ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಹಣ್ಣು, ಎಳನೀರು ಮತ್ತು ನೆರಳಿಗೆ ಹುಡುಕಾಟ

Published 9 ಮೇ 2024, 7:29 IST
Last Updated 9 ಮೇ 2024, 7:29 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನಲ್ಲಿ ಮಳೆ ಕೈಕೊಟ್ಟಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದೆ. ಬಿಸಿಗಾಳಿಯೂ ಬೀಸುತ್ತಿದೆ. ಈ ನಡುವೆ ಸಂಜೆ ವೇಳೆ ಮೇಘರಾಜ ಹಾಜರಿ ಹಾಕಿ ಸಾಗುತ್ತಿದ್ದಾನೆ. ವರುಣನಿಗೆ ಹರಕೆ, ಪೂಜೆ ಸಲ್ಲಿಕೆಯಾಗುತ್ತಿದೆ. ದಾಹ ನೀಗಿಸಿಕೊಳ್ಳಲು ಎಳನೀರು, ಪಾನೀಯ ಮತ್ತು ಹಣ್ಣು ಸೇವನೆಗೂ ಜನ ಮುಂದಾಗಿದ್ದು, ಇವುಗಳನ್ನು ಕೊಳ್ಳಲು ಬೆಲೆ ಏರಿಕೆಯ ಬಿಸಿಯೂ ನಾಗರಿಕರನ್ನು ಕಾಡಿದೆ.  

ವಿವಿಧೆಡೆ ಮಳೆ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಹೆಸರಿಗಷ್ಟೇ ನಾಲ್ಕು ಹನಿಯ ಸಿಂಚನವಾಗಿದೆ. ಸಂಜೆ ಕೋಲ್ಮಿಂಚು, ಗುಡುಗು, ಗಾಳಿ ಅಬ್ಬರ ಕಂಡುಬಂದರೂ ವರುಣನನ್ನು ಕರೆತಂದಿಲ್ಲ. ಸುಡುಬಿಸಿಲು ಮತ್ತು ಬಿಸಿಗಾಳಿ 38-40 ಡಿಗ್ರಿ ಸೆಲ್ಸಿಯಸ್‌ ಇದ್ದು, ಜನ ಸಮುದಾಯ ಬಿಸಿಲ ರವಕ್ಕೆ ತತ್ತರಿಸುವಂತೆ ಆಗಿದೆ.

ಈ ನಡುವೆ ದೇಹ ತಂಪು ಮಾಡಿಕೊಳ್ಳಲು ಹಣ್ಣಿನ ರಸ, ಎಳನೀರು, ಕಿತ್ತಳೆ, ಮೂಸಂಬಿ ಮತ್ತು ದ್ರಾಕ್ಷಿ ಸೇವನೆಗೆ ಮುಂದಾಗಿದ್ದಾರೆ. ಮನೆ, ಕಚೇರಿ, ರಸ್ತೆ, ಬಸ್ ನಿಲ್ದಾಣ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಜ್ಜಿಗೆ, ಜ್ಯೂಸ್, ಕಬ್ಬಿನಹಾಲು ಕುಡಿದು ದೇಹದ ಉಷ್ಣಾಂಶ ಇಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಕಲ್ಲಂಗಡಿ, ಖರಬೂಜ, ನಿಂಬೆ ಷರಬತ್ತು ಅಂಗಡಿಗಳ ಮುಂದೆ ಜನರ ದಟ್ಟಣೆಯೂ ಕಂಡುಬರುತ್ತಿದೆ.   

ಎಳನೀರು ಸಿಗುತ್ತಿಲ್ಲ: ಮೂರು ತಿಂಗಳ ಹಿಂದೆ ಉತ್ತಮ ದರ್ಜೆಯ ಎಳನೀರು ₹30ಕ್ಕೆ ಸಿಗುತ್ತಿತ್ತು. 

‘ಈಗ ಎಳನೀರು ಇಳುವರಿ ಕುಸಿದಿದ್ದು, ಸಣ್ಣ ಗಾತ್ರದ ಎಳನೀರಿಗೆ ₹40 ನೀಡಬೇಕಿದೆ. ತೋಟಗಾರಿಕಾ ಬೆಳೆಗಳಿಗೆ ನೀರು ಸಮೃದ್ಧವಾಗಿ ಸಿಗುತ್ತಿಲ್ಲ. ಹಾಗಾಗಿ, ಪೂರೈಕೆಯೂ ತಗ್ಗಿದೆ. ಬೆಲೆ ಹೆಚ್ಚು ನೀಡಿದರೂ ಉತ್ತಮ ಎಳನೀರು ಸಂಗ್ರಹ ಆಗುತ್ತಿಲ್ಲ’ ಎನ್ನುತ್ತಾರೆ ಪಟ್ಟಣದ ನಾಗೇಂದ್ರ.

ಊಟ ಸೇರದು: ‘ಬಿಸಿಲು ಏರುತ್ತಲೇ ಇದೆ. ಊಟ ಮತ್ತು ತಿಂಡಿ ಹೆಚ್ಚು ಸೇವನೆ ಸಾಧ್ಯ ಇಲ್ಲ. ಹಣ್ಣಿನ ಜ್ಯೂಸ್, ಎಳನೀರು ಮತ್ತು ಷರಬತ್ತು ಕುಡಿಯಲು ಜನರು ಹೆಚ್ಚು ಒಲವು ತೋರುತ್ತಾರೆ. ವೃದ್ಧರು ಮತ್ತು ರೋಗಿಗಳಿಗೆ ಹಣ್ಣು ಬಳಕೆ ಜೀವಾಮೃತ ಆಗಿದ್ದು, ಹೆಚ್ಚಿನ ಬೇಡಿಕೆ ತಂದಿತ್ತಿದೆ. ಇದರಿಂದ ದಣಿದ ದೇಹ ಹೆಚ್ಚು ನಿರ್ಜಲೀಕರಣ ಆಗುವುದು ತಪ್ಪಲಿದೆ’ ಎನ್ನುತ್ತಾರೆ ಹೊನ್ನೂರು ಸುಂದರಮ್ಮ.

ಯಳಂದೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ತಾಜಾ ಹಣ್ಣು ಕೊಳ್ಳಲು ಜನರು ಮುಗಿಬಿದ್ದರು.

ಯಳಂದೂರು ಹೊರ ವಲಯದ ಗೂಳಿಪುರ ಮರಮ್ಮ ದೇವಸ್ಥಾನದ ಬಳಿ ಸೋಮವಾರ ಮಕ್ಕಳು ನೆರಳಿನಲ್ಲಿ ಕ್ರಿಕೆಟ್ ಆಡಿ ರಜಾ ಮಜಾ ಅನುಭವಿಸಿದರು.

ಯಳಂದೂರು ಹೊರ ವಲಯದ ಗೂಳಿಪುರ ಮಾರಮ್ಮ ದೇವಸ್ಥಾನದ ಬಳಿ ಸೋಮವಾರ ಮಕ್ಕಳು ನೆರಳಿನಲ್ಲಿ ಕ್ರಿಕೆಟ್ ಆಡಿದರು
ಯಳಂದೂರು ಹೊರ ವಲಯದ ಗೂಳಿಪುರ ಮಾರಮ್ಮ ದೇವಸ್ಥಾನದ ಬಳಿ ಸೋಮವಾರ ಮಕ್ಕಳು ನೆರಳಿನಲ್ಲಿ ಕ್ರಿಕೆಟ್ ಆಡಿದರು
ಬಿಸಿಲಿಗೆ ತಗ್ಗಿದ ಚಿಣ್ಣರ ಆಟ
ಬೇಸಿಗೆ ರಜೆ ಮಕ್ಕಳಲ್ಲಿ ಸಂತಸ ತಂದಿದೆ. ಆದರೆ ಅತಿಯಾದ ಬಿಸಿಲಿಗೆ ಚಿಣ್ಣರ ಕುಣಿದಾಟ ತಗ್ಗಿದೆ. ಹಾಗಾಗಿ ಮರದ ನೆರಳಿನಲ್ಲಿ ಆಟ ಮಧ್ಯಾಹ್ನ ಶಾಲೆಯಲ್ಲಿ ಊಟ ಎನ್ನುವಂತಾಗಿದೆ. ಗೋಲಿ ಲಗೋರಿ ಬುಗುರಿ ಆಡುವುದು ನಿಂತಿದೆ. ಕೆಲವು ವಿದ್ಯಾರ್ಥಿಗಳು ತೆಂಗಿನ ಮಟ್ಟೆಯ ಬ್ಯಾಟ್ ಹಾಗೂ ಕಲ್ಲುಗಳನ್ನೇ ವಿಕೆಟ್ ಮಾಡಿಕೊಂಡು ಕ್ರಿಕೆಟ್ ಆಡುತ್ತ ಕಾಲ ಕಳೆಯುತ್ತಾ ಸಂಭ್ರಮಿಸುತ್ತಿದ್ದಾರೆ. ‘ಕೆರೆ ಕಟ್ಟೆಯಲ್ಲಿ ನೀರು ಬತ್ತಿದ್ದು ಈಜು ಕಲಿಕೆ ಸಾಧ್ಯವಾಗಿಲ್ಲ’ ಎಂದು ಗೂಳಿಪುರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾದ ರಂಜನ್ ಭೀಮ ಮಹದೇವಪ್ರಸಾದ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT