ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೆಬ್ಬುಲಿ’ಯ ಸುದೀಪ್ ಕೇಶ ವಿನ್ಯಾಸ ಮಕ್ಕಳಿಗೆ ಬೇಡ: ಕ್ಷೌರಿಕರಿಗೆ ಶಿಕ್ಷಕ ಮನವಿ

Published 6 ಸೆಪ್ಟೆಂಬರ್ 2023, 13:36 IST
Last Updated 6 ಸೆಪ್ಟೆಂಬರ್ 2023, 13:36 IST
ಅಕ್ಷರ ಗಾತ್ರ

ಕೊಳ್ಳೇಗಾಲ (ಚಾಮರಾಜನಗರ ಜಿಲ್ಲೆ): ಹೆಬ್ಬುಲಿ ಚಿತ್ರದಲ್ಲಿ ನಾಯಕ ನಟ ಸುದೀಪ್‌ ಅವರು ಮಾಡಿಸಿಕೊಂಡಿದ್ದ ಕೇಶ ವಿನ್ಯಾಸವನ್ನು ಶಾಲಾ ಮಕ್ಕಳಿಗೆ ಮಾಡಬೇಡಿ ಎಂದು ನಗರದ ಸರ್ಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ಎಂ.ಶಾಂತರಾಜು ಅವರು ತಾಲ್ಲೂಕಿನ ಸವಿತಾ ಸಮಾಜದ ಅಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. 

‘ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ತಮ್ಮ ಸಂಘದ ಸದಸ್ಯರ ಕಟಿಂಗ್‌ ಶಾಪ್‌ಗಳಲ್ಲಿ ಶಾಲಾ ಮಕ್ಕಳು ಹೆಬ್ಬುಲಿ ಕಟಿಂಗ್‌ ಮಾಡಿಸಲು ಕೇಳಿದರೆ ದಯವಿಟ್ಟು ಮಾಡಬೇಡಿ. ನಾವು ತರಗತಿಯಲ್ಲಿ ಈ ರೀತಿ ಕಟಿಂಗ್‌ ಮಾಡಿಸಬೇಡಿ ಎಂದು ತಿಳಿಸಿದ್ದರೂ, ಪೋಷಕರಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ವಿದ್ಯಾರ್ಥಿಗಳು ಈ ರೀತಿ ಕಟಿಂಗ್‌ ಮಾಡಿಸಿಕೊಂಡು ಬರುವುದು ನಮ್ಮನ್ನು ಅಪಹಾಸ್ಯ ಮಾಡುವಂತಿದೆ. ಅಣಕಿಸುವಂತಿದೆ. ಆದ್ದರಿಂದ ಈ ಬಗ್ಗೆ ತಮ್ಮ ಸಂಘದ ಸದಸ್ಯರು ಹೆಬ್ಬುಲಿ ಕಟಿಂಗ್‌ ಮಾಡಬಾರದಾಗಿ ಆದೇಶ ನೀಡವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ’ ಎಂದು ಶಾಂತರಾಜು ಪತ್ರದಲ್ಲಿ ತಿಳಿಸಿದ್ದಾರೆ. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಂತರಾಜು, ‘ಶಾಲೆಗೆ ಬರುವ ಮಕ್ಕಳು ಸಮವಸ್ತ್ರ ಧರಿಸಿ, ಅತ್ಯಂತ ಶಿಸ್ತಿನಿಂದ ಬರಬೇಕು ಎಂಬುದು ಶಿಕ್ಷಣ ಇಲಾಖೆಯ ನಿಯಮ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಬ್ಬುಲಿ, ಸ್ಪೈಕ್‌, ಮಾಡೆಲ್‌ ಕ್ಷೌರ ಸೇರಿದಂತೆ ವಿಚಿತ್ರವಾದ ಕೇಶ ವಿನ್ಯಾಸ ಮಾಡಿಸಿಕೊಂಡು ಬರುತ್ತಿದ್ದಾರೆ. ಮಕ್ಕಳನ್ನು ಗುರುತು ಹಿಡಿಯುವುದೇ ಕಷ್ಟವಾಗಿದೆ’ ಎಂದರು. 

‘ಇಂತಹ ಕೇಶ ವಿನ್ಯಾಸಗಳಿಂದ ಶಿಕ್ಷಕರಿಗೂ ಮುಜುಗರವಾಗುತ್ತಿದೆ. ಮಕ್ಕಳು ಓದಿನ ಕಡೆ ಆಸಕ್ತಿ ವಹಿಸದೆ ಕೇಶ ಸೌಂದರ್ಯಕ್ಕೆ ಹೆಚ್ಚಾಗಿ ಮೋರೆ ಹೋಗುತ್ತಿದ್ದಾರೆ. ಇದು ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣಕ್ಕೆ ಸವಿತಾ ಸಮಾಜದ ಅಧ್ಯಕ್ಷ ರಾಚಶೆಟ್ಟಿಯವರಿಗೆ ಪತ್ರ ಬರೆದಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT