ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿ ವೀಕ್ಷಕರಿಗೆ ಸಿಕ್ಕಿಲ್ಲ ಪೂರ್ಣ ವೇತನ

ಬಂಡೀಪುರ: ತಾತ್ಕಾಲಿಕವಾಗಿ ಸಿಬ್ಬಂದಿ ನೇಮಕ; 15 ದಿನಗಳು, 1, 2 ತಿಂಗಳ ಸಂಬಳ ಬಾಕಿ
Last Updated 7 ಆಗಸ್ಟ್ 2022, 7:49 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಸಿಗೆಯಲ್ಲಿ ಕಾಳ್ಗಿಚ್ಚು ತಡೆಗಾಗಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡಿದ್ದ ಅರಣ್ಯ ವೀಕ್ಷಕರಿಗೆ ಎರಡು ತಿಂಗಳ ವೇತನ ಪಾವತಿಯಾಗಿಲ್ಲ.ಉಳಿಕೆ ಸಂಬಳಕ್ಕಾಗಿ ಹಲವು ವಾಚರ್‌ಗಳು ಅಧಿಕಾರಿಗಳ ಕಚೇರಿಗೆ ಅಲೆದಾಡುತ್ತಿದ್ದಾರೆ.

‘ಪ್ರತಿ ವಾರ ಕಚೇರಿಗೆ ಹೋದಾಗಲೂ ಮುಂದಿನ ವಾರ ಬನ್ನಿ ಎಂದು ಸಬೂಬು ಹೇಳುತ್ತಿದ್ದಾರೆ. ಇತ್ತ ಸತತವಾಗಿ ಮಳೆಯಾಗುತ್ತಿರುವುದರಿಂದ ಕೂಲಿ ಇಲ್ಲದೆ ಜೀವನಕ್ಕೆ ತೊಂದರೆಯಾಗುತ್ತಿದೆ’ ಎಂದು ಅವರು ಅಳಲು ತೋಡಿಕೊಂಡರು.

ಬಂಡೀಪುರದ 13 ವಲಯದಲ್ಲಿಮೇಲುಕಾಮನಹಳ್ಳಿ, ಕಾರೆಮಾಳ, ಕನಿಯನಪುರ ಮತ್ತು ಹಗ್ಗದಹಳ್ಳ ಗಿರಿಜನ ಕಾಲೋನಿಯವರು ಸೇರಿದಂತೆ ವಿವಿಧ ಕಾಲೊನಿಗಳ 400 ಹೆಚ್ಚು ಯುವಕರು ಬೇಸಿಗೆಯಲ್ಲಿ ಬೆಂಕಿ ರೇಖೆ ನಿರ್ಮಾಣ, ರಸ್ತೆಯ ಬದಿಯಲ್ಲಿ ಗಿಡ ಮತ್ತು ಹುಲ್ಲುಗಳನ್ನು ತೆರವು ಮಾಡಲು ಬೆಂಕಿ ವೀಕ್ಷಕರಾಗಿ ಕೆಲಸ ನಿರ್ವಹಿಸಿದ್ದರು.

ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡಿರುವುದರಿಂದ ಬೇಸಿಗೆ ಮುಗಿಯುತ್ತಿದ್ದಂತೆ ಅವರನ್ನು ಕೆಲಸದಿಂದ ತೆಗೆಯಲಾಗಿತ್ತು.

‘ಕೆಲಸದಿಂದ ತೆಗೆದು ನಾಲ್ಕು ತಿಂಗಳು ಕಳೆದರೂ ಅಧಿಕಾರಿಗಳು ಬಾಕಿ ಇರುವ ಒಂದು ತಿಂಗಳ ಸಂಬಳ ನೀಡದೆ ಸತಾಯಿಸುತ್ತಿದ್ದಾರೆ’ ಎಂದು ಮೇಲುಕಾಮನಹಳ್ಳಿ ಕಾಲೊನಿಯ ಕಾಳ ಅವರು ಆರೋಪಿಸಿದರು.

‘ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ 15 ದಿನಗಳ ಕೂಲಿ ಬಾಕಿ ಉಳಿಸಿಕೊಂಡಿದ್ದಾರೆ. ಉಳಿದಂತೆ ಕೆಲವು ವಲಯಗಳಲ್ಲಿ ಎರಡು ತಿಂಗಳ ಸಂಬಳ ಬಾಕಿ ಉಳಿದಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಣ ಬಿಡುಗಡೆ ಆಗದಿರುವುದರಿಂದ ತೊಂದರೆಯಾಗಿದೆ‌ ಎಂದು ವಲಯಾರಣ್ಯಾಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ. ಆದರೆ ಬಿಟಿಸಿಎಫ್ (ಬಂಡೀಪುರ ಟೈಗರ್ ರಿಸರ್ವ್ ಫಂಡ್), ಸಫಾರಿ ಮತ್ತು ವಸತಿ ಗೃಹದಿಂದ ಬರುವ ಆದಾಯನಿಂದ ಕೊಡುವುದಕ್ಕೆ ಅವಕಾಶ ಇದೆ. ಮೇಲಾಧಿಕಾರಿಗಳು ಮನಸ್ಸು ಮಾಡುತ್ತಿಲ್ಲ’ ಎಂದು ಕೆಳ ಹಂತದ ಅಧಿಕಾರಿಯೊಬ್ಬರು ತಿಳಿಸಿದರು.

‘ಬೆಂಕಿ ವೀಕ್ಷಕರ ಬೇಡಿಕೆಯನ್ನು ಸಕಾಲದಲ್ಲಿ ಈಡೇರಿಸುವ ಕೆಲಸ ಆಗಬೇಕು. ಸದ್ಯ ಮಳೆಯಾಗುತ್ತಿರುವುದರಿಂದ ಕಾಡಿಗೆ ಸಮಸ್ಯೆ ಏನಿಲ್ಲ. ಈ ಸಲ ಕಾಡು ಉತ್ತಮವಾಗಿದೆ. ಮುಂದೆ ಬೇಸಿಗೆ ಆರಂಭವಾಗುತ್ತದೆ ಕಾಳ್ಗಿಚ್ಚಿನ ಅಪಾಯ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಸ್ಥಳೀಯರ ಪಾತ್ರ ಹೆಚ್ಚಿರುತ್ತದೆ. ಹಾಗಾಗಿ ಬಾಕಿ ಸಂಬಳವನ್ನು ಶೀಘ್ರವಾಗಿ ನೀಡುವುದು ಉತ್ತಮ’ ಎಂದು ಪರಿಸರವಾದಿ ರಾಬಿನ್ಸನ್ ತಿಳಿಸಿದರು.

–––

ಯಾವ ಕಾರಣಕ್ಕೆ ಸಂಬಳ ಪಾವತಿ ವಿಳಂಬವಾಗಿದೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ವಿಚಾರಿಸುತ್ತೇನೆ ವಿಜಯಕುಮಾರ್ ಗೋಗಿ, ಪಿಸಿಸಿಎಫ್ (ವನ್ಯಜೀವಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT