ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರು ದೇಶದ ಸಂಪತ್ತು: ಸೋಮಣ್ಣ

ಜಿಲ್ಲಾ ಮಟ್ಟದ 15 ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ
Last Updated 11 ಸೆಪ್ಟೆಂಬರ್ 2022, 2:40 IST
ಅಕ್ಷರ ಗಾತ್ರ

ಚಾಮರಾಜನಗರ: ‘ಮಕ್ಕಳಿಗೆ ನಿಷ್ಕಲ್ಮಷ ಮನಸ್ಸಿನಿಂದ ಅಕ್ಷರ ಬೀಜ ಬಿತ್ತುವ ಮೂಲಕ ಅಭಿವೃದ್ಧಿಯ ಚಿಂತಕರಾಗಿರುವ ಶಿಕ್ಷಕರು ಈ ದೇಶದ ಸಂಪತ್ತು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಶನಿವಾರ ಬಣ್ಣಿಸಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಶಿಕ್ಷಣ ಎನ್ನುವುದು ಕೇವಲ ಪದವಲ್ಲ, ಅದು ಜಗತ್ತನ್ನೇ ಬೆಳಗುವ ಅದಮ್ಯ ಶಕ್ತಿ. ಒಬ್ಬ ಶಿಕ್ಷಕ ಏನೂ ಬೇಕಾದರೂ ಆಗಬಹುದು ಎನ್ನುವುದಕ್ಕೆ ಸರ್ವಪಲ್ಲಿ ಡಾ. ಎಸ್. ರಾಧಾಕೃಷ್ಣನ್ ಅವರೇ ಸಾಕ್ಷಿ. ಅವರನ್ನು ಅದರ್ಶವಾಗಿಟ್ಟುಕೊಂಡು ಶಿಕ್ಷಕರು ತಮ್ಮ ಪವಿತ್ರ ಸೇವೆಯ ಜೊತೆಗೆ ದೇಶದ ಸತ್ಪ್ರಜೆಗಳನ್ನು ರೂಪಿಸುವ ಮೂಲಕ ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ’ ಎಂದರು.

‘ಶಿಕ್ಷಣ ಬದುಕಿನ ತೆರೆದ ಪುಸ್ತಕವಾಗಬೇಕು. ಒಬ್ಬ ವ್ಯಕ್ತಿಯ ಸಾಧನೆಯ ಮೂಲಪ್ರೇರಣೆ ಶಿಕ್ಷಕರೇ ಆಗಿದ್ದಾರೆ. ಮಕ್ಕಳಿಗೆ ಉತ್ತಮ ಜೀವನ ರೂಪಿಸುವುದರ ಜೊತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಶಿಕ್ಷಕರಿಂದ ಆಗಬೇಕಾಗಿದೆ. ಪ್ರತಿಯೊಬ್ಬ ಶಿಕ್ಷಕರು ಗುರುವಿನ ಜವಾಬ್ದಾರಿ ಅರಿತು ಕೆಲಸ ಮಾಡದಿದ್ದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿತ್ತು. ಇದೆಲ್ಲವನ್ನು ಶಿಕ್ಷಕರು ಮೆಟ್ಟಿ ನಿಂತಿದ್ದಾರೆ. ಶಿಕ್ಷಕರು ಎಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಮಕ್ಕಳಿಗೆ ವಿದ್ಯಾದಾನ ಮಾಡುವುದು ವೈಯಕ್ತಿಕವಾಗಿ ಎಲ್ಲರಿಗೂ ಗೌರವ ತರುವ ಕೆಲಸ’ ಎಂದು ಸಚಿವರು ತಿಳಿಸಿದರು.

‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದಾಗಿ ಶಾಲೆಗಳನ್ನು ಉನ್ನತೀಕರಣಗೊಳಿಸಲಾಗುತ್ತಿದೆ. ಜಿಲ್ಲೆಯೂ ಪ್ರಗತಿಯತ್ತ ಮುನ್ನುಗ್ಗುತ್ತಿದೆ. ಜಿಲ್ಲೆಯಲ್ಲಿ ಎಂಜಿನಿಯರಿಂಗ್, ಮೆಡಿಕಲ್. ಐ.ಟಿ.ಐ ಕಾಲೇಜುಗಳು ಪ್ರಾರಂಭವಾಗಿದೆ. ಅದಕ್ಕನುಗುಣವಾಗಿ ವಿದ್ಯಾರ್ಥಿನಿಲಯಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ಮೂಲಕ ಬುದ್ದಿವಂತರ ಜಿಲ್ಲೆ ಎಂಬುದು ಸಾಬೀತಾಗಿದೆ. ಶೀಘ್ರದಲ್ಲೇ ಜಿಲ್ಲಾಕೇಂದ್ರದಲ್ಲಿ ಐ.ಎ.ಎಸ್ ಕೋಚಿಂಗ್(ಸ್ಟಡಿ ಸೆಂಟರ್) ಕೇಂದ್ರ ಆರಂಭವಾಗಲಿದೆ’ ಎಂದರು.

‘ಶೈಕ್ಷಣಿಕವಾಗಿ ಜಿಲ್ಲೆಯಲ್ಲಿ ಮೂಲಸೌಕರ್ಯಗಳ ಕೊರತೆ ಇರುವುದನ್ನು ಗಮನಿಸಲಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಜಿಲ್ಲೆಯ ಶಾಲೆಗಳಲ್ಲಿ ಖಾಲಿಯಿರುವ 700ಕ್ಕೂ ಹೆಚ್ಚಿನ ಶಿಕ್ಷಕರ ಹುದ್ದೆಗಳನ್ನು ತುಂಬುವಲ್ಲಿ ಪ್ರಕ್ರಿಯೇ ಆರಂಭಿಸಲಾಗುವುದು. ಜಿಲ್ಲಾಕೇಂದ್ರದಲ್ಲಿ ಗುರುಭವನ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು. ಹಾಗೂ ಶಿಕ್ಷಕರ ಸಂಘಕ್ಕೆ ನಿವೇಶನ ಒದಗಿಸಲು ಜಾಗ ಗುರುತಿಸಬೇಕಾಗಿದೆ’ ಎಂದು ಸೋಮಣ್ಣ ತಿಳಿಸಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ‘ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರೆ ಅದಕ್ಕೆ ಶಿಕ್ಷಣವೇ ಮಾನದಂಡವಾಗಿದೆ. ಶಿಕ್ಷಣದಿಂದ ದೇಶದ ಅಭಿವೃದ್ಧಿ ಎನ್ನುವುದು ಲೋಕರೂಢಿಯಾಗಿದೆ’ ಎಂದು ತಿಳಿಸಿದರು.

15 ಮಂದಿ ಶಿಕ್ಷಕರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ವಿತರಿಸಲಾಯಿತು. ಶಿಕ್ಷಕರ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ಸಾಲಿನಲ್ಲಿ ನಿವೃತ್ತಿ ಹೊಂದಿದ ಹಾಗೂ ಅಕಾಲಿಕ ಮರಣವನ್ನಪ್ಪಿದ ಶಿಕ್ಷಕರ ಕುಟುಂಬಗಳನ್ನು ಸನ್ಮಾನಿಸಲಾಯಿತು.

ಶಾಸಕರಾದ ಎನ್. ಮಹೇಶ್, ಸಿ.ಎಸ್. ನಿರಂಜನಕುಮಾರ್, ಸಿ.ಎನ್. ಮಂಜೇಗೌಡ, ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಿಜಗುಣರಾಜು, ನಗರಸಭೆ ಅಧ್ಯಕ್ಷರಾದ ಆಶಾನಟರಾಜು, ಸದಸ್ಯರಾದ ಮಹೇಶ್, ಮನೋಜ್ ಪಟೇಲ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಟಿ.ಪಿ. ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಇದ್ದರು.

ಶಿಕ್ಷಣಕ್ಕೆ ಕಡಿಮೆ ಅನುದಾನ

ಮುಖ್ಯ ಭಾಷಣ ಮಾಡಿದ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಪ್ರೊ. ಹ.ರಾ. ಮಹೇಶ್ ಮಾತನಾಡಿ 'ಭಾರತದ ಭವಿಷ್ಯವನ್ನು ರೂಪಿಸುವ ಹೊಣೆ ಶಿಕ್ಷಕರಿಗಿದೆ. ವ್ಯಕ್ತಿಯ ಜ್ಞಾನ, ವ್ಯಕ್ತಿತ್ವವನ್ನು ರೂಪಿಸುವ ಕೆಲಸ ಶಿಕ್ಷಕರದ್ದು. ಇದು ಪವಿತ್ರವಾದ ಕೆಲಸವಾಗಿದೆ. ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ದೇಶವು ಶೇ 3ರಷ್ಟು ಅನುದಾನವನ್ನು ಮೀಸಲಿರಿಸಿದೆ. ಇದು ಸಾಕಾಗುವಷ್ಟಿಲ್ಲ. ಶಿಕ್ಷಣ ಕ್ಷೇತ್ರದ ಸಮಗ್ರ ಬದಲಾವಣೆಗಾಗಿ ಕ್ರಾಂತಿಕಾರಕ ಹೆಜ್ಜೆಗಳನ್ನಿಡಬೇಕಾಗಿದೆ' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT