ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧನ ಕೊಂದಿದ್ದ ಗಂಧದ ಕಳ್ಳರ ಬಂಧನ

Last Updated 5 ನವೆಂಬರ್ 2020, 14:25 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನಚಂದಕವಾಡಿ ಗ್ರಾಮದಲ್ಲಿ ಅಕ್ಟೋಬರ್‌ 4ರಂದು ರಾತ್ರಿ ಗಂಧದ ಮರ ಕಳ್ಳತನ ಮಾಡಲು ಬಂದು, ಮನೆಯ ಮಾಲೀಕನನ್ನು ಕೊಲೆ ಮಾಡಿದ್ದ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಬೂದಿಪಡಗ ಗ್ರಾಮದ ಮಹದೇವ ಅಲಿಯಾಸ್‌ ಕಳ್ಳ ಮಹದೇವ, ಕಾಳಿಕಾಂಬ ಕಾಲೋನಿಯ ಮುನಿಯಪ್ಪ, ಚಂದಕವಾಡಿ ಗ್ರಾಮದ ಇರ್ಪಾನ್ ಅಹಮ್ಮದ್ ಬಂಧಿತರು.

ಚಂದಕವಾಡಿಯ ಶಿವಬಸಪ್ಪ (80) ಅವರ ಮನೆಯ ಆವರಣದಲ್ಲಿ 20 ವರ್ಷದ ಗಂಧದ ಮರವಿತ್ತು. ಅ.4ರ ಮಧ್ಯರಾತ್ರಿ ಕಳ್ಳರು ಅದನ್ನು ಕಡಿಯಲು ಯತ್ನಿಸಿದ್ದರು. ಮನೆಯ ಹೊರಗಡೆ ಜಗಲಿಯಲ್ಲಿ ಮಲಗಿದ್ದ ಶಿವಬಸಪ್ಪ ಅವರು ತಡೆಯಲು ಪ್ರಯತ್ನಿಸಿದಾಗ ಆರೋಪಿಗಳು ಅವರ ಕೈಕಾಲು ಕಟ್ಟಿ, ಕುತ್ತಿಗೆಗೆ ಬಟ್ಟೆ ಬಿಗಿದು ಉಸಿರು ಕಟ್ಟಿಸಿ ಕೊಲೆ ಮಾಡಿದ್ದರು. ಆ ಬಳಿಕ ಮರ ಕಡಿಯುವುದನ್ನು ಮುಂದುವರಿಸಿದ್ದರು. ಗರಗಸದ ಸದ್ದಿಗೆ ಮನೆಯವರಿಗೆ ಎಚ್ಚರವಾಗಿ ಹೊರಗಡೆ ಬಂದಾಗ ಆರೋಪಿಗಳು ಪರಾರಿಯಾಗಿದ್ದರು. ಶಿವಬಸಪ್ಪ ಅವರಿಗಾಗಿ ಹುಡುಕಾಟ ನಡೆಸಿದಾಗ ಸ್ವಲ್ಪ ದೂರದಲ್ಲಿ ಅವರ ಶವ ಪತ್ತೆಯಾಗಿತ್ತು.

ಶಿವ ಬಸಪ್ಪ ಅವರ ಮೊಮ್ಮಗ ಕಿರಣ್ ಚಾಮರಾಜನಗರ ಪೂರ್ವ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್‌ ನಂಜಪ್ಪ ಹಾಗೂ ಜಿಲ್ಲಾ ಅಪರಾಧ ದಳದ ಇನ್‌ಸ್ಪೆಕ್ಟರ್‌ ಮಹದೇವಶೆಟ್ಟಿ ಅವರ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿತ್ತು.

ಪೊಲೀಸರ ತಂಡಗಳು ಹಳೆಯ ಗಂಧದ ಕಳ್ಳರನ್ನು ಕರೆಸಿ ವಿಚಾರಣೆ ನಡೆಸಿತ್ತು. ಅವರು ನೀಡಿದ ಆಧಾರದಲ್ಲಿ ಮಹದೇವ,ಮುನಿಯಪ್ಪ ಇರ್ಪಾನ್ ಅಹಮ್ಮದ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇನ್ನೂ ಮೂರು ಮಂದಿಯೊಂದಿಗೆ ಸೇರಿ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮೂವರ ವಿರುದ್ಧ ಪ್ರಕರಣ ದಾಖಲಿಸಿ ಗಂಧದ ಮರ ಕಡಿಯಲು ಬಳಸಿದ್ದ ಗರಗಸವನ್ನು ವಶಕ್ಕೆ ಪಡೆಯಲಾಗಿದ್ದು,ಉಳಿದ ಮೂವರು ಆರೋಪಿಗಳ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT