ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಬಸ್‌ಗಳ ಕೊರತೆ; ವಿದ್ಯಾರ್ಥಿಗಳ ಪಡಿಪಾಟಲು

ತಾಲ್ಲೂಕಿನಲ್ಲಿ ಹೆಚ್ಚು ಸಮಸ್ಯೆ, ಬಸ್‌ಗಳ ಟಾಪ್‌ಗಳಲ್ಲಿ ಮಕ್ಕಳ ಪ್ರಯಾಣ
Last Updated 8 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಹನೂರು: ಚಾಮರಾಜನಗರ ಜಿಲ್ಲೆಯಲ್ಲಿ ಪ್ರೌಢ ಶಾಲೆ ಹಾಗೂ ಅದರ ಮೇಲಿನ ಹಂತದ ಎಲ್ಲ ಶಿಕ್ಷಣ ಸಂಸ್ಥೆಗಳು ತೆರೆದಿದ್ದು, ಗ್ರಾಮೀಣ ಭಾಗದಲ್ಲಿ ಬಸ್‌ ಸೌಲಭ್ಯ ಸರಿಯಾಗಿ ಲಭ್ಯವಾಗದೇ ಇರುವುದರಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲು ಕಷ್ಟಪಡುತ್ತಿದ್ದಾರೆ.

ಹನೂರು ತಾಲ್ಲೂಕಿನಲ್ಲಿ ಈ ಸಮಸ್ಯೆ ಹೆಚ್ಚಿದೆ.ತಾಲ್ಲೂಕಿನ ಗ್ರಾಮೀಣ ಭಾಗಗಳಿಗೆ ಸೂಕ್ತ ಸಮಯಕ್ಕೆ ಬಸ್ ಸಂಚಾರವಿಲ್ಲದೇ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಪರದಾಡುತ್ತಿದ್ದಾರೆ. ಗ್ರಾಮಗಳಿಗೆ ತೆರಳುವು ಬೆರಳೆಣಿಕೆ ಬಸ್ಸುಗಳ ಟಾಪ್ ಮೇಲೆಯೇ ಜೀವದ ಹಂಗು ತೊರೆದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಹುತೇಕ ಅರಣ್ಯದಿಂದಲೇ ಆವೃತವಾಗಿರುವ ಇಲ್ಲಿನ ಗ್ರಾಮಗಳಿಗೆ ಬಸ್ ಸಂಚಾರ ತೀರ ವಿರಳ. ಪ್ರತ್ಯೇಕ ತಾಲ್ಲೂಕು ರಚನೆಯ ಬಳಿಕ ಸಾರಿಗೆ ಸಂಚಾರ ಸುಗಮವಾಗಬಹುದೆಂದು ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆಯಾಗಿದೆ. ಸಾರ್ವಜನಿಕ ಕೆಲಸಗಳಿಗೆ, ಶಾಲಾ ಕಾಲೇಜುಗಳಿಗೆ ಹಾಗೂ ಇನ್ನಿತರ ಕೆಲಸಗಳಿಗೆ ಪಟ್ಟಣಕ್ಕೆ ಬರಲು ಗ್ರಾಮಕ್ಕೆ ಬರುವ ಬೆರಳೆಣಿಕೆಯಷ್ಟು ಬಸ್‌ಗಳನ್ನೇ ಅವಲಂಬಿಸಬೇಕಿದೆ. ಇಲ್ಲದಿದ್ದರೆ ಆಟೊ, ಕ್ಯಾಬ್ ಹಿಡಿದು ಪಟ್ಟಣಕ್ಕೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ.

ಗ್ರಾಮೀಣ ಭಾಗದ ಮಕ್ಕಳು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಗಿಯುತ್ತಿದ್ದಂತೆ ಕಾಲೇಜಿಗೆ ಹನೂರು ಇಲ್ಲವೇ ಕೊಳ್ಳೇಗಾಲಕ್ಕೆ ಹೋಗಬೇಕು. ಖಾಸಗಿ ವಾಹನವಿರುವವರು ತಮ್ಮ ಮಕ್ಕಳನ್ನು ಕಾಲೇಜಿಗೆ ಬಿಡುತ್ತಾರೆ. ಆದರೆ ಬಸ್ ಅನ್ನೇ ಅವಲಂಬಿಸಿರುವ ವಿದ್ಯಾರ್ಥಿಗಳು ಗ್ರಾಮಕ್ಕೆ ಬರುವ ಬಸ್ಸುಗಳನ್ನೇ ಅವಲಂಬಿಸಬೇಕಿದೆ.

ಕೋವಿಡ್‌ ಹಾವಳಿ ಆರಂಭಗೊಂಡ ನಂತರ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳ ಸೇವೆಯಲ್ಲಿ ವ್ಯತ್ಯಯವಾಗಿದ್ದು, ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ಹಾಗಾಗಿ, ಬೆಳಿಗ್ಗೆ ಶಾಲಾ ಕಾಲೇಜುಗಳಿಗೆ ತೆರಳುವ ಸಮಯ ಹಾಗೂ ಸಂಜೆ ತರಗತಿಗಳು ಬಿಡುವ ಸಮಯಕ್ಕೆ ಸರಿಯಾಗಿ ಸಾಕಷ್ಟು ಬಸ್‌ಗಳು ಇಲ್ಲ.ಇರುವ ಒಂದೆರಡು ಬಸ್‌ಗಳಲ್ಲೇ ಸಂಚರಿಸಬೇಕಾಗಿದೆ. ಹಾಗಾಗಿ, ಬಸ್ ತುಂಬಿದಾಗ ವಿದ್ಯಾರ್ಥಿಗಳು ಅನಿವಾರ್ಯವಾಗಿ ಟಾಪ್‌ ಮೇಲೆ ಹತ್ತಿ ಸಂಚರಿಸಬೇಕಾಗಿದೆ.

‘ಮಣಗಳ್ಳಿ, ಬಂಡಳ್ಳಿ, ಹಲಗಾಪುರ ಹಾಗೂ ಶಾಗ್ಯ ಗ್ರಾಮಗಳಿಗೆ ಸಂಜೆ ವೇಳೆ ತೆರಳುವ ಬಸ್ಸುಗಳಿಗೆ ಇನ್ನಿಲ್ಲದ ಜನರು ತುಂಬಿಕೊಳ್ಳುತ್ತಾರೆ. ಆ ಸಮಯಕ್ಕೆ ಹೆಚ್ಚುವರಿ ಬಸ್ಸುಗಳಿಲ್ಲದಿರುವುದರಿಂದ ವಿಧಿಯಿಲ್ಲದೇ ವಿದ್ಯಾರ್ಥಿಗಳು ಬಸ್‌ಗಳ ಟಾಪ್ ಕುಳಿತು ಪ್ರಯಾಣ ಮಾಡುತ್ತಾರೆ. ಹಿಂದೆ ಈ ರೀತಿ ಸಂಚರಿಸುವಾಗ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಟಾಪ್ ಮೇಲಿಂದ ಬಿದ್ದು ಗಾಯಗೊಂಡಿರುವ ಘಟನೆಗಳು ಸಾಕಷ್ಟು ಸಂಭವಿಸಿವೆ. ಇಷ್ಟಾದರೂ ಸಾರಿಗೆ ಇಲಾಖೆಯವರು ಹೆಚ್ಚುವರಿ ಬಸ್ ಬಿಡಲು ಮುಂದಾಗಿಲ್ಲ’ ಎಂಬುದು ನಾಗರಿಕರ ಆರೋಪ.

ಮನವಿಗೆ ಸಿಗದ ಸ್ಪಂದನೆ:ಮಾರ್ಟಳ್ಳಿ ಗ್ರಾಮದ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಮಾರ್ಟಳ್ಳಿ ಕೇಂದ್ರಸ್ಥಾನ. ಬಸ್‌ ಇಲ್ಲದಿರುವುದರಿಂದ ಸ್ಥಳೀಯ ಆಟೋಗಳಲ್ಲಿ ಮಕ್ಕಳನ್ನು ತುಂಬಿಕೊಂಡು ಕರೆದೊಯ್ಯಬೇಕಿದೆ. ಈ ಭಾಗಕ್ಕೆ ಬಸ್ ಸಂಚಾರ ಕಲ್ಪಿಸಿ ಎಂದು ಜಿಲ್ಲಾಧಿಕಾರಿ, ಸಚಿವರಿಗೂ ಮನವಿ ಮಾಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ’ ಎಂದು ಬಿದರಹಳ್ಳಿ ಗ್ರಾಮದ ಬಾಬು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಮಾಪುರದಿಂದ ದಿನ್ನಳ್ಳಿ, ಮಿಣ್ಯಂ ಹಾಗೂ ಹೂಗ್ಯಂ ಕಡೆಗೆ ಹೋಗುವವರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ದಟ್ಟಾರಣ್ಯದಿಂದಲೇ ಕೂಡಿರುವ ಇಲ್ಲಿನ ಗ್ರಾಮಗಳ ಜನರು ಮುಂಜಾನೆ ಹಾಗೂ ಸಂಜೆ ವೇಳೆ ರಾಮಾಪುರಕ್ಕೆ ಬರಲು ಹಿಂಜರಿಯುತ್ತಾರೆ. ರಸ್ತೆಯಲ್ಲೇ ನಿಲ್ಲುವ ಕಾಡಾನೆಗಳು ಒಮ್ಮೊಮ್ಮೆ ವಾಹನಗಳನ್ನು ಅಡ್ಡಗಟ್ಟುತ್ತವೆ. ಬೆಳಿಗ್ಗೆ ಹಾಗೂ ಸಂಜೆ ವೇಳೆ ಸಾರಿಗೆ ಬಸ್ಸು ಮತ್ತು ಒಂದೆರಡು ಖಾಸಗಿ ಬಸ್ಸುಗಳನ್ನು ಬಿಟ್ಟು ಈ ಭಾಗದಲ್ಲಿ ಬಸ್‌ಗಳು ಸಂಚರಿಸುವುದೇ ಅಪರೂಪ. ಇದರಿಂದ ಇಲ್ಲಿಂದ ಶಾಲಾ ಕಾಲೇಜು, ಆಸ್ಪತ್ರೆ ಹಾಗೂ ಇನ್ನಿತರ ಕೆಲಸಗಳಿಗೆ ಬರುವ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

ಬುಡಕಟ್ಟು ಕಾಲೊನಿಗಳಿಗಿಲ್ಲ ಬಸ್‌
ಗುಂಡ್ಲುಪೇಟೆ ತಾಲ್ಲೂಕಿನ ಬುಡಕಟ್ಟು ಜನಾಂಗದ ಕಾಲೊನಿಗಳಾದ ಬುರದರಹುಂಡಿ ಆಡಿನಕಣಿವೆ, ಚೆನ್ಮಿಕಟ್ಟೆ, ಮಗುವಿನಹಳ್ಳಿ ಕಾಲೊನಿ, ಮದ್ದೂರು ಕಾಲೊನಿಗಳಿಗೂ ಯಾವುದೇ ಬಸ್‌ ಸೌಲಭ್ಯ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಮುಖ್ಯ ರಸ್ತೆಯವರೆಗೆ ನಡಿಗೆಯಲ್ಲೇ ಬಂದು ನಂತರ ಬಸ್‌ ಹತ್ತಬೇಕಾದ ಸ್ಥಿತಿ ಇದೆ.

ವಿದ್ಯಾರ್ಥಿಗ‌ಳಿರುವ ಕಡೆ ನಿಲ್ಲದ ಬಸ್‌
ಕೆಎಸ್‌ಆರ್‌ಟಿಸಿಯು ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ವಿತರಣೆಯನ್ನೂ ಆರಂಭಿಸಿದೆ. ಕಡಿಮೆ ಬಸ್‌ಗಳು ಇರುವುದರಿಂದ ಬಹುತೇಕ ಬಸ್‌ಗಳು ಭರ್ತಿಯಾಗಿರುತ್ತವೆ. ಹಾಗಾಗಿ ವಿದ್ಯಾರ್ಥಿಗಳಿಗೆ ನಿಲ್ಲುವುದಕ್ಕೂ ಜಾಗ ಇರುವುದಿಲ್ಲ. ಕಷ್ಟ ಪಟ್ಟು ಬಾಗಿಲ ಬಳಿಯೇ ವಿದ್ಯಾರ್ಥಿಗಳು ನಿಲ್ಲಬೇಕಾಗುತ್ತದೆ. ಪಾಸ್‌ ಹೊಂದಿರುವ ವಿದ್ಯಾರ್ಥಿಗಳು ಹೆಚ್ಚು ಮಂದಿ ಇದ್ದರೆ, ಚಾಲಕರು ಅಲ್ಲಿ ಬಸ್‌ಗಳನ್ನು ನಿಲ್ಲಿಸುವುದೇ ಇಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಾರೆ.

‘10 ದಿನಗಳಲ್ಲಿ ಸಮಸ್ಯೆ ಇತ್ಯರ್ಥ’
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಶ್ರೀನಿವಾಸ್‌ ಅವರು, ‘ಬೇಡಿಕೆ ಆಧರಿತವಾಗಿ ಬಸ್‌ಗಳನ್ನು ಹಾಕುತ್ತಿದ್ದೇವೆ. ಕೋವಿಡ್‌ಗೂ ಮುನ್ನ 194 ಬಸ್‌ಗಳು ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದವು. ಸದ್ಯ 164 ಬಸ್‌ಗಳು ಸಂಚರಿಸುತ್ತಿವೆ. ಶಾಲಾ ಕಾಲೇಜು ಆರಂಭ ಹಾಗೂ ಬಿಡುವ ಹೊತ್ತಿನಲ್ಲಿ ಹೆಚ್ಚುವರಿ ಬಸ್‌ಗಳನ್ನು ಹಾಕಬೇಕು ಎಂಬ ಬೇಡಿಕೆ ಇದೆ. ನಮ್ಮ ಉನ್ನತ ಅಧಿಕಾರಿಗಳಿಂದಲೂ ಸೂಚನೆ ಇದೆ. ಇನ್ನು 10ರಿಂದ 15 ದಿನಗಳಲ್ಲಿ ಸಮಸ್ಯೆ ಇತ್ಯರ್ಥವಾಗಲಿದೆ’ ಎಂದು ಹೇಳಿದರು.

ಕೆಎಸ್‌ಆರ್‌ಟಿಸಿ‌ಗೆ ಪತ್ರ: ಡಿಡಿಪಿಐ
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಟಿ.ಜವರೇಗೌಡ ಅವರು ಪ್ರತಿಕ್ರಿಯಿಸಿ, ‘ಕಾಡಂಚಿನ ಪ್ರದೇಶದ ಮಕ್ಕಳಿಗೆ ವಾಹನ ವ್ಯವಸ್ಥೆ ಮಾಡುವಂತೆ ರೈತ ಮುಖಂಡರು ಮನವಿ ಮಾಡಿದ್ದಾರೆ. ಇನ್ನೂ ಕೆಲವು ಕಡೆ ಬಸ್‌ ಕೊರತೆಯಿಂದಾಗಿ ಮಕ್ಕಳಿಗೆ ತೊಂದರೆಯಾಗುತ್ತಿರುವುದರ ಬಗ್ಗೆ ದೂರುಗಳು ಬಂದಿವೆ. ಈ ಸಂಬಂಧ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಪತ್ರ ಬರೆದು, ಬಸ್‌ ಹಾಕುವಂತೆ ಮನವಿ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT