ಮಂಗಳವಾರ, ಜೂನ್ 28, 2022
23 °C

‘ಮನುಷ್ಯನಿಗೆ ಬುದ್ಧನ ಪ್ರೀತಿ, ಸಾತ್ವಿಕತೆ ಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಹಿಂಸೆ ನಮ್ಮ ದೇಶವನ್ನು, ನಮ್ಮ ಬದುಕನ್ನು ಅಸ್ತವ್ಯಸ್ತ ಮಾಡುತ್ತಿರುವ ಈ ಕಾಲದಲ್ಲಿ ಹಿಂಸೆಯನ್ನು ದೂರಮಾಡುವ ಬುದ್ಧನ ಪ್ರೀತಿ ಹಾಗೂ ಸಾತ್ವಿಕತೆ ಮನುಷ್ಯನಿಗೆ ಬೇಕಾಗಿದೆ’ ಎಂದು ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್‌.ಜಯದೇವ ಅವರು ಸೋಮವಾರ ಅಭಿಪ್ರಾಯ ಪಟ್ಟರು. 

ದೀನಬಂಧು ಟ್ರಸ್ಟ್‌, ಬುದ್ಧಪೂರ್ಣಿಮೆ ಅಂಗವಾಗಿ ದೀನಬಂಧು ಮಕ್ಕಳ ಮನೆಯಲ್ಲಿ ಹಮ್ಮಿಕೊಂಡಿದ್ದ ಬಾನ್ಸುರಿ ವಾದಕ ರವಿಶಂಕರ್‌ ಮಿಶ್ರಾ ಹಾಗೂ ತಬಲಾ ವಾದಕ ಡಾ. ಉದಯರಾಜ್‌ ಕರ್ಪೂರ್‌ ಅವರ ಸ್ವರಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಗೌತಮ ಬುದ್ಧನ ವೈಚಾರಿಕ, ಬೌದ್ಧಿಕ ವಿಚಾರಗಳಿಗಿಂತ ಅವನ ಪ್ರೀತಿ ಹೆಚ್ಚು ವಿಶೇಷ. ಭಾರತದಲ್ಲಿ ಎಲ್ಲಿ ನೆಲ ಅಗೆದರೂ ಅಲ್ಲಿ ಬುದ್ಧನ ಪ್ರತಿಮೆ ಸಿಗುತ್ತದೆ. 2,500 ವರ್ಷಗಳಿಂದಲೂ ಇಡೀ ಜಗತ್ತನ್ನು ಬುದ್ಧ ಪ್ರಭಾವಿಸುತ್ತಾ ಇದ್ದಾನೆ’ ಎಂದರು. 

‘ಬುದ್ಧ ಇಡೀ ಜಗತ್ತನ್ನು ಪ್ರೀತಿಸಿದ. ಅದಕ್ಕಾಗಿ ಅವನನ್ನು ಜಗತ್ತು ಪ್ರೀತಿಸುತ್ತದೆ. ಅವನು ಇಲ್ಲದೇ ಇದ್ದರೂ ಅವನ ಪ್ರೀತಿ ಚಂದ್ರನ ಬೆಳದಿಂಗಳ ಮೂಲಕ ಭೂಮಿಗೆ ಬರುತ್ತದೆ. ಬುದ್ಧ ಪೂರ್ಣಿಮೆಯ ಬೆಳದಿಂಗಳನ್ನು ನೋಡಿದ ಕೂಡಲೇ ಬುದ್ಧನ ಪ್ರೀತಿಯ ಅನುಭವವಾಗುತ್ತದೆ’ ಎಂದರು. 

ರವಿಶಂಕರ್‌ ಮಿಶ್ರಾ ಹಾಗೂ ತಬಲಾ ವಾದಕ ಉದಯರಾಜ್‌ ಕರ್ಪೂರ್‌ ಅವರು ಎರಡು ಗಂಟೆಗೂ ಹೆಚ್ಚು ಕಾಲ ಸಂಗೀತ ರಸದೌತಣವನ್ನು ಬಡಿಸಿದರು. ದೀನಬಂಧು ಸಂಸ್ಥೆಯ ಯುಟ್ಯೂಬ್‌ ಚಾನೆಲ್‌ನಲ್ಲಿ ಕಾರ್ಯಕ್ರಮದ ಸ್ವರ ಸಂಗಮದ ನೇರಪ್ರಸಾರವನ್ನೂ ನೂರಾರು ಜನರು ವೀಕ್ಷಿಸಿದರು. 

ಸಂಸ್ಥೆಯ ಆಡಳಿತಾಧಿಕಾರಿ ಪ್ರಜ್ಞಾ ಸೇರಿದಂತೆ ಹಲವರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು