ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಕಾರ್ಯಪಡೆ

3,262 ಎಕರೆ ‌ಜಮೀನು ಒತ್ತುವರಿ: ಫೆ.1ರಿಂದ ಅಭಿಯಾನ ಆರು ತಿಂಗಳ ಗಡುವು ನೀಡಿದ ಜಿಲ್ಲಾಧಿಕಾರಿ
Last Updated 29 ಜನವರಿ 2021, 15:33 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ವಿಶೇಷ ಕಾರ್ಯಪಡೆ ರಚಿಸಲಾಗಿದ್ದು, ಫೆ.1ರಿಂದ ಒತ್ತುವರಿ ತೆರವು ಅಭಿಯಾನ ಆರಂಭವಾಗಲಿದೆ. 3,262 ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದ್ದು, ಆರು ತಿಂಗಳ ಒಳಗೆ ತೆರವುಗೊಳಿಸುವ ಗಡುವು ನೀಡಲಾಗಿದೆ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಡಳಿತದ ನಿರ್ಧಾರದ ಬಗ್ಗೆ ಮಾಹಿತಿ ನೀಡಿದರು.

‘ಇದೇ 20 ರಂದು ಬೆಂಗಳೂರಿನಲ್ಲಿ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳ ಸಭೆಯಲ್ಲಿ ಮುಖ್ಯಮಂತ್ರಿ ಅವರು ನೀಡಿರುವ ಸೂಚನೆಯಂತೆ ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಮೀನುಗಳನ್ನು ಪತ್ತೆ ಹಚ್ಚಿ ತೆರವುಗೊಳಿಸುವ ನಿಟ್ಟಿನಲ್ಲಿ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ವಿಶೇಷ ಕಾರ್ಯ ಪಡೆ ರಚಿಸಲಾಗಿದ್ದು, ಸಮಿತಿಯಲ್ಲಿ ತಹಶೀಲ್ದಾರ್, ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ, ಡಿವೈಎಸ್‌ಪಿ ಅಥವಾ ಸರ್ಕಲ್ ಇನ್‌ಸ್ಪೆಕ್ಟರ್‌ ಅವರು ಸದಸ್ಯರಾಗಿ ಇರಲಿದ್ದಾರೆ’ ಎಂದರು.

ಜಿಲ್ಲೆಯಲ್ಲಿ ಒಟ್ಟು 11,355 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂಬ ಮಾಹಿತಿ ಇತ್ತು. ಈ ಪೈಕಿ ನಮೂನೆ 50, 53, 57ರಲ್ಲಿ ಬರುವ 2,158 ಎಕರೆ ಜಮೀನು ಸಕ್ರಮವಾಗಿದೆ. ಒತ್ತುವರಿಯಾಗಿರುವ ಉಳಿದ 9,196 ಎಕರೆ ಸರ್ಕಾರಿ ಜಮೀನಿನ ಪೈಕಿ. ಇಲ್ಲಿವರೆಗೆ 5,933 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. 3,263 ಎಕರೆ ತೆರವಿಗೆ ಬಾಕಿ ಇದೆ’ ಎಂದು ಅವರು ಮಾಹಿತಿ ನೀಡಿದರು.

‘ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕಿನಲ್ಲಿ ಒತ್ತುವರಿಯಾಗಿಲ್ಲ ಎಂದು ವರದಿ ಹೇಳಿದೆ. ಕೊಳ್ಳೇಗಾಲ, ಹನೂರು ಮತ್ತುಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ಮಾತ್ರ ಒತ್ತುವರಿ ಆಗಿದೆ. ಕೊಳ್ಳೇಗಾಲ ಮತ್ತು ಹನೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ 2,807 ಎಕರೆ ಹಾಗೂ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ 456 ಎಕರೆ ಸರ್ಕಾರಿ ಭೂಮಿಯ ಒತ್ತುವರಿ ತೆರವುಗೊಳಿಸಬೇಕಾಗಿದೆ’ ಎಂದು ಎಂ.ಆರ್.ರವಿ ಅವರು ಹೇಳಿದರು.

ಮತ್ತೊಮ್ಮೆ ಪರಿಶೀಲನೆ: ‘ಈ ಮೂರು ತಾಲ್ಲೂಕುಗಳ ಜೊತೆಗೆ ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕುಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಒತ್ತುವರಿಯಾಗಿರುವ ಬಗ್ಗೆ ಪರಿಶೀಲಿಸಲಾಗುವುದು. ಒತ್ತುವರಿಯಾಗಿದ್ದರೆ ತೆರವುಗೊಳಿಸಲಾಗುವುದು’ ಎಂದರು.

ಮಾಹಿತಿ ನೀಡಿ: ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡವರು ಸ್ವಯಂ ಪ್ರೇರಿತರಾಗಿ ಉಪವಿಭಾಗಾಧಿಕಾರಿ ಹಾಗೂ ಸಂಬಂಧಿಸಿದ ತಹಶೀಲ್ದಾರ್‌ ಅವರಿಗೆ ಮಾಹಿತಿ ನೀಡಿ, ತೆರವುಗೊಳಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.

‘ಒತ್ತುವರಿಯಾಗಿರುವ ಬಗ್ಗೆ ಮಾಹಿತಿ ಇದ್ದವರು ಅಥವಾ ಸಾರ್ವಜನಿಕರು ಪೂರಕ ದಾಖಲೆಗಳೊಡನೆಉಪವಿಭಾಗಾಧಿಕಾರಿ ಕಚೇರಿ (08224–253615) ಹಾಗೂ ಜಿಲ್ಲಾ ಕಂಟ್ರೋಲ್ ರೂಂ 08226–223160ಗೆ ಕರೆ ಮಾಡಿ ಮಾಹಿತಿ ನೀಡಬಹುದು’ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಪಿಂಚಣಿದಾರರ ಭೌತಿಕ ಪರಿಶೀಲನೆ: ತಿಂಗಳ ಗಡುವು
ಸಾಮಾಜಿಕ ಭದ್ರತಾ ಯೋಜನೆಯಡಿ ಸರ್ಕಾರ ನೀಡುತ್ತಿರುವ ವಿಧವಾ ವೇತನ, ವೃದ್ದಾಪ್ಯ ವೇತನ, ವಿಕಲಚೇತನರ ಮಾಸಾಶನ ಸೇರಿದಂತೆ ಇತರೆ ಪಿಂಚಣಿ ಸೌಲಭ್ಯದ ಹಣವು ಮರಣ ಹೊಂದಿದವರ ಹೆಸರಿನಲ್ಲೂ ಪಾವತಿಯಾಗುತ್ತಿದೆ ಎಂಬ ಮಾಹಿತಿ ಇದ್ದು, ಜಿಲ್ಲೆಯಲ್ಲಿ ಫೆ.1ರಿಂದ ಪಿಂಚಣಿ ಫಲಾನುಭವಿಗಳ ಭೌತಿಕ ಪರಿಶೀಲನಾ ಕಾರ್ಯ ಆರಂಭಿಸಲಾಗುವುದು’ ಎಂದು ಡಾ.ಎಂ.ಆರ್.ರವಿ ಅವರು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 2,08,366 ಫಲಾನುಭವಿಗಳು ಪಿಂಚಣಿ ಪಡೆಯುತ್ತಿದ್ದಾರೆ. ಇವರಲ್ಲಿ ಬಹಳಷ್ಟು ಫಲಾನುಭವಿಗಳು ಮರಣ ಹೊಂದಿದ್ದಾರೆ ಹಾಗೂ ಊರು ಬಿಟ್ಟಿರುವವರು ಇದ್ದಾರೆ. ಇಂತಹವರ ಹೆಸರಲ್ಲೂ ಪಿಂಚಣಿ ಹೋಗುತ್ತಿರುವುದು ಗಮನಕ್ಕೆ ಬಂದಿದೆ’ ಎಂದರು.

‘ಜಿಲ್ಲೆಯಲ್ಲಿ ಈಗಾಗಲೇ 1,84,253 ಫಲಾನುಭವಿಗಳ ಆಧಾರ್ ಅನ್ನು ಬ್ಯಾಂಕ್‌ ಖಾತೆಗೆ ಜೋಡಣೆ ಮಾಡಲಾಗಿದೆ. ಇದರಲ್ಲೂ ಕೆಲವರು ಮರಣ ಹೊಂದಿರುವ ಕುರಿತು ಮಾಹಿತಿ ಇದೆ. ಬಾಕಿ ಇರುವ 22,882 ಫಲಾನುಭವಿಗಳ ವಿವರಗಳನ್ನು ತಹಶೀಲ್ದಾರರು, ಶಿರಸ್ತೇದಾರರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಸಂಗ್ರಹಿಸಲಿದ್ದಾರೆ. ನಕಲಿ ಕಂಡುಬಂದರೆ ಅಂತಹವರನ್ನು ಕೈ ಬಿಡಲಾಗುವುದು’ ಎಂದು ಹೇಳಿದರು.

‘ನಕಲಿ ಪಿಂಚಣಿದಾರರಿದ್ದರೆ ತಾವಾಗಿಯೇ ಬಂದು ಶರಣಾಗಬೇಕು. ಪರಿಶೀಲನೆ ವೇಳೆ ನಕಲಿ ಎಂದು ಕಂಡುಬಂದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು. ಇದರಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು. ತಿಂಗಳ ಒಳಗಾಗಿ ಅಭಿಯಾನ ಪೂರ್ಣಗೊಳಿಸಲು ಸೂಚಿಸಲಾಗಿದೆ ’ ಎಂದು ಎಚ್ಚರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT