ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಗಡಿ ಜಿಲ್ಲೆಯ ನಡುಗಿಸಿದ ಚಳಿ

ಬುಧವಾರ ರಾತ್ರಿ ವರ್ಷದ ಕನಿಷ್ಠ ತಾಪಮಾನ ದಾಖಲು, ಬೆಳಿಗ್ಗೆ 10 ಗಂಟೆ ಆದರೂ ದೂರವಾಗದ ಚಳಿ
Last Updated 3 ಜನವರಿ 2019, 14:27 IST
ಅಕ್ಷರ ಗಾತ್ರ

ಚಾಮರಾಜನಗರ: ಮೂರು- ನಾಲ್ಕು ದಿನಗಳಿಂದ ಗಡಿ ಜಿಲ್ಲೆಯ ಜನರನ್ನು ಥರಗುಟ್ಟುವ ಚಳಿ ನಡುಗಿಸುತ್ತಿದೆ.ರಾಜ್ಯದಾದ್ಯಂತ ಕುಸಿತ ಕಂಡಿರುವ ತಾಪಮಾನ ಚಾಮರಾಜನಗರ ಜಿಲ್ಲೆಯನ್ನೂ ಬಿಟ್ಟಿಲ್ಲ. ಬುಧವಾರ ರಾತ್ರಿ ಈ ವರ್ಷದ ಅತ್ಯಂತ ಕನಿಷ್ಠ ತಾಪಮಾನ 8.2 ಡಿಗ್ರಿ ಸೆಲ್ಸಿಯಸ್‌ ದಾಖಲಾಯಿತು.

ಚಾಮರಾಜನಗರ ಸೇರಿದಂತೆ ಜಿಲ್ಲೆಯಾದ್ಯಂತಮೂರು ದಿನಗಳಿಂದ ತೀವ್ರ ಚಳಿಯ ಅನುಭವವಾಗುತ್ತಿದೆ. ಸ್ವೆಟರ್‌, ಟೊಪ್ಪಿ, ಮಫ್ಲರ್‌ ಸೇರಿದಂತೆ ಚಳಿಯನ್ನು ತಡೆಯುವ ದಿರಿಸು ಧರಿಸದೆ ಹೊರಗಡೆ ಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಕೇಂದ್ರ ರೇಷ್ಮೆ ಸಂಶೋಧನಾ ಸಂಸ್ಥೆಯಲ್ಲಿರುವ ಹವಾಮಾನ ಇಲಾಖೆಯ ತಾಪಮಾನ ದಾಖಲು ಕೇಂದ್ರದಲ್ಲಿ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, ವಾರದಿಂದೀಚೆಗೆ ಜಿಲ್ಲೆಯಲ್ಲಿ ಉಷ್ಣಾಂಶದಲ್ಲಿ ಗಣನೀಯ ಕುಸಿತವಾಗುತ್ತಲೇ ಬಂದಿದೆ.

ಡಿಸೆಂಬರ್‌ 27ರಂದು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಅಲ್ಲಿಂದ ಜನವರಿ 3ರವರೆಗೆ (ಜನವರಿ 1ನೇ ತಾರೀಖು ಬಿಟ್ಟು) ಪ್ರತಿ ದಿನವೂ ಕನಿಷ್ಠ ಉಷ್ಣಾಂಶದಲ್ಲಿ ಇಳಿಕೆಯಾಗಿದೆ. ಬುಧವಾರ ಈ ವರ್ಷದ ಅತ್ಯಂತ ಕನಿಷ್ಠ ತಾಪಮಾನ (8.2 ಡಿಗ್ರಿ ಸೆಲ್ಸಿಯಸ್‌) ದಾಖಲಾಗಿದೆ.

ದೂರವಾಗಿದ್ದ ಚಳಿರಾಯ: ಈ ವರ್ಷ ಒಂದು ತಿಂಗಳ ಮುಂಚಿತವಾಗಿ ಅಕ್ಟೋಬರ್‌ ಕೊನೆಯ ವಾರದಲ್ಲಿ ಆರಂಭವಾಗಿದ್ದ ಚಳಿ, ನವೆಂಬರ್‌ ಎರಡನೇ ವಾರದ ಹೊತ್ತಿಗೆ ತೀವ್ರವಾಗಿತ್ತು. ನವೆಂಬರ್‌ 12 ರಾತ್ರಿ ಕನಿಷ್ಠ ಉಷ್ಣಾಂಶ 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು. ತದ ನಂತರ ವಾತಾವರಣ ಸ್ವಲ್ಪ ಬಿಸಿಯಾಗಿತ್ತು.

ತಂಪಾದ ವಾತಾವರಣ ಇದ್ದರೂ ಕೊರೆಯುವ ಚಳಿ ಇರಲಿಲ್ಲ. ಡಿಸೆಂಬರ್‌ ತಿಂಗಳ ಕೊನೆಯ ವಾರದಲ್ಲಿ ಮತ್ತೆ ಹವೆ ತಂಪಾಗುವುದಕ್ಕೆ ಆರಂಭವಾಯಿತು. ತಿಂಗಳಾಂತ್ಯ, ಹೊಸ ವರ್ಷಾರಂಭದಲ್ಲಿ ಶೀತಗಾಳಿ ಹೆಚ್ಚಾಗಿ, ತಾಪಮಾನ ಮತ್ತಷ್ಟು ಕುಸಿಯಿತು.

ಡಿಸೆಂಬರ್‌ 30ರ ತಡರಾತ್ರಿ ಕನಿಷ್ಠ 14.9 ದಾಖಲಾಗಿತ್ತು. ಆದರೆ, ಮರುದಿನ ಇದು 18.5ಕ್ಕೆ ಏರಿತ್ತು. ಜನವರಿ 1 ರಾತ್ರಿ ಇದು 12.5 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು.ಚಳಿ ಜಾಸ್ತಿ ಇದ್ದರೂ ಮಂಜು ಹೆಚ್ಚಿನ‍ಪ್ರಮಾಣದಲ್ಲಿ ಕಂಡು ಬಂದಿಲ್ಲ. ಎಡೆಬಿಡದೆ ಬೀಸುತ್ತಿರುವ ಶೀತಗಾಳಿ ಉಷ್ಣಮಾಪಕದಲ್ಲಿ ಪಾದರಸವನ್ನು ಇಳಿಯುವಂತೆ ಮಾಡಿದೆ. ಸಂಕ್ರಾಂತಿವರೆಗೂ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಹೇಳುತ್ತಾರೆ ಹವಾಮಾನ ತಜ್ಞರು.

ಮತ್ತೆ ಬದಲಾದ ದಿನಚರಿ
ಕೊರೆಯುವ ಚಳಿ ಜನಜೀವನದ ಮೇಲೆ ಪರಿಣಾಮ ಬೀರಿದೆ. ಬೆಳಿಗ್ಗೆ ವಾಯುವಿಹಾರ ಮಾಡುತ್ತಿದ್ದವ‌ರೆಲ್ಲ ಮನೆಯಿಂದ ಹೊರ ಬರುತ್ತಿಲ್ಲ. ಹಾಲು, ಪತ್ರಿಕೆ ಸೇರಿ ಅಗತ್ಯ ವಸ್ತುಗಳನ್ನು ಬೆಳಿಗ್ಗೆಯೇ ಸರಬರಾಜು ಮಾಡುತ್ತಿದ್ದವರು ಈಗ ತಮ್ಮ ಕೆಲಸವನ್ನು ಸ್ವಲ್ಪ ತಡ ಮಾಡುತ್ತಿದ್ದಾರೆ.

ಎರಡು ಮೂರು ದಿನದಿಂದ ಸಂಜೆ 5–5.30ರ ಸುಮಾರಿಗೆ ಶೀತ ಗಾಳಿ ಬೀಸಲು ಆರಂಭವಾಗಿ ಚಳಿಯ ಶುರುವಾಗುತ್ತದೆ. ರಾತ್ರಿ ಹೊತ್ತು ತೀವ್ರಗೊಳ್ಳುವ ಚಳಿ, ಬೆಳಿಗ್ಗೆ 10 ಗಂಟೆಗೆ ಸೂರ್ಯನ ಪ್ರಖರ ಬೆಳಕು ಬಿದ್ದರೂ ಕಡಿಮೆಯಾಗುತ್ತಿಲ್ಲ.

ಚಳಿಯ ಕಾರಣಕ್ಕೆ ರಾತ್ರಿ ಅಂಗಡಿಗಳು ಬೇಗನೆ ಬಂದ್‌ ಆಗುತ್ತಿವೆ. ಬೆಳಿಗ್ಗೆ ತೆರೆಯುವುದೂ ತಡವಾಗುತ್ತಿದೆ. ತಣ್ಣೀರಿನಲ್ಲಿ ಸ್ನಾನ ಮಾಡುವ ಅಭ್ಯಾಸ ಇದ್ದವರೂ ಬಿಸಿನೀರಿಗೆ ಮೊರೆಹೋಗುತ್ತಿದ್ದಾರೆ. ಹಗಲು ಹೊತ್ತಿನಲ್ಲಿ ಬಿಸಿಲಿದ್ದರೂ, ಶೀತದ ಅನುಭವ ಆಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT