ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಸಾಹಿತ್ಯ ಸಮ್ಮೇಳನ: ಸವಾಲು ಹೆಚ್ಚಿಸುವ ಅಭಿವೃದ್ಧಿ

ಅಭಿವೃದ್ಧಿ ಮತ್ತು ಸವಾಲುಗಳು ಕುರಿತ ವಿಚಾರಗೋಷ್ಠಿ
Last Updated 10 ಫೆಬ್ರುವರಿ 2023, 6:39 IST
ಅಕ್ಷರ ಗಾತ್ರ

ಕೊಳ್ಳೇಗಾಲ: ‘ರಾಜ್ಯದಲ್ಲಿ ಅಭಿವೃದ್ಧಿ ಮತ್ತು ಸವಾಲುಗಳು ಹೆಚ್ಚಾಗುತ್ತಿವೆ. ಅಭಿವೃದ್ಧಿ ಹೆಚ್ಚಾದಷ್ಟೂ ಸವಾಲುಗಳೂ ಹೆಚ್ಚು ಎದುರಾಗುತ್ತವೆ’ ಎಂದು ಪ್ರೊ.ಡಿ.ದೊಡ್ಡಲಿಂಗೇಗೌಡ ಗುರುವಾರ ಹೇಳಿದರು.

ನಗರದ ಎಂ.ಜಿ.ಎಸ್.ವಿ ಕಾಲೇಜು ಮೈದಾನದಲ್ಲಿ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಗುರುವಾರ, ‘ಅಭಿವೃದ್ಧಿ ಮತ್ತು ಸವಾಲುಗಳು’ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ರಾಜಕಾರಣಿಗಳು, ಅಧಿಕಾರಿಗಳು, ಹಾಗೂ ದೊಡ್ಡ ದೊಡ್ಡ ಮನುಷ್ಯರು ಸಭೆ ಸಮಾರಂಭಗಳಲ್ಲಿ ರೈತರನ್ನು ಹಾಡಿ ಹೊಗಳುತ್ತಾರೆ. ರೈತರ ಸಮಸ್ಯೆಗಳಿಗೆ ಯಾವ ಅಧಿಕಾರಿಗಳೂ ಸ್ಪಂದಿಸುವುದಿಲ್ಲ. ಕಚೇರಿಗೆ ಬಂದರೆ ಕಾಯಿಸುತ್ತಾರೆ. ಇದು ಈ ದೇಶದ ಅಭಿವೃದ್ಧಿ ಮತ್ತು ಸವಾಲು. ಅಮೆರಿಕದಲ್ಲಿ ರೈತರನ್ನು ರಾಜಕಾರಣಿಗಳು, ಅಧಿಕಾರಿಗಳು ಬಹಳ ಗೌರವ ಕೊಟ್ಟು ಸ್ಪಂದಿಸುತ್ತಾರೆ. ಹೊರ ದೇಶಗಳಲ್ಲಿ ಸಾವಿರ ಎಕರೆಯಷ್ಟು ಜಾಗದಲ್ಲಿ ವ್ಯವಸಾಯವನ್ನು ಒಬ್ಬ ರೈತನೇ ಮಾಡುತ್ತಾನೆ. ಆದರೆ ನಮ್ಮಲ್ಲಿ ಐದು ಎಕರೆಯಲ್ಲೇ ಕೃಷಿ ಮಾಡುವುದಿಲ್ಲ’ ಎಂದರು.

‘ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ. ಶಿಕ್ಷಣದ ಖಾಸಗೀಕರಣ ಹೆಚ್ಚಾಗಿ, ನಾಯಿಕೊಡೆಗಳಂತೆ ಖಾಸಗಿ ಸಂಸ್ಥೆಗಳು ಸ್ಥಾಪನೆಯಾಗುತ್ತಿರುವುದು ಕಾರಣ. ಶಿಕ್ಷಣ ಉದ್ಯಮದ ಕ್ಷೇತ್ರವಾಗಿದೆ. ಶಿಕ್ಷಣದ ನೆಪದಲ್ಲಿ ಅನೇಕ ರಾಜಕಾರಣಿಗಳು ದುಡ್ಡು ಮಾಡುವಲ್ಲಿ ಮುಂದಾಗಿದ್ದಾರೆ’ ಎಂದರು.

ಶಿಕ್ಷಣ ಕ್ಷೇತ್ರದ ಬಗ್ಗೆ ಮಾತನಾಡಿದ ರಾಜ್ಯ ಸಂಪನ್ಮೂಲ ವ್ಯಕ್ತಿ ಶಿವಣ್ಣ ಇಂದ್ವಾಡಿ, ‘ಶಿಕ್ಷಣಕ್ಕೆ ಜಾತಿ ಮತ ಲಿಂಗ ಭೇದ ಭಾವ ಇಲ್ಲ. ಅದಕ್ಕೆ ಯಾರೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಶಾಲೆಗೆ ಮಕ್ಕಳು ಬಂದರಷ್ಟೇ ಸಾಲದು. ಶಿಕ್ಷಕ ಶ್ರಮದಿಂದ ಕಲಿಸಬೇಕು. ಶಿಕ್ಷಿತರಾದರೆ ಇಡೀ ದೇಶವನ್ನೇ ಆಳಬಹುದು. ಶಿಕ್ಷಿತರಲ್ಲದವರ ಬದುಕು ಹೇಳಲು ಸಾಧ್ಯವಿಲ್ಲ’ ಎಂದರು.

ಮಾಧ್ಯಮದ ಬಗ್ಗೆ ಮಾತನಾಡಿದ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್, ‘ಮಾಧ್ಯಮಗಳು ದ್ವೇಷ ಬಿತ್ತುವ ಕೆಲಸ ಮಾಡಬಾರದು. ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಬೇಕು. ಶಿಕ್ಷಣ, ಆರೋಗ್ಯ, ಅಭಿವೃದ್ಧಿ ಪರಿಸರದ ಸಮಸ್ಯೆಗಳ ಕುರಿತು ಮಾಧ್ಯಮ ತೋರಿಸಬೇಕು. ಪತ್ರಿಕೆಗಳು ಧ್ವನಿ ಇಲ್ಲದವರ ಪರ ಕಾರ್ಯ ನಿರ್ವಹಿಸಬೇಕು. ಮಾಧ್ಯಮಗಳು ಇತ್ತೀಚಿನ ದಿನಗಳಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿವೆ’ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಮಹಾದೇವ ಶಂಕನಪುರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪುರುಷೋತ್ತಮ್, ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ನರೇಂದ್ರನಾಥ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಲೆಕ್ಸಾಂಡರ್, ಪ್ರಗತಿಪರ ಚಿಂತಕ ಅಣಗಳ್ಳಿ ಬಸವರಾಜು ಇದ್ದರು.

‘ಕೋವಿಡ್‌ನಲ್ಲಿ ಕಾಪಾಡಿದ ಕೃಷಿ’
ಕೃಷಿ ವಿಚಾರದ ಬಗ್ಗೆ ವಿಚಾರ ಮಂಡಿಸಿದ ಚಿಂತಕ ಚಿನ್ನಸ್ವಾಮಿ ವಡ್ಡಗೆರೆ, ‘ಕೋವಿಡ್‌ ಸಂದರ್ಭದಲ್ಲಿ ಅನೇಕರನ್ನು ಕೃಷಿ ಕಾಪಾಡಿತು’ ಎಂದರು.

‘ಕೃಷಿ ಅದ್ಭುತ ಕಲೆ. ದೇಶಿಯ ಕೃಷಿ ನಶಿಸುತ್ತಿದೆ. ಎಲ್ಲ ಬೆಳೆಗಳೂ ವಿಷಮಯವಾಗಿದೆ. ಕೃಷಿಕರಿಗೆ ಕೃಷಿಯ ಬಗ್ಗೆ ಪ್ರೀತಿ, ಸಂಸ್ಕಾರ, ಗೌರವವಿ‌ರಬೇಕು. ವೃತ್ತಿಯ ಬಗ್ಗೆ ಹೆಮ್ಮೆ ಇರಬೇಕು. ಕೃಷಿ ಇದ್ದರೆ ನಾವು. ಅದಿಲ್ಲದಿದ್ದರೆ ನಾವ್ಯಾರೂ ಬದುಕಲು ಸಾಧ್ಯವಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಟ್ಟ ಚಟಗಳಿಗಾಗಿ ಕೃಷಿ ಜಮೀನುಗಳನ್ನು ರೈತರು ಮಾರುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT