ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬದುಕು ಕಟ್ಟಿಕೊಟ್ಟ ಡೋಲು!

ಮಹದೇವ್‌ ಹೆಗ್ಗವಾಡಿಪುರ
Published 30 ನವೆಂಬರ್ 2023, 6:16 IST
Last Updated 30 ನವೆಂಬರ್ 2023, 6:16 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಡೋಲು ವಾದಕರಾಗಿ ಗುರುತಿಸಿಕೊಂಡಿರುವ ಹೋಬಳಿಯ ಇರಸವಾಡಿ ಗ್ರಾಮದ ಮಲ್ಲೇಶ್ ಅವರು ಈ ಕಲೆಯಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. 

ಹೋಬಳಿ ವ್ಯಾಪ್ತಿಯಲ್ಲಿ ಕಲಾವಿದ ಮಲ್ಲೇಶ್‌ ಎಂದರೆ ಯಾರಿಗೂ ಗೊತ್ತಾಗದು. ಡೋಲು ಮಲ್ಲೇಶ್‌ ಎಂದರೆ ಎಲ್ಲರಿಗೂ ಪರಿಚಯ! ಅಷ್ಟರ ಮಟ್ಟಿಗೆ ಡೋಲು ಅವರ ಜೀವನ ಮತ್ತು ಹೆಸರಿನ ಭಾಗವಾಗಿದೆ. 

50 ವರ್ಷ ವಯಸ್ಸಿನ ಮಲ್ಲೇಶ್ ಅವರು 15ನೇ ವರ್ಷದಿಂದಲೇ ಡೋಲು ಬಾರಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಮೂರೂವರೆ ದಶಕಗಳಿಂದ ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ. 

ಅವರ ಒಬ್ಬ ಅಣ್ಣ ಕ್ಲಾರಿಯೋನೇಟ್, ಮತ್ತೊಬ್ಬ ಅಣ್ಣ ವಾದ್ಯ ನುಡಿಸುತ್ತಿದ್ದರು. ಅವರಿಗೆ ಜೊತೆಯಾಗಲು ಡೋಲನ್ನು ಅಪ್ಪಿಕೊಂಡರು. 

ನೇನಗಳ್ಳಿಯ ಡೋಲು ಮಾಸ್ಟರ್ ಸಣ್ಣಮಲ್ಲಯ್ಯ ಅವರಿಂದ ಡೋಲು ಬಾರಿಸುವ ವಿದ್ಯೆಯನ್ನು ಕಲಿತರು. ಪರಿಣತಿ ಸಾಧಿಸಿದ ನಂತರ ಗ್ರಾಮಗಳಲ್ಲಿ ಕಾರ್ಯಕ್ರಮ ಕೊಡಲು ಆರಂಭಿಸಿದರು.

ಸಂಗೀತ, ಲಯಬದ್ದ ತಾಳಕ್ಕೆ ತಕ್ಕಂತೆ ಡೋಲು ಬಾರಿಸುವುದನ್ನು ಕಲಿತುಕೊಂಡ ಮಲ್ಲೇಶ್‌ ಅವರನ್ನು ಹುಡುಕಿಕೊಂಡು ಕಲಾಸಕ್ತರು ಬರುತ್ತಾರೆ. 

ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ದೀಪಾವಳಿ, ಶಿವರಾತ್ರಿ ಹಾಗೂ ಯುಗಾದಿ ಹಬ್ಬಗಳ ಸಂದರ್ಭದ ಜಾತ್ರೆ ಸಮಯದಲ್ಲಿ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ವತಿಯಿಂದ ಇವರಿಗೆ ಕಾಯಂ  ಆಹ್ವಾನ ಇರುತ್ತದೆ. ಹಾಲರವಿ ಉತ್ಸವ ಹಾಗೂ ರಥೋತ್ಸವದ ಸಂದರ್ಭದಲ್ಲಿ ಮಲ್ಲೇಶ್‌ ಅವರ ಡೋಲಿನ ಸದ್ದು ಉತ್ಸವದಲ್ಲಿ ಇರಲೇಬೇಕು.  

ಸುತ್ತೂರಿನಲ್ಲಿ ನಡೆಯುವ ಜಯಂತಿ ಕಾರ್ಯಕ್ರಮಗಳಿಗೆ ತಪ್ಪದೇ ಭಾಗವಹಿಸುತ್ತಾರೆ.  ಕೇರಳದ ತ್ರಿಶ್ಶೂರ್‌ನಲ್ಲಿ ನಡೆಯುವ ಚಂಡೆ ಉತ್ಸವದಲ್ಲೂ ಪ್ರತಿವರ್ಷ ಮಲ್ಲೇಶ್‌ ಹಾಜರಿ ಇರುತ್ತದೆ. 

ಚಾಮರಾಜನಗರ ಗಡಿ ಭಾಗದ ತಮಿಳುನಾಡು ಜಿಲ್ಲೆಗಳಲ್ಲಿ ನಡೆಯುವ ಕರಗ ಉತ್ಸವಗಳಿಗೂ ಹಾಜರಾಗಿ ಎಲ್ಲಿ ಡೋಲಿನ ಶಬ್ದವನ್ನು ಪಸರಿಸುತ್ತಾರೆ. ಬೆಂಗಳೂರು, ಮೈಸೂರು, ಸುತ್ತಲಿನ ಜಿಲ್ಲೆಗಳು ಸೇರಿದಂತೆ ಹಾವೇರಿ ಜಿಲ್ಲೆಯ ಮಠಗಳಲ್ಲಿ ನಡೆಯುವ ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆಯುವ ಡಾ.ಬಿ.ಆರ್.ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ, ಬಸವೇಶ್ವರ, ಕನಕ ಹಾಗೂ ಭಗೀರಥ ಜಯಂತಿಗಳಲ್ಲಿ ಭಾಗವಹಿಸಿ ಸನ್ಮಾನಿತರಾಗಿದ್ದಾರೆ.

ಚಾಮರಾಜನಗರ ದಲ್ಲಿ ನಡೆಯುವ ಜಿಲ್ಲಾ ದಸರಾ ಕಾರ್ಯಕ್ರಮದಲ್ಲೂ ಜಿಲ್ಲಾಡಳಿತ ಇವರನ್ನು ಆಹ್ವಾನಿಸುತ್ತದೆ. ನೆರೆಯ ತಾಲ್ಲೂಕುಗಳು ಹಾಗೂ ಸುತ್ತಲಿನ ಗ್ರಾಮಗಳಲ್ಲಿ ನಡೆಯುವ ಮದುವೆ, ಗೃಹಪ್ರವೇಶ, ದೇವಸ್ಥಾನ ಸಂಪ್ರೋಕ್ಷಣೆ ಕೊಂಡಗಳು, ಮಂಟೇಸ್ವಾಮಿ ಉತ್ಸವಗಳು ಸೇರಿದಂತೆ ಶುಭ ಕಾರ್ಯಕ್ರಮಗಳಲ್ಲಿ ಡೋಲಿನ ಶಬ್ದದ ಇಂಪನ್ನು ಮಲ್ಲೇಶ್‌ ಪಸರಿಸುತ್ತಿದ್ದಾರೆ.

‘ಡೋಲು ಬಾರಿಸುವ ಕಲೆಯೇ ಆಸ್ತಿ’

‘ನನಗೆ ಯಾವುದೇ ಆಸ್ತಿ ಇಲ್ಲ. ಡೋಲು ಬಾರಿಸುವ ಕಲೆಯನ್ನು ಆಸ್ತಿಯನ್ನಾಗಿ ಮಾಡಿಕೊಂಡಿದ್ದೇನೆ. ಇದರಲ್ಲಿಯೇ ಉತ್ತಮ ಜೀವನ ನಡೆಸುತ್ತಿದ್ದೇನೆ’ ಎಂದು ಮಲ್ಲೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ನಮ್ಮ ನಂತರವೂ ಉತ್ತಮ ಕಲಾವಿದರು ಈ ಭಾಗದಲ್ಲಿ ಬರಬೇಕು. ಆಸಕ್ತಿ ಇರುವವರಿಗೆ ಕಲಿಸುವ ಆಸೆ ಬೆಟ್ಟದಷ್ಟಿದೆ. ಆದರೆ ಕಲಿಯಲು ಯಾರೂ ಮುಂದೆ ಬರುತ್ತಿಲ್ಲ. ಈಗಿನವರಿಗೆ ಪಾರಂಪರಿಕ ಸಂಗೀತ ಪರಿಕರಗಳನ್ನು ಕಲಿಯುವ ಆಸಕ್ತಿ ಕಾಣುತ್ತಿಲ್ಲ’ ಎಂಬುದು ಅವರ ಬೇಸರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT