ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುನೀಲ್‌ ಬೋಸ್‌ 3 ಲಕ್ಷ ಮತಗಳಿಂದ ಗೆಲುವು ಸಾಧಿಸುತ್ತಾರೆ: ಸಿದ್ದರಾಮಯ್ಯ

ನಾಮಪತ್ರ ಸಲ್ಲಿಸಿದ ಸುನೀಲ್‌ ಬೋಸ್‌
Published 3 ಏಪ್ರಿಲ್ 2024, 15:15 IST
Last Updated 3 ಏಪ್ರಿಲ್ 2024, 15:15 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸುನೀಲ್‌ ಬೋಸ್‌ ಬುಧವಾರ ನಾಮಪತ್ರ ಸಲ್ಲಿಸಿದರು. 

ಒಟ್ಟು ನಾಲ್ಕು ಬಾರಿ ಅವರು ಉಮೇದುವಾರಿಕೆಯನ್ನು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಸಿ.ಟಿ.ಶಿಲ್ಪಾ ನಾಗ್‌ ಅವರಿಗೆ ಸಲ್ಲಿಸಿದರು. 

ಬೆಳಿಗ್ಗೆ ಸಚಿವರಾದ ಪರಮೇಶ್ವರ, ಕೆ.ವೆಂಕಟೇಶ್‌, ಶಾಸಕ ಸಿ.ಪುಟ್ಟರಂಗಶೆಟ್ಟಿ ಮತ್ತು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರೊಂದಿಗೆ ಮೊದಲ ಬಾರಿ ನಾಮಪತ್ರ ಸಲ್ಲಿಸಿದರೆ, ಮಧ್ಯಾಹ್ನ ರೋಡ್‌ ಶೋ ನಡೆಸಿದ ನಂತರ ಸಚಿವರಾದ ಸತೀಶ್‌ ಜಾರಕಿಹೊಳಿ, ತಂದೆ, ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹಾಗೂ ಸ್ಥಳೀಯ ಶಾಸಕರು, ಮುಖಂಡರೊಂದಿಗೆ ಮೂರು ಬಾರಿ ಉಮೇದುವಾರಿಕೆ ಸಲ್ಲಿಸಿದರು. 

ಸಿ.ಎಂ, ಡಿ.ಸಿಎಂ ರೋಡ್‌ ಶೋ: ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಚಿವರು ಹಾಗೂ ಶಾಸಕರು ಅಭ್ಯರ್ಥಿ ಬೋಸ್‌ ಪರ ನಗರದಲ್ಲಿ ರೋಡ್‌ ಶೋ ನಡೆಸಿದರು. ಭುವನೇಶ್ವರಿ ವೃತ್ತದಿಂದ ಆರಂಭವಾದ ರೋಡ್‌ ಶೋ, ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಡಳಿತ ಭವನದ ಗೇಟ್‌ವರೆಗೆ ನಡೆಯಿತು. 

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಜಿ.ಪರಮೇಶ್ವರ ಅವರು ರೋಡ್‌ ಶೋನಲ್ಲಿ ಸ್ವಲ್ಪ ದೂರ ಸಾಗಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಮೈಸೂರಿಗೆ ವಾ‍‍ಪಸ್‌ ಆದರು. ನಂತರ ಸಚಿವರಾದ ಸತೀಶ್‌ ಜಾರಕಿಹೊಳಿ, ಮಹದೇವಪ್ಪ, ಶಾಸಕರು, ಮುಖಂಡರು ರೋಡ್‌ ಶೋ ನಡೆಸಿದರು. ಕ್ಷೇತ್ರ ವ್ಯಾಪ್ತಿಯ ಎಂಟೂ ವಿಧಾನಸಭಾ ಕ್ಷೇತ್ರಗಳಿಂದ ಬಂದಿದ್ದ ಸಾವಿರಾರು ಕಾರ್ಯಕರ್ತರು ರೋಡ್‌ ಶೋದಲ್ಲಿ ಭಾಗಿಯಾದರು. 

3 ಲಕ್ಷ ಮತಗಳಿಂದ ಗೆಲುವು: ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೂರು ದಿನಗಳಿಂದ ಮೈಸೂರು, ಚಾಮರಾಜನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಓಡಾಡಿದ್ದೇನೆ. ಎರಡೂ ಜಿಲ್ಲೆಗಳಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಬಹಳ ಹುರುಪಿದೆ. ದಿವಂಗತ ಧ್ರುವನಾರಾಯಣ ಅವರು ಎರಡು ಬಾರಿ ಸಂಸದರಾಗಿದ್ದಾಗ ಈ ಹುರುಪನ್ನು ನೋಡಿದ್ದೆ. ಈ ಬಾರಿ ಸುನೀಲ್‌ ಬೋಸ್‌ 3 ಲಕ್ಷ ಮತಗಳಿಂದ ಗೆಲುವು ಸಾಧಿಸಲಿದ್ದಾರೆ’ ಎಂದು ಹೇಳಿದರು. 

‘ಧ್ರುವನಾರಾಯಣ 2019ರಲ್ಲಿ ಸೋತರೂ ಸುಮ್ಮನೆ ಕೂರಲಿಲ್ಲ. ಇಡೀ ಕ್ಷೇತ್ರದಲ್ಲಿ ಸುತ್ತಾಡಿ ಜನ ಸಂಪರ್ಕ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದ್ದರು. ಸುನೀಲ್ ಕೂಡ ಅವರ ಹಾದಿಯಲ್ಲೇ ಸಾಗಬೇಕು’ ಎಂದರು. 

‘ಚಾಮರಾಜನಗರ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಏಳರಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಹನೂರು ಕ್ಷೇತ್ರ ಮಾತ್ರ ನಮ್ಮ ಕೈಲಿಲ್ಲ. ಅಲ್ಲಿನ ಮಾಜಿ ಶಾಸಕ ಆರ್.ನರೇಂದ್ರ ಬಹುಮತ ಕೊಡಿಸುವುದಾಗಿ ಹೇಳಿದ್ದಾರೆ’ ಎಂದರು. 

ಕಾಂಗ್ರೆಸ್‌ ಅಲೆ: ಎಲ್ಲ ಕಡೆ ಕಾಂಗ್ರೆಸ್ ಅಲೆಯಿದೆ. ಮೋದಿ ಅಲೆಯಿಲ್ಲ. ಕರ್ನಾಟಕಕ್ಕೆ ಮೋದಿಯವರು ಏನನ್ನೂ ಮಾಡಿಲ್ಲ. ಏಳು ಕೋಟಿ ಕನ್ನಡಿಗರಿಗೆ ಅನ್ಯಾಯ ಮಾಡಿದ್ದಾರೆ. ಆದರೂ ರಾಜ್ಯದ ಬಿಜೆಪಿ ಮುಖಂಡರು ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

10 ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದ ಬಿಜೆಪಿ ನುಡಿದಂತೆ ನಡೆಯಲಿಲ್ಲ. ಸುಳ್ಳನ್ನು ಹೇಳಿ ಜನರಿಗೆ ಮೋಸ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ನುಡಿದಂತೆ ನಡೆದಿದೆ. 2013ರಲ್ಲಿ ನಮ್ಮ ಸರ್ಕಾರವಿದ್ದಾಗ ಎಲ್ಲ ಭರವಸೆಗಳನ್ನು ಈಡೇರಿಸಿತ್ತು. ಈ ಬಾರಿ ಐದು ಗ್ಯಾರೆಂಟಿಗಳನ್ನು ಈಡೇರಿಸಿದ್ದೇವೆ’ ಎಂದರು. 

ಸಚಿವರಾದ ಪರಮೇಶ್ವರ, ಸತೀಶ ಜಾರಕಿಹೊಳಿ, ಎಚ್.ಸಿ.ಮಹದೇವಪ್ಪ, ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿದರು. ಅಭ್ಯರ್ಥಿ ಸುನೀಲ್ ಬೋಸ್, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಚ್.ಎಂ.ಗಣೇಶಪ್ರಸಾದ್, ಅನಿಲ್ ಚಿಕ್ಕಮಾದು, ರವಿಶಂಕರ್, ದರ್ಶನ್ ಧ್ರುವನಾರಾಯಣ್, ಮಾಜಿ ಶಾಸಕರಾದ ಆರ್.ನರೇಂದ್ರ, ಜಿ.ಎನ್.ನಂಜುಂಡಸ್ವಾಮಿ, ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ, ಕಾಡಾ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಪದಾಧಿಕಾರಿಗಳು, ಮುಖಂಡರು ಇದ್ದರು. 

ಪೂಜೆ: ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಸುನೀಲ್‌ ಬೋಸ್‌ ಅವರು ಸಚಿವರು, ಶಾಸಕರೊಂದಿಗೆ ಚಾಮರಾಜೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಅವರು ಬುಧವಾರ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ನಾಗ್‌ ಅವರಿಗೆ ನಾಮಪತ್ರ ಸಲ್ಲಿಸಿದರು. ಯತೀಂದ್ರ ಸಿದ್ದರಾಮಯ್ಯ ಶಾಸಕ ಸಿ.ಪುಟ್ಟರಂಗಶೆಟ್ಟಿ ಸಚಿವರಾದ ಪರಮೇಶ್ವರ ಕೆ.ವೆಂಕಟೇಶ್‌ ಭಾಗವಹಿಸಿದ್ದರು
ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಅವರು ಬುಧವಾರ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ನಾಗ್‌ ಅವರಿಗೆ ನಾಮಪತ್ರ ಸಲ್ಲಿಸಿದರು. ಯತೀಂದ್ರ ಸಿದ್ದರಾಮಯ್ಯ ಶಾಸಕ ಸಿ.ಪುಟ್ಟರಂಗಶೆಟ್ಟಿ ಸಚಿವರಾದ ಪರಮೇಶ್ವರ ಕೆ.ವೆಂಕಟೇಶ್‌ ಭಾಗವಹಿಸಿದ್ದರು
ಕಾಂಗ್ರೆಸ್‌ ಹಮ್ಮಿಕೊಂಡಿದ್ದ ರೋಡ್‌ ಶೋನಲ್ಲಿ ಅಭ್ಯರ್ಥಿ ಸುನೀಲ್‌ ಬೋಸ್‌ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಚಿವರಾದ ಪರಮೇಶ್ವರ ಮಹದೇವಪ್ಪ ಸತೀಶ ಜಾರಕಿಹೊಳಿ ಇತರರು ಪಾಲ್ಗೊಂಡಿದ್ದರು
ಕಾಂಗ್ರೆಸ್‌ ಹಮ್ಮಿಕೊಂಡಿದ್ದ ರೋಡ್‌ ಶೋನಲ್ಲಿ ಅಭ್ಯರ್ಥಿ ಸುನೀಲ್‌ ಬೋಸ್‌ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಚಿವರಾದ ಪರಮೇಶ್ವರ ಮಹದೇವಪ್ಪ ಸತೀಶ ಜಾರಕಿಹೊಳಿ ಇತರರು ಪಾಲ್ಗೊಂಡಿದ್ದರು

ಸುಳ್ಳು ಹೇಳಿದ ಅಮಿತ್‌ ಶಾ’ ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ರಾಜ್ಯಕ್ಕೆ ಬಂದಿದ್ದ ಕೇಂದ್ರದ ಗೃಹ ಸಚಿವ ಮಂಗಳವಾರ ಚನ್ನಪಟ್ಟಣದಲ್ಲಿ ಕರ್ನಾಟಕ ಸರ್ಕಾರ ಬರಪರಿಹಾರಕ್ಕೆ ಮೂರು ತಿಂಗಳು ತಡವಾಗಿ ಮನವಿ ಸಲ್ಲಿಸಿದೆ ಎಂದು ದೊಡ್ಡ ಸುಳ್ಳು ಹೇಳಿದ್ದಾರೆ’ ಎಂದರು.  ‘ಸೆಪ್ಟೆಂಬರ್‌ನಲ್ಲಿ ಕಂದಾಯ ಸಚಿವರು ಕೇಂದ್ರದ ಗ್ರಾಮೀಣಾಭಿವೃದ್ದಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಪ್ರಧಾನಿ ಮೋದಿ ಅವರನ್ನು ನಾನು ಖುದ್ದಾಗಿ ಭೇಟಿ ಮಾಡಿ ರೈತರ ಕಷ್ಟ ವಿವರಿಸಿದ್ದೆ. ಬರ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿದ್ದೆ’ ಎಂದರು. ‘ಆದರೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಮೂರೂವರೆ ತಿಂಗಳಾದರೂ ಎನ್‌ಡಿಆರ್‌ಎಫ್‌ನಿಂದ ಒಂದು ರೂಪಾಯಿ ಪರಿಹಾರವನ್ನೂ ನೀಡಿಲ್ಲ. ಜಾನುವಾರು ಮೇವು ಕುಡಿಯುವ ನೀರು ಮನರೇಗಾ ರೈತರಿಗೆ ಬರ ಪರಿಹಾರ ವಿತರಿಸಲು ಹಣ ನೀಡಲಿಲ್ಲ. ಇಂತಹವನ್ನು ನೀವು ಸಹಿಸಿಕೊಳ್ಳುವಿರಾ’ ಎಂದು ಅವರು ಪ್ರಶ್ನಿಸಿದರು.  ‘ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ’ ಎಂದು ಮನವಿ ಮಾಡಿದರು. 

2ನೇ ಅಂಬೇಡ್ಕರ್‌ ಮಾಡುವ ಆಸೆ ಇತ್ತು: ಡಿಕೆಶಿ ‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ ‘ಸಂಸತ್ತಿಗೆ ಮಹದೇವಪ್ಪ ಅವರನ್ನು ಕಳುಹಿಸಿ ಎರಡನೇ ಅಂಬೇಡ್ಕರರನ್ನಾಗಿ ಮಾಡಬೇಕು ಎನ್ನುವ ಆಸೆ ಇತ್ತು. ಅವರು ಒಪ್ಪಲಿಲ್ಲ. ಅವರ ಮಗನಿಗೆ ಟಿಕೆಟ್‌ ಕೊಟ್ಟಿದ್ದೇವೆ. 3 ಲಕ್ಷ ಮತಗಳಿಂದ ಅವರನ್ನು ಗೆಲ್ಲಿಸಬೇಕು. ಕ್ಷೇತ್ರದ ಮತದಾರರು ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷವನ್ನು ಬಲಪಡಿಸಬೇಕು’ ಎಂದರು.  ‘ಸುನೀಲ್ ಬೋಸ್ ನನ್ನ ಮಗನಿದ್ದಂತೆ. ಧ್ರುವನಾರಾಯಣ ಕನಸನ್ನು ನನಸು ಮಾಡಲು ನಾವು ಸುನೀಲ್ ಜೊತೆ ನಿಂತಿದ್ದೇವೆ. ಸಿದ್ದರಾಮಯ್ಯ ಅವರು ಚಾಮರಾಜನಗರದ ಮನೆ ಮಗ ಇದ್ದಂತೆ. ಅವರ ಮೇಲೆ ನಂಬಿಕೆ ಇಟ್ಟು ಮತ ನೀಡಬೇಕು’ ಎಂದರು.   ‘ಕಮಲ ಕೆರೆಯಲ್ಲಿ ಇದ್ದರೆ ಚೆಂದ ತೆನೆ ಹೊಲದಲ್ಲಿ ಇದ್ದರೆ ಚೆಂದ ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದರೆ ಚೆಂದ. ಕೊಟ್ಟ ಮಾತನ್ನು ನಾವು ಉಳಿಸಿಕೊಂಡು ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ’ ಎಂದು ಶಿವಕುಮಾರ್‌ ಹೇಳಿದರು.  ‘ಹಾಲಿ ಸಂಸದ ಶ್ರೀನಿವಾಸ ಪ್ರಸಾದ್ ಬೋಸ್‌ಗೆ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಈಗ ಜನರು ಆಶೀರ್ವಾದ ಮಾಡಬೇಕು. ಶ್ರೀನಿವಾಸ್ ಪ್ರಸಾದ್ ಬೆಂಬಲದ ಜೊತೆಗೆ ಅವರ ಎಲ್ಲ ಹಿತೈಷಿಗಳ ಬೆಂಬಲಿಗರ ಶಕ್ತಿಯನ್ನು ನಮಗೆ ನೀಡಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT