ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೈಜ್ಞಾನಿಕ ಎಫ್‌ಆರ್‌ಪಿ ನಿಗದಿ: ಕಬ್ಬು ಬೆಳೆಗಾರರ ಪ್ರತಿಭಟನೆ

Last Updated 4 ನವೆಂಬರ್ 2020, 11:59 IST
ಅಕ್ಷರ ಗಾತ್ರ

ಚಾಮರಾಜನಗರ:ಕೇಂದ್ರ ಸರ್ಕಾರ ಕಬ್ಬಿಗೆ ನಿಗದಿ ಪಡಿಸಿರುವ ನ್ಯಾಯಸಮ್ಮತ ಮೌಲ್ಯಾಧರಿತ ಬೆಲೆ (ಎಫ್‌ಆರ್‌ಪಿ) ಅವೈಜ್ಞಾನಿಕವಾಗಿದ್ದು, ಅದನ್ನು ತಿದ್ದುಪಡಿ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಜಿಲ್ಲೆಯಲ್ಲಿ ಅವಧಿ ಮೀರಿದ ಕಬ್ಬನ್ನು ಕಟಾವು ಮಾಡದೇ, ಸಕ್ಕರೆ ಕಾರ್ಖಾನೆಯು ‌ಹೊರ ಜಿಲ್ಲೆಗಳಿಂದ ಕಬ್ಬು ತಂದು ಅರೆಯುತ್ತಿದೆ. ಜಿಲ್ಲಾಡಳಿತ ಇದುವರೆಗೂ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ, ಕಾರ್ಖಾನೆಯ ಆಡಳಿತ ಮಂಡಳಿಯೊಂದಿಗೆ ಶಾಮೀಲಾಗಿದೆ ಎಂದು ಪ್ರತಿಭಟನನಿರತರು ಆರೋಪಿಸಿದರು.

ನಗರದ ಜಿಲ್ಲಾಡಳಿತ ಭವನದ ಮುಂಭಾಗ ಸೇರಿದ ಪ್ರತಿಭಟನಕಾರರು ರಸ್ತೆಯಲ್ಲಿ ಕುಳಿತು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಆಹಾರ ಇಲಾಖೆಯ ಉಪನಿರ್ದೇಶಕ ರುದ್ರಸ್ವಾಮಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

‘ಕೇಂದ್ರ ಸರ್ಕಾರದ ರೀತಿಯಲ್ಲಿ ರಾಜ್ಯ ಸರ್ಕಾರ ಕೂಡ ರಾಜ್ಯ ಸಲಹಾ ದರ (ಎಸ್‌ಎಪಿ) ನಿಗದಿ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದೆ. ತಕ್ಷಣವೇ ಪ್ರತಿ ಟನ್‌ಗೆ ₹3,300 ದರ ನಿಗದಿ ಮಾಡಬೇಕು’ ಎಂದು ಅವರು ಆಗ್ರಹಿಸಿದರು.

‘ಟನ್ ಕಬ್ಬು ಬೆಳೆಯಲು ರೈತರಿಗೆ ₹3,050 ವೆಚ್ಚವಾಗುತ್ತಿದೆ ಎಂದುಭಾರತೀಯ ಕಬ್ಬು ಸಂಶೋಧನೆ ಮಂಡಳಿ ವರದಿ ನೀಡಿದ್ದು, ಇದರ ಪ್ರಕಾರವೇ ಕಬ್ಬಿಗೆ ದರ ನಿಗದಿ ಮಾಡಬೇಕು. ಸದ್ಯ ಇಳುವರಿ ಆಧಾರ ಬೆಲೆ ನಿಗದಿ ಮಾಡಲಾಗುತ್ತಿದೆ. ಆದರೆ, ಸಕ್ಕರೆ ಕಾರ್ಖಾನೆಗಳು ಸಕ್ಕರೆಯ ಇಳುವರಿಯನ್ನು ಕಡಿಮೆ ತೋರಿಸುತ್ತವೆ. ಹಾಗಾಗಿ, ಸರ್ಕಾರ ತಜ್ಞರ ಸಮಿತಿ ರಚಿಸಿ ವೈಜ್ಞಾನಿಕ ದರ ನಿಗದಿ ಮಾಡಬೇಕು’ ಎಂದು ಒತ್ತಾಯಿಸಿದರು.

ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅವರು ಮಾತನಾಡಿ, ‘ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ ಕೇಂದ್ರ ಸರ್ಕಾರ, ಎರಡು ವರ್ಷಗಳಿಂದಲೂ ಟನ್‌ ಕಬ್ಬಿಗೆ ₹2850 ಬೆಲೆ ನಿಗದಿ ಮಾಡಿ ಈ ವರ್ಷ 9.5ರಷ್ಟು ಇಳುವರಿಗೆ ಇದ್ದ ಎಫ್‌ಆರ್‌ಪಿಯನ್ನು 10.5ಕ್ಕೆ ಏರಿಕೆ ಮಾಡಿ, ₹2,850ಕ್ಕೆ ನಿಗದಿ ಮಾಡಿರುವುದು ರೈತರ ಆದಾಯ ದ್ವಿಗುಣವೇ ಎಂದು ಪ್ರಶ್ನಿಸಿದರು. ಅದಾನಿ, ಅಂಬಾನಿ ಅಂತಹ ದೊಡ್ಡದೊಡ್ಡ ಉದ್ಯಮಿಗಳು, ಬಂಡವಾಳ ಶಾಹಿಗಳಿಗೆ ಮಾತ್ರ ಸರ್ಕಾರ ಆದಾಯ ದ್ವಿಗುಣ ಮಾಡುತ್ತಿದೆಯೇ ವಿನಾ ರೈತರಿಗಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲೆಯ ರೈತರು ಬೆಳೆದಿರುವ ಕಬ್ಬಿಗೆ 15 ತಿಂಗಳು ತುಂಬಿದ್ದು, ಕುಂತೂರಿನ ಸಕ್ಕರೆ ಕಾರ್ಖಾನೆಯವರು ನಮ್ಮ ಕಬ್ಬು ಕಟಾವು ಮಾಡದೇ ಹೊರ ಜಿಲ್ಲೆ ಕಬ್ಬು ತರುತ್ತಿದ್ದಾರೆ. ಅಂತಹವರ ಮೇಲೆ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು. ತಕ್ಷಣವೇ ಹೊರಗಡೆಯ ಜಿಲ್ಲೆಯ ಕಬ್ಬುನ್ನು ನಿಲ್ಲಿಸಬೇಕು’ ಎಂದು ಅವರು ಒತ್ತಾಯಿಸಿದರು.

ತರಕಾರಿಗಳಿಗೆ ಕೇರಳದ ಮಾದರಿಯಲ್ಲಿ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಭತ್ತ ಖರೀದಿ ಕೇಂದ್ರ ತೆರೆಯಿರಿ: ‘ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಲು ಸರ್ಕಾರ ತಕ್ಷಣವೇ ಆದೇಶ ನೀಡಬೇಕು. ಪ್ರತಿ ಕ್ವಿಂಟಲ್ ಭತ್ತಕ್ಕೆ ₹200 ಹೆಚ್ಚುವರಿ ಬೆಂಬಲ ಬೆಲೆ ನೀಡಬೇಕು. ಪ್ರತಿಯೊಬ್ಬ ರೈತನಿಗೆ 17 ಕ್ವಿಂಟಲ್ ಮಾರಾಟಕ್ಕೆ ಅವಕಾಶವಿದ್ದು, ಇದನ್ನು 100 ಕ್ವಿಂಟಲ್‌ಗೆ ಏರಿಕೆ ಮಾಡಬೇಕು. ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿ ಮಾಡಿದರೆ ಅಪರಾಧ ಎಂದುಪಂಜಾಬ್ ಸರ್ಕಾರ ತಂದಿರುವ ಕಾನೂನು ಕರ್ನಾಟಕದಲ್ಲೂ ಜಾರಿ ಆಗಬೇಕು. ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದಿರುವ ಎಲ್ಲಾ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು’ ಎಂದು ಅವರು ಆಗ್ರಹಿಸಿದರು.

ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಮೂಕಳ್ಳಿ ಮಹದೇವಸ್ವಾಮಿ, ಪಟೇಲ್‌ ಶಿವಮೂರ್ತಿ, ಕುಂತೂರು ಪ್ರಭುಸ್ವಾಮಿ, ನಿಜಧ್ವನಿ ಗೋವಿಂದರಾಜು, ಹಾಡ್ಯರವಿ, ಬೆನಕನಹಳ್ಳಿ ಪರಶಿವಮೂರ್ತಿ, ಮೆಲ್ಲಹಳ್ಳಿ ಚಂದ್ರಶೇಖರ್, ಬಾಣಹಳ್ಳಿ ಕುಮಾರ್, ನಾಗರಾಜು, ಪ್ರಭುಸ್ವಾಮಿ, ಪ್ರದೀಪ್‌ ಕುರುಬೂರು, ಮಂಜು, ನಿಂಗರಾಜು, ಮಹೇಶ್ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT