ಗುರುವಾರ , ಜೂನ್ 30, 2022
23 °C
ಮೂಕ ಜೀವಿಗಳಿಗೆ ನೂರಾರು ರೂಪಾಯಿ ಖರ್ಚು

ಬಿಸಿಲು; ಪ್ರಾಣಿ, ಪಕ್ಷಿಗೆ ನೀರು, ಕಾಳು- ಕೊಳ್ಳೇಗಾಲ ಜನರ ಮಾನವೀಯ ಮುಖ:

ಅವಿನ್ ಪ್ರಕಾಶ್ ವಿ. Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ರಣ ಬೇಸಿಗೆಯ ಈ ದಿನಗಳಲ್ಲಿ ಬಿಸಿಲಿನ ಝಳದಿಂದ ತತ್ತರಿಸಿದ ಪಕ್ಷಿಗಳು ಹಾಗೂ ಜಾನುವಾರುಗಳಿಗೆ ನೀರು, ಕಾಳು, ಆಹಾರದ ವ್ಯವಸ್ಥೆಯನ್ನು ಒದಗಿಸಿ ತಾಲ್ಲೂಕಿನಾದ್ಯಂತ ಹಲವರು ಮಾನವೀಯತೆ ಮೆರೆಯುತ್ತಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ, ಬೆಟ್ಟ, ಗುಡ್ಡ ಮತ್ತು ನಿರ್ಜನ ಪ್ರದೇಶದಲ್ಲಿ ಪಕ್ಷಿಗಳಿಗೆ ಗಿಡ ಮರಗಳಲ್ಲಿ ನೀರಿನ ವ್ಯವಸ್ಥೆ, ಪ್ರಾಣಿಗಳಿಗೆ ಮೇವು, ನೀರು ಒದಗಿಸುವ ಸೇವೆಯನ್ನು ಅನೇಕ ಯುವಕರು ಮಾಡುತ್ತಿದ್ದು, ಸಂಘ ಸಂಸ್ಥೆಗಳು ಕೂಡಾ ಅವರಿಗೆ ಜೊತೆಯಾಗುತ್ತಿವೆ.

ನಗರದ ಬಡಾವಣೆಗಳಲ್ಲಿ ಬೀದಿ ನಾಯಿಗಳಿಗೆ ನಿತ್ಯವೂ ₹ 500ಕ್ಕೂ ಹೆಚ್ಚು ಖರ್ಚು ಮಾಡಿ ಬಿಸ್ಕತ್‌, ಬ್ರೆಡ್ ಹಾಕುವವರು ಇದ್ದಾರೆ. ಪಕ್ಷಿಗಳಿಗಾಗಿ ಮನೆಯ ತಾರಸಿಯಲ್ಲಿ ಕಾಳು, ತರಕಾರಿ ಸೇರಿದಂತೆ ಇತರ ಆಹಾರ ಪದಾರ್ಥಗಳನ್ನು ಹಾಕುವವರೂ ಇದ್ದಾರೆ. ಬೀದಿ ದನಗಳಿಗೆ ನಿತ್ಯವೂ ಬೆಲ್ಲ ಹಾಗೂ ಬಾಳೆ ಹಣ್ಣುಗಳನ್ನು ನೀಡುವುದನ್ನು ಹವ್ಯಾಸ ಮಾಡಿಕೊಂಡವರು ಇದ್ದಾರೆ. 

ಮಡಕೆಗಳಲ್ಲಿ ನೀರು: ಕೆಲವು ಅಂಗಡಿಗಳಲ್ಲಿ ಮತ್ತು ಹೋಟೆಲ್‍ಗಳಲ್ಲಿ ಬೇಸಿಗೆ ಕಾಲದಲ್ಲಿ ಮಡಕೆಗಳು ಹಾಗೂ ಹೂಜಿಗಳಲ್ಲಿ ನೀರನ್ನು ಇಡುತ್ತಾರೆ. ನಗರದ ಹೊಸ ಬಸ್ ನಿಲ್ದಾಣ, ದೇವಾಂಗ ಪೇಟೆ, ಬಳೆ ಪೇಟೆ ಸೇರಿದಂತೆ ಅನೇಕ ಕಡೆ ಮಡಕೆಗಳಲ್ಲಿ ನೀರು ಇಟ್ಟಿರುವುದನ್ನು ಕಾಣಬಹುದು.

ನಗರದ ಆದರ್ಶ ಬಡಾವಣೆಯಲ್ಲಿ ಪ್ರಕಾಶ್ ಎಂಬುವವರು ಮನೆಯ ಕಾಂಪೌಂಡ್‌ ಮೇಲೆ ಮತ್ತು ಮಹಡಿ ಮೇಲೆ ಮಣ್ಣಿನ ಮಡಕೆಯಲ್ಲಿ ನೀರನ್ನು ತುಂಬಿಸಿ ಪಕ್ಷಿಗಳಿಗಾಗಿ ಇಟ್ಟಿದ್ದಾರೆ. ಜೊತೆಗೆ ಹಲವು ಮನೆಗಳ ಬಳಿ ಇರುವ ಗಿಡಮರಗಳಲ್ಲಿ ಪಕ್ಷಿಗಳಿಗಾಗಿ ನೀರಿನ ಬಾಟಲಿ, ಚಿಕ್ಕ ಕುಡಿಕೆಗಳನ್ನು ಇಟ್ಟು ನೀರು ತುಂಬಿಸಲಾಗಿದೆ. ತಾಲ್ಲೂಕಿನ ಸರಗೂರು, ಧನಗೆರೆ, ಜಿನಕನಹಳ್ಳಿ ಸೇರಿದಂತೆ ಅನೇಕ ಹಳ್ಳಿಗಳ ಚಾವಡಿಯಲ್ಲಿ ಮಡಕೆ ಇಟ್ಟು ನೀರನ್ನು ನೀಡುತ್ತಾರೆ.

ಮರದ ನೆರಳು ಆಶ್ರಯ

‘ಸುಡು ಬಿಸಿಲಿನಲ್ಲಿ ಪ್ರಾಣಿ ಪಕ್ಷಿಗಳು ಮೇವು ಬಿಟ್ಟು ಮರದ ಕೆಳಗೆ ಆಶ್ರಯವನ್ನು ಪಡೆಯುತ್ತವೆ. ಆದರೆ ಈ ಸಮಯದಲ್ಲಿ ಪ್ರಾಣಿ ಪಕ್ಷಿಗಳು ಮೇವಿಗಿಂತ ನೀರನ್ನು ಹೆಚ್ಚಾಗಿ ಕುಡಿಯುತ್ತವೆ. ಇನ್ನೂ ಕೆಲವು ಪ್ರಾಣಿ ಪಕ್ಷಿಗಳು ಕೆರೆ ಕಟ್ಟೆಗಳ ಸಮೀಪದಲ್ಲಿಯೇ ಮೇವನ್ನು ಬಯಸುತ್ತವೆ’ ಎಂದು ಪರಿಸರ ಪ್ರೇಮಿ ಮನೋಹರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು