ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಲ್‌ ನೇಮಕಾತಿ ಅವ್ಯವಹಾರ: ಕ್ರಮಕ್ಕೆ ಆಗ್ರಹ

ಮತ್ತೆ ಪ್ರತಿಭಟನೆ, ರಾಜ್ಯಪಾಲರ ಭೇಟಿ, ಕಾನೂನು ಹೋರಾಟದ ಎಚ್ಚರಿಕೆ
Last Updated 17 ಸೆಪ್ಟೆಂಬರ್ 2020, 15:27 IST
ಅಕ್ಷರ ಗಾತ್ರ

ಚಾಮರಾಜನಗರ: ‘ಜಿಲ್ಲಾ ಹಾಲು ಒಕ್ಕೂಟದಲ್ಲಿ (ಚಾಮುಲ್‌) 74 ಹುದ್ದೆಗಳಿಗೆ ನಡೆದ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ಸಲ್ಲಿಸಿದ್ದರೂ ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ. ತಪ್ಪಿತಸ್ಥರ ವಿರುದ್ಧ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಕ್ರಮ ನೇಮಕಾತಿಯ ವಿರುದ್ಧ ವಿವಿಧ ಸಂಘಟನೆಗಳು ಒಟ್ಟಾಗಿ ಐದಾರು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿವೆ. ನಿರಂತರ ಹೋರಾಟ ಮಾಡಿದ ನಂತರ, ಅಂದಿನ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ತನಿಖೆಗಾಗಿ ನಾಲ್ವರ ತಂಡ ರಚಿಸಿದ್ದರು. ತಂಡವು 320 ಪುಟಗಳ ತನಿಖಾ ವರದಿಯನ್ನು ನೀಡಿದೆ. ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ನೀಡಿದೆ. ಆದರೆ, ಇದುವರೆಗೆ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ’ ಎಂದು ಆರೋಪಿಸಿದರು.

‘ಈ ಹಿಂದೆ ನಗರಕ್ಕೆ ಸಹಕಾರ ಸಚಿವ ಸೋಮಶೇಖರ್‌ ಅವರು ಬಂದಿದ್ದಾಗ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ‘ಅಕ್ರಮ ನಡೆದಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು. ಆದರೆ ಇದುವರೆಗೆ ಏನೂ ಮಾಡಿಲ್ಲ’ ಎಂದು ದೂರಿದರು.

‘ಅಕ್ರಮ ನೇಮಕಾತಿ ಆದೇಶಗಳನ್ನು ರದ್ದು ಪಡಿಸಬೇಕು. ಚಾಮುಲ್‌ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್‌ ಮಾಡಬೇಕು. ಅಭ್ಯರ್ಥಿಗಳಿಂದ ಪಡೆದಿರುವ ಹಣವನ್ನು ವಾಪಸ್‌ ನೀಡಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು’ ಎಂದು ಆಗ್ರಹಿಸಿದರು.

ಕಾನೂನು ಹೋರಾಟ: ‘ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಕೆ.ವೀರಭದ್ರಸ್ವಾಮಿ ಅವರು ಮಾತನಾಡಿ, ‘ಸಹಕಾರ ಸಚಿವರು ತನಿಖಾ ವರದಿ ಆಧರಿಸಿ ಕ್ರಮವಹಿಸಬೇಕು. ಇಲ್ಲದಿದ್ದರೆ ರಾಜ್ಯಪಾಲರ ಮೊರೆ ಹೋಗುತ್ತೇವೆ. ಅನ್ಯಾಯದ ವಿರುದ್ದ ಕಾನೂನು ಹೋರಾಟವನ್ನೂ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಜಿಲ್ಲಾ ಅಭಿವೃದ್ದಿ ಹೋರಾಟ ಸಮಿತಿ ಗೌರವಾಧ್ಯಕ್ಷ ಬಂಗಾರಸ್ವಾಮಿ, ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ಜಿಲ್ಲಾಧ್ಯಕ್ಷ ಪರಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಬದನಗುಪ್ಪ, ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT