ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮೂವರು ಗುಣಮುಖ, ಮನೆಗೆ

ಜಿಲ್ಲೆಯಲ್ಲಿ ಮತ್ತೆ ಐವರಿಗೆ ಸೋಂಕು, 87ಕ್ಕೆ ಏರಿದ ಪ್ರಕರಣಗಳ ಸಂಖ್ಯೆ, 79 ಮಂದಿಗೆ ಚಿಕಿತ್ಸೆ
Last Updated 4 ಜುಲೈ 2020, 16:03 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌–19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭೂಮಾಪನ ಇಲಾಖೆಯ ಮಹಿಳಾ ಸಿಬ್ಬಂದಿ, ಗುಂಡ್ಲುಪೇಟೆಯ ಒಬ್ಬರು ಮಹಿಳೆ ಹಾಗೂ ಮತ್ತೊಬ್ಬ ವ್ಯಕ್ತಿ ಸಂಪೂರ್ಣವಾಗಿ ಗುಣಮುಖಗೊಂಡು ಮನೆಗೆ ತೆರಳಿದ್ದಾರೆ.

ಜೂನ್‌ 22ರಲ್ಲಿ ಇವರಲ್ಲಿ ಸೋಂಕು ದೃಢಪಟ್ಟಿತ್ತು. 12 ದಿನಗಳ ಚಿಕಿತ್ಸೆಯ ನಂತರ ಅವರ ಗಂಟಲ ದ್ರವದ ಮಾದರಿ ಪರೀಕ್ಷಾ ವರದಿ ನೆಗೆಟಿವ್‌ ಬಂದಿದ್ದು, ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇನ್ನೂ 14 ದಿನಗಳ ಕಾಲ ಮೂವರೂ ಕಡ್ಡಾಯವಾಗಿ ಮನೆಯ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ.

ಕೋವಿಡ್‌ ಆಸ್ಪತ್ರೆಗೆ ದಾಖಲಾಗಿರುವ ಇನ್ನೂ 17 ಮಂದಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಅವರ ಗಂಟಲ ದ್ರವದ ಮಾದರಿ ಪರೀಕ್ಷೆಗೆ ವೈದ್ಯರು ಸಿದ್ಧತೆ ನಡೆಸಿದ್ದಾರೆ. ಸೋಮವಾರ ಇವರು ಮನೆಗೆ ತೆರಳುವ ಸಾಧ್ಯತೆ ಇದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಮತ್ತೆ ಐವರಲ್ಲಿ ದೃಢ: ಈ ಮಧ್ಯೆ, ಶನಿವಾರ ಜಿಲ್ಲೆಯಲ್ಲಿ ಐವರಲ್ಲಿ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿದೆ. ಇವರಲ್ಲಿ ಮೂವರು ಗುಂಡ್ಲುಪೇಟೆಯವರು. ಇನ್ನಿಬ್ಬರು ಚಾಮರಾಜನಗರದವರು. ನಾಲ್ಕು ಮಂದಿ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಗಳ ಸಂಪರ್ಕಿತರು. ಬೆಂಗಳೂರಿಗೆ ಹೋಗಿ ಬಂದಿರುವ 28 ವರ್ಷದ ಪುರುಷರೊಬ್ಬರೊಬ್ಬರು ಕೋವಿಡ್‌ಗೆ ತುತ್ತಾಗಿದ್ದಾರೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ದೃಢಪಟ್ಟ ಕೋವಿಡ್‌ ಪ್ರಕರಣಗಳ ಸಂಖ್ಯೆ 83ಕ್ಕೆ ಏರಿದೆ. ಇದುವರೆಗೆ ನಾಲ್ವರು ಗುಣಮುಖರಾಗಿದ್ದಾರೆ. ಸದ್ಯ 79 ಸಕ್ರಿಯ ಪ್ರಕರಣಗಳಿವೆ.

ಮನೆ ಕ್ವಾರಂಟೈನ್‌ನಲ್ಲಿ 839 ಮಂದಿ: ಕೋವಿಡ್‌–19ಗೆ ತುತ್ತಾಗಿರುವ ವ್ಯಕ್ತಿಗಳ 437 ಪ್ರಾಥಮಿಕ ಸಂಪರ್ಕಿತರು ಹಾಗೂ 402 ದ್ವಿತೀಯ ಸಂಪರ್ಕಿತರನ್ನು ಗುರುತಿಸಲಾಗಿದ್ದು, ಇವರನ್ನೆಲ್ಲ ಮನೆ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಶನಿವಾರ ವೈದ್ಯಕೀಯ ಕಾಲೇಜಿನ ಕೋವಿಡ್‌ ಪರೀಕ್ಷಾ ಪ್ರಯೋಗಾಲಯದಲ್ಲಿ 416 ಮಂದಿಯ ಗಂಟಲ ದ್ರವ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, 411 ಮಂದಿಯ ವರದಿಗಳು ನೆಗೆಟಿವ್‌ ಬಂದಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಅವರ ಗಂಟಲ ದ್ರವದ ಮಾದರಿ ವರದಿ ನೆಗೆಟಿವ್‌ ಬಂದಿದೆ.

ಶನಿವಾರ 429 ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಒಟ್ಟು 1,034 ವರದಿಗಳು ಬರಬೇಕಿದೆ.

ಇಂದು ಭಾನುವಾರದ ಲಾಕ್‌ಡೌನ್‌

ಸರ್ಕಾರದ ನಿರ್ಧಾರದಂತೆ ಜಿಲ್ಲೆಯಲ್ಲೂ ಭಾನುವಾರ ಲಾಕ್‌ಡೌನ್‌ ಜಾರಿಯಲ್ಲಿರಲ್ಲಿದೆ. ಔಷಧ ಅಂಗಡಿಗಳು, ಆಸ್ಪತ್ರೆ, ಹಾಲು, ಪತ್ರಿಕೆ, ದಿನಸಿ ಸೇರಿದಂತೆ ಅವಶ್ಯಕ ವಸ್ತುಗಳ ಮಳಿಗೆಗಳನ್ನು ಬಿಟ್ಟು ಉಳಿದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ತೆರೆಯುವುದಕ್ಕೆ ಅವಕಾಶ ಇಲ್ಲ.

ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು, ಆಟೊ, ಟಾಕ್ಸಿ ಸೇರಿದಂತೆ ಯಾವುದೇ ವಾಹನಗಳು ರಸ್ತೆಗೆ ಇಳಿಯುವುದಿಲ್ಲ. ಜನರು ಕೂಡ ಅನಗತ್ಯವಾಗಿ ಓಡಾಡುವುದಕ್ಕೆ ಅವಕಾಶ ಇಲ್ಲ.

ಮಹದೇಶ್ವರ ಬೆಟ್ಟ ದರ್ಶನ ಇಲ್ಲ: ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಭಾನುವಾರ ಭಕ್ತರಿಗೆ ಮಹದೇಶ್ವರಸ್ವಾಮಿಯ ದರ್ಶನಕ್ಕೆ ಅವಕಾಶ ಇಲ್ಲ. ದೇವಸ್ಥಾನದ ಮಟ್ಟಿಗೆ ಎಲ್ಲ ಪೂಜೆಗಳು ನಡೆಯಲಿವೆ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯ ವಿಭವ ಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT