ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡುಗಟ್ಟಿದ ದುಃಖದ ನಡುವೆ ಹೆಚ್ಚುತ್ತಿದೆ ಆತಂಕ...

ಸು‌ಳ್ವಾಡಿ ವಿಷ ಪ್ರಸಾದ ದುರಂತ: ಬಿದರಹಳ್ಳಿ ಗ್ರಾಮದಲ್ಲಿ ಸರಣಿ ಸಾವು
Last Updated 24 ಡಿಸೆಂಬರ್ 2018, 6:26 IST
ಅಕ್ಷರ ಗಾತ್ರ

ಸುಳ್ವಾಡಿ (ಚಾಮರಾಜನಗರ): ‘ನಾಲ್ವರ ಶವ ಸಂಸ್ಕಾರ ಮಾಡಿದ್ದೇವೆ ಸಾರ್‌, ಇವರು ಐದನೆಯವರು. ಇನ್ನೂ 13 ಜನ ಮೈಸೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವಾಗ ಏನಾಗುತ್ತದೆಯೋ ಗೊತ್ತಿಲ್ಲ. ಊರಿಗೆ ದಿನಕ್ಕೆ ಒಂದರಂತೆ ಮೃತದೇಹಗಳು ಬರುತ್ತಲೇ ಇವೆ’ ಎಂದು ಉಮ್ಮಳಿಸಿ ಬರುವ ದುಃಖವನ್ನು ತಡೆದು ಬಿದರಹಳ್ಳಿಯ ಮಾದೇವಿ ಹೇಳುತ್ತಿದ್ದರೆ, ಅವರ ಸಂಬಂಧಿಕರೆಲ್ಲ ಎದೆ ಬಡಿದುಕೊಂಡು ಅಳುತ್ತಿದ್ದರು.

ಸುಳ್ವಾಡಿ ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಕೊನೆಯುಸಿರೆಳೆದ ರಂಗನ್‌ (45) ಅವರ ಮೃತದೇಹಕ್ಕಾಗಿ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು ಬಿದರಹಳ್ಳಿಯ ಸ್ಮಶಾನದಲ್ಲಿ ಕಾಯುತ್ತಿದ್ದ ಸಂದರ್ಭದಲ್ಲಿ ಅವರ ದುಃಖದ ಕಟ್ಟೆ ಒಡೆದಿತ್ತು. ಪುರುಷರು, ಹೆಂಗಸರು, ಮಕ್ಕಳೆನ್ನದೆ ಎಲ್ಲರೂ ದುರಂತದಲ್ಲಿ ಕಳೆದುಕೊಂಡಕುಟುಂಬದ ಸದಸ್ಯರು ಹಾಗೂ ಸಂಬಂಧಿಕರನ್ನು ನೆನೆದು ರೋದಿಸುತ್ತಿದ್ದರು.

ಡಿ.14ರಂದು ದುರ‌ಂತ ನಡೆದಿದ್ದ ದಿನವೇ ರಂಗನ್‌ ಕುಟುಂಬದವರೇ ಆದ ಗೋಪಿಯಮ್ಮ ಮೃತ‍ಪಟ್ಟಿದ್ದರು (ರಂಗನ್‌ ಅತ್ತಿಗೆ). ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವಾರದಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ರಂಗನ್‌ ಅವರಿಗೆ ಕೊನೆಗೂ ಮೃತ್ಯುಂಜಯನಾಗಲು ಸಾಧ್ಯವಾಗಲಿಲ್ಲ.

ಐವರ ಸಾವು: ವಿಷ ಪ್ರಸಾದ ದುರಂತದಲ್ಲಿ ಇದುವರೆಗೆ ಬಿದರಹಳ್ಳಿ ಗ್ರಾಮದ ಆರು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಐವರು ಸಂಬಂಧಿಕರು. ಇನ್ನೂ 13 ಮಂದಿ ಮೈಸೂರಿನ ಆಸ್ಪತ್ರೆಗಳಲ್ಲಿ ಸಾವಿನೊಂದಿಗೆ ಸೆಣಸಾಟ ನಡೆಸುತ್ತಿದ್ದಾರೆ.

ಗೋಪಿಯಮ್ಮ, ಶಾಂತರಾಜು, ಏಳು ವರ್ಷದ ಬಾಲಕ ಪ್ರೀತಂ, ಸಾಲಮ್ಮ ಹಾಗೂ ರಂಗನ್‌ ಸಂಬಂಧಿಕರು. ರಂಗನ್‌ ಮೂಲತಃ ಬಿದರಹಳ್ಳಿಯವರಾದರೂ ದೊರೆಸ್ವಾಮಿ ಮೇಡುವಿನಲ್ಲಿ ವಾಸವಿದ್ದರು. ಅವರ ಪತ್ನಿ ಈಶ್ವರಿ ಹಾಗೂ ಆರು ವರ್ಷದ ಮಗಳು ಅನುಶ್ರೀ ಕೂಡ ವಿಷ ಪ್ರಸಾದ ಸೇವನೆಯಿಂದ ಅಸ್ವಸ್ಥರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಬ್ಬ ಮಗಳು ನದಿಯಾ ಎಂಬುವವರು ದೇವಸ್ಥಾನಕ್ಕೆ ಹೋಗಿರಲಿಲ್ಲ. ಅಪ್ಪನ ಅಗಲುವಿಕೆ, ತಾಯಿ ಮತ್ತು ತಂಗಿ ಜೀವನ್ಮರಣ ಸ್ಥಿತಿಯಲ್ಲಿ ಇರುವುದನ್ನು ಕಂಡು ಕಂಗೆಟ್ಟಿದ್ದಾಳೆ.

ಆಕ್ರೋಶ: ‘ನಮ್ಮ ಸಂಬಂಧಿಕರೆಲ್ಲ ಓಂ ಶಕ್ತಿ ವ್ರತಾಧಾರಿಗಳಾಗಿ ಮಾರಮ್ಮನ ದೇವಸ್ಥಾನಕ್ಕೆ ಹೋಗಿದ್ದರು. ಅಲ್ಲಿ‍ಪ್ರಸಾದ ಸೇವಿಸಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಏನೂ ತಪ್ಪು ಮಾಡದೇ ಶಿಕ್ಷೆ ಅನುಭವಿಸುತ್ತಿದ್ದಾರೆ. ಆ ನಾಲ್ವರು ಬಂಧಿತರಿಗೆ ಶಿಕ್ಷೆ ಯಾಗುತ್ತದೆ ಎಂಬ ನಂಬಿಕೆ ಇಲ್ಲ. ನಮ್ಮ ಕೈಗೆ ಕೊಟ್ಟುಬಿಡಿ ನಮ್ಮವರನ್ನು ಸಾಮೂಹಿಕ ಅಂತ್ಯ ಸಂಸ್ಕಾರ ಮಾಡಿದ ಹಾಗೆ ಅವರಿಗೂ ಬೆಂಕಿ ಹಚ್ಚಿ ಬಿಡುತ್ತೇವೆ’ ಎಂದು ಮಾದೇವಿ ಆಕ್ರೋಶ ವ್ಯಕ್ತಪಡಿಸಿದರು.

‘ನಮ್ಮವರಿಗೆ ವಿಷ ಹಾಕಿದಳು. ಅವಳಿಗೆ ಹಾಗೂ ಉಳಿದ ಮೂವರಿಗೆ ವಿಷ ಹಾಕಬೇಕು. ಆಗ ನಮ್ಮ ಸಂಕಟ ಏನು ಎಂಬುದು ಅವರಿಗೆ ಗೊತ್ತಾಗುತ್ತದೆ’ ಎಂದು ರಂಗನ್‌, ಗೋಪಿಯಮ್ಮ ಅವರ ಸಂಬಂಧಿ ಪುಟ್ಟಲಕ್ಷ್ಮಮ್ಮ ಹಿಡಿ ಶಾಪ ಹಾಕಿದರು.

‘ನಮ್ಮವರು ಇನ್ನೂ 13 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾರಿಗೆ ಏನಾಗುವುದೋ ಎಂಬ ಆತಂಕದಲ್ಲಿ ನಾವಿದ್ದೇವೆ. ವಾರದಿಂದಲೂ ಶವ ಸಂಸ್ಕಾರ ಮಾಡುತ್ತಿದ್ದೇವೆ. ಎಲ್ಲವೂ ನಮ್ಮ ಕರ್ಮ’ ಎಂದು ಮಾದಮ್ಮ ರೋದಿಸಿದರು.

ಭಾನುವಾರ ರಂಗನ್‌ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲು ಬಂದ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರ ಮುಂದೆಯೂ ಅವರು ಇದೇ ರೀತಿ ಆಕ್ರೋಶ ವ್ಯಕ್ತಪಡಿಸಿದರು.

ಕುಟುಂಬದ ಸದಸ್ಯರನ್ನು ಸಂತೈಸಿದ ಜಿಲ್ಲಾಧಿಕಾರಿ ಅವರು,ತಪ್ಪೆಸಗಿರುವ ಅಪರಾಧಿಗಳಿಗೆ ಕಾನೂನಿನಡಿಯಲ್ಲಿ ಶಿಕ್ಷೆ ವಿಧಿಸಲಾಗುವುದು ಎಂದು ಭರವಸೆ ನೀಡಿದರು.

‘ಮೌಢ್ಯ ಬಿತ್ತುತ್ತಿದ್ದಾರೆ, ಸರ್ಕಾರದ ವಶಕ್ಕೆ ಪಡೆಯಿರಿ’
‘ಸುಳ್ವಾಡಿ ಮಾರಮ್ಮ ದೇವಾಲಯದಲ್ಲಿ ಜನರ ಮೇಲೆ ಮೌಢ್ಯ ಬಿತ್ತುತ್ತಿದ್ದಾರೆ. ಶನಿವಾರ ಚಿನ್ನಪ್ಪಿ ಅವರು ಮೈಮೇಲೆ ದೇವರು ಬಂದಿರುವಾಗಿ ನಾಟಕ ಮಾಡಿದ್ದಾರೆ. ಇಂತಹ ಮೌಢ್ಯದಿಂದಾಗಿಯೇ ನಮ್ಮ ಜನರನ್ನು ಕಳೆದುಕೊಂಡಿದ್ದೇವೆ. ಆ ದೇವಸ್ಥಾನ ನಮಗೆ ಬೇಡ. ದಯವಿಟ್ಟು ಸರ್ಕಾರ ಇದನ್ನು ವಶಕ್ಕೆ ಪಡೆದುಕೊಳ್ಳಬೇಕು’ ಎಂದು ಸ್ಥಳೀಯ ಮುಖಂಡರು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರನ್ನು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು, ‘ಈಗಾಗಲೇ ದೇವಾಲಯವನ್ನು ಸರ್ಕಾರದ ವಶಕ್ಕೆ ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT