ಹಾಗೂ ಹಳೆಯ ಸೇತುವೆಗಳು ಈ ಭಾಗದ ಪ್ರಮುಖ ಪ್ರವಾಸಿ ತಾಣಗಳು.

ಬಿಸಿಲು ಮಳೆ ವಾತಾವರಣ: ಜಲಪಾತದ ಬಳಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು ಪ್ರವಾಸಿಗರಿಗೆ ಮುದ ನೀಡುತ್ತಿದೆ. ಬೆಳಿಗ್ಗೆ, ಸಂಜೆ ಕಾವೇರಿ ಹರಿಯುವ ಶಿವನ ಸಮುದ್ರದ ಸುತ್ತಮುತ್ತ ಬೀಸುವ ತಂಪಾದ ಗಾಳಿ, ಮಳೆಯ ಸಿಂಚನ ಮನಸ್ಸಿಗೆ ಆಹ್ಲಾದಕರವಾಗಿದೆ. ಜಲಪಾತದಿಂದ ರಭಸವಾಗಿ ಧುಮ್ಮಿಕ್ಕುವ ಜಲಧಾರೆ ಗಾಳಿಯ ಜೊತೆ ಸೇರಿ ಪ್ರವಾಸಿಗರಿಗೆ ಪನ್ನೀರು ಎರಚಿದಂತಹ ಅನುಭವವವಾಗುತ್ತಿದೆ. ಜಲಪಾತಕ್ಕೆ ಜೀವ ಕಳೆ ಬಂದಿರುವುದು ಹಾಗೂ ಪ್ರವಾಸಿಗರ ಸಂಖ್ಯೆಯೂ ಏರಿಕೆಯಾಗಿರುವುದು ಸಂಭ್ರಮ ಹೆಚ್ಚಿಸಿದೆ.

ಮೈದುಂಬಿ ಹರಿಯುವ ಜಲಪಾತ ನೋಡುವುದೇ ಸ್ವರ್ಗದಂತೆ. ಪ್ರತಿ ವರ್ಷ ಕುಟುಂಬ ಸಮೇತ ಭರಚುಕ್ಕಿ ಜಲಪಾತ ಸಹಿತ ಇತರೆ ತಾಣಗಳನ್ನು ವೀಕ್ಷಿಸಿ ಖುಷಿಯಿಂದ ಹೋಗುತ್ತೇವೆ.
– ಶಿವಶಂಕರ್, ಮಳವಳ್ಳಿ
ಎಚ್ಚರ ಇರಲಿ
ಭರಚುಕ್ಕಿ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ಹುಚ್ಚಾಟ ಪ್ರದರ್ಶಿಸುತ್ತಿರುವುದು ಪ್ರಾಣಾಪಾಯಕ್ಕೆ ಕಾರಣವಾಗುತ್ತಿದೆ. ಕಾವೇರಿ ನದಿಪಾತ್ರದಲ್ಲಿ ಈಜುಲು ಇಳಿಯುವುದು ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಸಾಹಸ ಮಾಡುವುದು ಹೆಚ್ಚಾಗುತ್ತಿದ್ದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಜಲಪಾತ ಹಾಗೂ ಕಾವೇರಿ ನದಿಯೊಳಗೆ ಇಳಿದರೆ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿವೈಎಸ್‌ಪಿ ಧರ್ಮೇಂದ್ರ ಎಚ್ಚರಿಕೆ ನೀಡಿದ್ದಾರೆ.

ಮೂಲಸೌಕರ್ಯ ಕೊರತೆ

ಜಲಪಾತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು ಗುಂಡಿಗಳಿಂದ ಕೂಡಿದೆ. ಜೊತೆಗೆ ಮೂಲಸೌಕರ್ಯಗಳ ಕೊರತೆಯೂ ಕಾಡುತ್ತಿದೆ. ಜಲಪಾತದ ಅಂದ ಸವಿಯಲು ಬರುವ ಪ್ರವಾಸಿಗರು ಇದರಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. ಕುಡಿಯವ ನೀರಿನ ವ್ಯವಸ್ಥೆ ಇಲ್ಲ ಸಮರ್ಪಕ ಶೌಚಾಲಯಗಳು ಇಲ್ಲ. ಪ್ರವಾಸಿಗರಿಂದ ಶುಲ್ಕ ಸಂಗ್ರಹಿಸುವವರು ಕನಿಷ್ಠ ಮೂಲಸೌಕರ್ಯ ಒದಗಿಸಬೇಕು. ಪ್ರವಾಸಿಗರಿಗೆ ಇರಿಸು ಮುರಿಸು ಆಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಾಸಕರು ಸಂಸದರು ಸಚಿವರು ಹಾಗೂ ಅರಣ್ಯ ಇಲಾಖೆ ಗಮನ ಹರಿಸಬೇಕು ಎಂದು ಪ್ರವಾಸಿ ಮಧುರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0