ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಲೋಕಸಭಾ ಚುನಾವಣೆ: ಸ್ಥಳೀಯರಿಗೆ ಟಿಕೆಟ್‌ಗೆ ಆಗ್ರಹ

Published 22 ಫೆಬ್ರುವರಿ 2024, 4:16 IST
Last Updated 22 ಫೆಬ್ರುವರಿ 2024, 4:16 IST
ಅಕ್ಷರ ಗಾತ್ರ

ಚಾಮರಾಜನಗರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರಿಯ ಪಕ್ಷಗಳು ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಸ್ಥಳೀಯರನ್ನೇ ಅಭ್ಯರ್ಥಿಗಳನ್ನಾಗಿ ಮಾಡಬೇಕು ಎಂದು ಜನ ಹಿತಾಸಕ್ತಿ ಹೋರಾಟ ವೇದಿಕೆ ಆಗ್ರಹಿಸಿದೆ. 

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್‌, ‘ವಿವಿಧ ರಾಜಕೀಯ ಪಕ್ಷಗಳಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲೇ ಹಲವರು ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಹೊರಗಡೆಯವರು ಕೂಡ ಟಿಕೆಟ್‌ಗಾಗಿ ಪ್ರಯತ್ನ ಪಡುತ್ತಿದ್ದಾರೆ. ಹೊರಗಡೆಯಿಂದ ಬಂದು ಸ್ಪರ್ಧಿಸಿ ಗೆಲುವು ಸಾಧಿಸಿದವರು, ನಂತರ ಜಿಲ್ಲೆ ಹಾಗೂ ಕ್ಷೇತ್ರದ ಬಗ್ಗೆ ನಿರ್ಲಕ್ಷ್ಯ ತಾಳುತ್ತಾರೆ’ ಎಂದು ದೂರಿದರು. 

‘ಸ್ಥಳೀಯರೇ ಅಭ್ಯರ್ಥಿಗಳಾಗಿ ಗೆದ್ದರೆ, ಅವರು ಜನರ ಕೈಗೆ ಸಿಗುತ್ತಾರೆ. ಜನರ ಕೆಲಸಗಳು ಆಗುತ್ತವೆ. ನಮ್ಮ ಜಿಲ್ಲೆ ಇನ್ನೂ ಅಭಿವೃದ್ಧಿಯಾಗಿಲ್ಲ. 25 ವರ್ಷಗಳ ಹಿಂದೆ ಚಾಮರಾಜನಗರದೊಂದಿಗೆ ಪ್ರತ್ಯೇಕ ಜಿಲ್ಲೆಯಾಗಿ ರೂಪುಕೊಂಡಿದ್ದ ಹಲವು ಜಿಲ್ಲೆಗಳು ಅಭಿವೃದ್ಧಿಯಾಗಿವೆ. ಸ್ಥಳೀಯರೇ ಸಂಸದರಾದರೆ ಅಭಿವೃದ್ಧಿಗೆ ಅನುಕೂಲ’ ಎಂದರು. 

‘ನಾವು ನಿರ್ದಿಷ್ಟ ಪಕ್ಷದ ಬಗ್ಗೆ ಮಾತನಾಡುತ್ತಿಲ್ಲ. ಎಲ್ಲ ಪಕ್ಷಗಳೂ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವವರಿಗೇ ಟಿಕೆಟ್‌ ನೀಡಬೇಕು ಎಂಬುದಷ್ಟೇ ನಮ್ಮ ಆಗ್ರಹ’ ಎಂದು ಸುರೇಶ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಚುನಾವಣೆ ಬಹಿಷ್ಕಾರ ಎಚ್ಚರಿಕೆ: ಕನ್ನಡ ಹೋರಾಟಗಾರ ನಿಜಧ್ವನಿ ಗೋವಿಂದರಾಜು ಮಾತನಾಡಿ, ‘ರಾಜಕೀಯ ಪಕ್ಷಗಳು ಸ್ಥಳೀಯರಿಗಲ್ಲದೆ ಹೊರಗಿನವರಿಗೆ ಮಣೆ ಹಾಕಿದರೆ, ಚುನಾವಣೆಯನ್ನು ಬಹಿಷ್ಕರಿಸುವಂತೆ ಕರೆ ನೀಡಲು ಆಂದೋಲನ ರೂಪಿಸಬೇಕಾಗುತ್ತದೆ. ಜಿಲ್ಲೆ, ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಸ್ಥಳೀಯರೇ ಸಂಸದರಾಗಬೇಕು’ ಎಂದು ಒತ್ತಾಯಿಸಿದರು. 

ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಡಹಳ್ಳಿ ನಾಗರಾಜು, ಗೌರವಾಧ್ಯಕ್ಷ ಈಶ್ವರ್, ಖಜಾಂಚಿ ಉಮ್ಮತ್ತೂರು ಸೋಮಣ್ಣ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT