ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂತೇಮರಹಳ್ಳಿ | ಹೆದ್ದಾರಿ ಸೇತುವೆ ಕಾಮಗಾರಿ ಅಪೂರ್ಣ: ಅಪಘಾತಗಳಿಗೆ ಆಹ್ವಾನ

ಚಾಮರಾಜನಗರದಿಂದ ಸಂತೇಮರಹಳ್ಳಿ ಮಾರ್ಗವಾಗಿ ಹಾದುಹೋಗಿರುವ ಹೆದ್ದಾರಿ
Published 12 ಜೂನ್ 2024, 6:30 IST
Last Updated 12 ಜೂನ್ 2024, 6:30 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ಸಂತೇಮರಹಳ್ಳಿ ಮಾರ್ಗವಾಗಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ (209) ರಸ್ತೆಯ ಸೇತುವೆ ಕಾಮಗಾರಿ ಅಪೂರ್ಣಗೊಂಡಿದ್ದು ಅಪಘಾತಗಳಿಗೆ ಆಹ್ವಾನ ನೀಡುವಂತಿದೆ.

ಚಾಮರಾಜನಗರದಿಂದ ಯಳಂದೂರು ಹಾಗೂ ಕೊಳ್ಳೇಗಾಲದ ಕಡೆಗೆ ಸಂತೇಮರಹಳ್ಳಿ ಮಾರ್ಗವಾಗಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಂಡಿಲ್ಲವಾದರೂ ವಾಹನಗಳ ಸಂಚಾರ ಆರಂಭವಾಗಿದೆ.

‌ಚಾಮರಾಜನಗರ ಮುಖ್ಯ ರಸ್ತೆಯಿಂದ ಚುಂಗಡಿಪುರ ಗೇಟ್ ಬಳಿ ತಿರುವು ಪಡೆಯುವ ಬೈಪಾಸ್ ರಸ್ತೆ ಯಳಂದೂರು ರಸ್ತೆಯಲ್ಲಿರುವ ರೇಷ್ಮೆ ಗೂಡಿನ ಮಾರುಕಟ್ಟೆ ಬಳಿಯ ಮುಖ್ಯ ರಸ್ತೆಯನ್ನು ಸಂದಿಸುತ್ತದೆ. ಈ ನಡುವೆ ಬೈಪಾಸ್ ರಸ್ತೆಗೆ ಅಡ್ಡಲಾಗಿ ಸಿಗುವ ಕಬಿನಿ ಮುಖ್ಯ ನಾಲೆಗೆ ಸೇತುವೆಯನ್ನು ನಿರ್ಮಿಸಲಾಗುತ್ತಿದೆ.

ಸೇತುವೆಯ ಕಾಮಗಾರಿ ಸ್ಥಗಿತಗೊಂಡು ತಿಂಗಳು ಕಳೆಯುತ್ತಾ ಬಂದಿದ್ದು ಸಂಚಾರ ದಟ್ಟಣೆ ಕಿರಿಕಿರಿ ಹೆಚ್ಚಾಗಿದೆ. ತಮಿಳುನಾಡಿನಿಂದ ಚಾಮರಾಜನಗರ ಮಾರ್ಗವಾಗಿ ಕೊಳ್ಳೇಗಾಲ-ಬೆಂಗಳೂರಿಗೆ ಸಂಚರಿಸುವ ಸರಕು ತುಂಬಿದ ವಾಹನಗಳು ಸಹಿತ ನೂರಾರು ವಾಹನಗಳು ಬೈಪಾಸ್ ರಸ್ತೆಯ ಮಾರ್ಗವಾಗಿ ಸಂಚರಿಸುವುದರಿಂದ ಸೇತುವೆ ಕಾಮಗಾರಿ ಅಪಾಯಕ್ಕೆ ಆಹ್ವಾನ ನೀಡುವಂತಿದೆ.

ಬೈಪಾಸ್ ರಸ್ತೆಗೆ ಅಡ್ಡಲಾಗಿರುವ ಕಬಿನಿ ನಾಲೆ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ತಡೆಗೋಡೆ ನಿರ್ಮಿಸಿಲ್ಲ. ಅಪಾಯದ ಸೇತುವೆಯಲ್ಲಿ ವಾಹನಗಳು ಸಂಚರಿಸುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳು ಗಮನಹರಿಸಬೇಕಿದೆ.

ಸೇತುವೆ ಅಡಿಪಾಯ ಸರಿಯಾಗಿ ಹಾಕಿಲ್ಲ, ಗುಣಮಟ್ಟವಿಲ್ಲದ ಕಳಪೆ ಮಣ್ಣು ಸುರಿಯಲಾಗಿದೆ ಎಂಬ ದೂರುಗಳು ವ್ಯಾಪಕವಾಗಿವೆ. ಈಗಾಗಲೇ ಸೇತುವೆ ಮಾಲ್ಭಾಗದಲ್ಲಿ ಹಳ್ಳಗುಂಡಿಗಳು ಉಂಟಾಗಿ ಮಳೆನೀರು ನಿಲ್ಲುತ್ತಿದೆ. ಸೇತುವೆಯ ಎರಡು ಕಡೆಗಳಲ್ಲಿ ಸುರಿದಿರುವ ಮಣ್ಣು ನಾಲೆಗೆ ಇಳಿಯುತ್ತಿದೆ.

ಮಳೆಗಾಲ ಆರಂಭವಾಗಿರುವುದರಿಂದ ಸೇತುವೆ ಎತ್ತರ ದಿನದಿಂದ ದಿನಕ್ಕೆ ಕುಸಿಯತೊಡಗಿದೆ. ಬಾರಿ ಗಾತ್ರದ ಸರಕುಗಳನ್ನು ತುಂಬಿದ ಲಾರಿಗಳು ಹರಸಾಹಸಪಟ್ಟು ಸಂಚರಿಸಬೇಕಾಗಿದೆ. ಸೇತುವೆ ಅಪೂರ್ಣಗೊಂಡಿರುವುದರಿಂದ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಿ ಸೇತುವೆ ಹಾಗೂ ಹೆದ್ದಾರಿ ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂಬ ನಾಮ ಪಲಕ ಅಳವಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಭಾಗದಲ್ಲಿ ಎದುರು ಬದುರಾಗಿ ವಾಹನಗಳು ಬಂದಾಗ ಚಲಿಸಲು ಇಕ್ಕಟ್ಟಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮುಂದಿನ ತಿಂಗಳು ಕಬಿನಿ ನಾಲೆಗೆ ಜಲಾಶಯದಿಂದ ನೀರು ಬಿಟ್ಟಾಗ ಸೇತುವೆ ಮತ್ತಷ್ಟು ಕುಸಿಯಬಹುದು ಎಂಬ  ಆತಂಕ ವಾಹನ ಚಾಲಕರಲ್ಲಿದೆ.

ಈ ಭಾಗದಲ್ಲಿ ಒಂದೂವರೆ ಕಿ.ಮೀ.ವರೆಗೆ ಬೈಪಾಸ್ ರಸ್ತೆ ಇದ್ದು, ಡಾಂಬರೀಕರಣ ಪೂರ್ಣಗೊಂಡಿದ್ದರೂ ಅಲ್ಲಲ್ಲಿ ರಸ್ತೆ ಗುಂಡಿ ಬಿದ್ದಿದೆ. ರಸ್ತೆಯ ಅಂಚುಗಳಲ್ಲಿ ಮಳೆ ನೀರಿಗೆ ಕೊರಕಲು ಉಂಟಾಗಿದೆ. ಬೈಪಾಸ್ ರಸ್ತೆಯ ಅಕ್ಕ ಪಕ್ಕದ ಜಮೀನಿನ ರೈತರಿಗೆ ಜಮೀನುಗಳಿಗೆ ತೆರಳಲು ತೊಂದರೆಯಾಗುತ್ತಿದೆ.

ಅಧಿಕಾರಿಗಳು ಕೂಡಲೇ ಸ್ಪಂದಿಸಿ ಕಾಮಗಾರಿ ಪರಿಶೀಲಿಸಬೇಕು ಎಂದು ರೈತರಾದ ನಟರಾಜು ಹಾಗೂ ಮಹೇಶ್ ಒತ್ತಾಯಿಸಿದ್ದಾರೆ.

ಆದಷ್ಟು ಬೇಗ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ವಕೀಲ ಗೌಡಹಳ್ಳಿ ಮಹೇಶ್ ಒತ್ತಾಯಿಸಿದ್ದಾರೆ.

ಅಪೂರ್ಣಗೊಂಡಿರುವ ಸೇತುವೆ ಮೇಲೆ ವಾಹನಗಳು ಸಂಚರಿಸುತ್ತಿರುವ ವಿಚಾರ ಗಮನಕ್ಕೆ ಬಂದಿಲ್ಲ. ಜಿಲ್ಲಾಧಿಕಾರಿಗಳಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸಲಾಗುವುದು.
ಬಸವರಾಜು, ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT