ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ರೈತರ ಸಮಸ್ಯೆಗಳ ಬಗ್ಗೆ ಚರ್ಚೆ, ವಿಶೇಷ ಪ್ಯಾಕೇಜ್‌ಗೆ ಆಗ್ರಹ

ಚಾಮರಾಜನಗರ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಭೆ
Published 6 ಜೂನ್ 2024, 14:11 IST
Last Updated 6 ಜೂನ್ 2024, 14:11 IST
ಅಕ್ಷರ ಗಾತ್ರ

ಚಾಮರಾಜನಗರ: ‘ರೈತರ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ಅವರು ರೈತ ಮುಖಂಡರ ಸಭೆ ಕರೆಯಬೇಕು. ಪ್ರಸಕ್ತ ಸಾಲಿನ ಕಬ್ಬಿಗೆ ಪ್ರತಿ ಟನ್‌ಗೆ ₹ 4000 ಮುಂಗಡ ನೀಡಬೇಕು. ಬರದಿಂದ ನಷ್ಟ ಅನುಭವಿಸಿರುವ ಮತ್ತು ಗಾಳಿ ಮಳೆಯಿಂದ ಬಾಳೆ ಫಸಲು ನಾಶವಾಗಿರುವ ರೈತರಿಗೆ ವಿಶೇಷ ಪ್ಯಾಕೇಜ್‌ ನೀಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಡಳಿತ ಮತ್ತು ಸರ್ಕಾರವನ್ನು ಆಗ್ರಹಿಸಿದೆ. 

ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಸಂಘದ ಪದಾಧಿಕಾರಿಗಳು ಸಭೆ ನಡೆಸಿ ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.  

ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌, ‘ಜಿಲ್ಲೆಯಲ್ಲಿ ತೀವ್ರಬರಗಾಲ ಮತ್ತು ಪ್ರಕೃತಿ ವಿಕೋಪದ ದಾಳಿಗೆ ಸಿಲುಕಿರುವ ರೈತರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಮಾನದಂಡದ ಅಡಿಯಲ್ಲಿ ನೀಡುವ ಪರಿಹಾರವನ್ನು ಒಪ್ಪಲು ಸಾಧ್ಯವಿಲ್ಲ.  ರಾಜ್ಯದಲ್ಲಿ 223 ತಾಲ್ಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ವೈಜ್ಞಾನಿಕ ರೀತಿಯಲ್ಲಿ ಬೆಳೆ ನಷ್ಟ ನೀಡುತ್ತಿಲ್ಲ. ನಷ್ಟ ಅನುಭವಿಸಿರುವ ಎಲ್ಲ ರೈತರಿಗೂ ತಾರತಮ್ಯ ಮಾಡದೆ ಪ್ರತಿ ಎಕರೆಗೆ ₹25,000 ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು. 

‘ಜಿಲ್ಲೆಯಲ್ಲಿ ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ ಕಳೆದ ವರ್ಷ ಉಪ ಉತ್ಪನ್ನಗಳ ಲಾಭವನ್ನು ಕೊಡಿಸಲು ಕ್ರಮವಹಿಸಬೇಕು ಹಾಗೂ ಅಕ್ರಮವಾಗಿ ರೈತರಿಂದ ಅಗ್ರಿಮೆಂಟ್ - ನಾನ್ ಅಗ್ರಿಮೆಂಟ್ ಎಂದು ರೈತರಿಂದ ಹಣ ಕಟಾವು ಮಾಡಿರುವುದನ್ನು ವಾಪಸ್‌ ನೀಡಬೇಕು, ಇಳುವರಿಯಲ್ಲಿ ಆಗುವ ಮೋಸವನ್ನು ತಪ್ಪಿಸಲು ಸ್ಥಳೀಯ ರೈತ ಮುಖಂಡರ ಜೊತೆ ತಜ್ಞರ ಸಮಿತಿ ರಚಿಸಬೇಕು. ಸಕ್ಕರೆ ಅಯುಕ್ತರನ್ನು ಕರೆಯಿಸಿ ಸಭೆ ನಡೆಸಬೇಕು. ಕಳೆದ ವರ್ಷದ ಬಾಕಿ ಪ್ರತಿ ಟನ್‌ಗೆ ₹150 ಹೆಚ್ಚುವರಿ ಹಣವನ್ನು ಪಾವತಿ ಮಾಡಬೇಕು’ ಎಂದು ಆಗ್ರಹಿಸಿದರು. 

‘ರಾಜ್ಯದಲ್ಲಿ 27 ಲಕ್ಷ ಹಾಲು ಉತ್ಪಾದಕರ ಪ್ರೋತ್ಸಾಹ ಧನ ₹700 ಕೋಟಿಯನ್ನು ತಕ್ಷಣ ರೈತರಿಗೆ ನೀಡಬೇಕು. ಹೆಚ್ಚುವರಿಯಾಗಿ ₹10 ಪ್ರೋತ್ಸಾಹ ಧನ ನೀಡಬೇಕು’ ಎಂದು ಭಾಗ್ಯರಾಜ್‌ ಒತ್ತಾಯಿಸಿದರು. 

‘ನಮ್ಮ ಬೇಡಿಕೆಗಳ ಪಟ್ಟಿಯನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಾಗುವುದು. ಅವರು ಜಿಲ್ಲಾ ಮಂತ್ರಿಗಳ ಗಮನಕ್ಕೆ ತಂದು ರೈತರ ಜೊತೆ ನಡೆಸಿ, ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಬೇಕು. ಇಲ್ಲದಿದ್ದರೆ, ಮುಂದಿನ 10 ದಿನಗಳ ಬಳಿಕ ಹೋರಾಟ ನಡೆಸಲಾಗುವುದು’ ಎಂದರು. 

ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ರಾಜ್ಯ ಕಾರ್ಯದರ್ಶಿ ಮಲೆಯೂರು ಹರ್ಷ, ಚಾಮರಾಜನಗರ ತಾಲ್ಲೂಕು ಅಧ್ಯಕ್ಷ ಅರಳಿಕಟ್ಟೆ ಕುಮಾರ್, ಮಲೆಯೂರು ಬಸವರಾಜಪ್ಪ, ನಂಜುಂಡ ನಾಯಕ, ಸಿದ್ದರಾಜು, ಮಹೇಶ್, ಉಡಿಗಾಲ ಮಂಜುನಾಥ್, ಚೇರ್ಮನ್ ಗುರು ಗುರುಮಲ್ಲಪ್ಪ, ಮಹೇಶ್ ಅರಳಿ ಕಟ್ಟೆ, ಸಿದ್ದಲಿಂಗಪ್ಪ, ಸಿದ್ದಪ್ಪ, ಕನಕ, ಕಿಳಲೀಪುರ ಶ್ರೀಕಂಠ, ವೀರನಪುರ ಮಹಾದೇವಸ್ವಾಮಿ ಇತರರು ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT