ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಹೂವುಗಳಿಗೆ ಕುಗ್ಗದ ಬೇಡಿಕೆ, ಟೊಮೆಟೊ ಮತ್ತಷ್ಟು ದುಬಾರಿ

ಹಣ್ಣಗಳು, ಮಾಂಸ ಧಾರಣೆ ಯಥಾಸ್ಥಿತಿ
Last Updated 22 ನವೆಂಬರ್ 2021, 16:15 IST
ಅಕ್ಷರ ಗಾತ್ರ

ಚಾಮರಾಜನಗರ: ಮಳೆಯ ಕಾರಣದಿಂದಾಗಿ ಮಾರುಕಟ್ಟೆಗೆ ಟೊಮೆಟೊ ಆವಕದ ಪ್ರಮಾಣ ಗಣನೀಯವಾಗಿ ಇಳಿದಿದ್ದು, ಟೊಮೆಟೊ ದರ ₹100ರ ಆಸುಪಾಸಿಗೆ ತಲುಪಿದೆ.

ನಗರದ ಹಾಪ‍್‌ಕಾಮ್ಸ್‌ನಲ್ಲಿ ಕೆಜಿ ಟೊಮೆಟೊಗೆ ₹90ರಿಂದ ₹100ರವರೆಗೆ ಬೆಲೆ ಇದೆ. ಕಳೆದ ವಾರ ₹60 ಇತ್ತು. ನಗರದ ಮಾತ್ರವಲ್ಲದೇ ಜಿಲ್ಲೆಯ ಇತರ ಕಡೆಗಳಲ್ಲೂ ಇದೇ ಬೆಲೆ ಇದೆ.

‘ಮಳೆಯಿಂದ ಟೊಮೆಟೊ ಬೆಳೆ ಹಾನಿಗೀಡಾಗಿದೆ. ಹೀಗಾಗಿ, ಮಾರುಕಟ್ಟೆಗೆ ಟೊಮೆಟೊ ಹೆಚ್ಚು ಬರುತ್ತಿಲ್ಲ. ಈಗ ಶುಭ ಸಮಾರಂಭಗಳ ಸೀಸನ್‌ ಆಗಿರುವುದರಿಂದ ಟೊಮೆಟೊಗೆ ಬೇಡಿಕೆ ಹೆಚ್ಚಿದೆ. ಹಾಗಾಗಿ ಬೆಲೆ ಏರಿಕೆ ಕಂಡು ಬರುತ್ತಿದೆ. ವಾರದಿಂದೀಚೆಗೆ ಕೆಜಿ ಟೊಮೆಟೊ ಬೆಲೆ ₹40ನಷ್ಟು ಹೆಚ್ಚಿದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಅವರು ಪ್ರಜಾವಾಣಿಗೆ ತಿಳಿಸಿದರು.

ಬೀನ್ಸ್‌ ಬೆಲೆಯೂ ಕೆಜಿಗೆ‌₹20ರಷ್ಟು ಹೆಚ್ಚಾಗಿದೆ. ಕಳೆದವಾರ ₹40 ಇತ್ತು. ಈ ವಾರ ₹60 ಆಗಿದೆ. ನುಗ್ಗೆಕಾಯಿ ಮತ್ತಷ್ಟು ದುಬಾರಿಯಾಗಿದೆ. ಕೆಜಿಗೆ ₹200ರಿಂದ ₹250ರವರೆಗೆ ಮಾರಾಟವಾಗುತ್ತಿದೆ. ದಪ್ಪಮೆಣಸಿನಕಾಯಿ ಬೆಲೆ ₹20ರಷ್ಟು ಇಳಿದಿದೆ.

ಉಳಿದಂತೆ ಕ್ಯಾರೆಟ್‌, ಈರುಳ್ಳಿ, ಮೂಲಂಗಿ, ಬದನಕಾಯಿ, ಬೀಟ್‌ರೂಟ್‌ಗಳ ಬೆಲೆ ಕೆಜಿಗೆ ₹40 ಇದೆ.

ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.ಸೇಬು (₹120),ಮೂಸಂಬಿ, ಕಿತ್ತಳೆ (₹60), ದ್ರಾಕ್ಷಿ (₹120), ದಾಳಿಂಬೆ (₹180–₹200),ಏಲಕ್ಕಿ ಬಾಳೆ (₹40),ಪಚ್ಚ ಬಾಳೆ (₹20),ಪಪ್ಪಾಯಿ (₹25) ಕಳೆದ ವಾರದ ಬೆಲೆಯೇ ಮುಂದುವರಿದಿದೆ.

ಮಾಂಸಗಳ ಧಾರಣೆಯಲ್ಲೂ ಯಥಾಸ್ಥಿತಿ ಮುಂದುವರಿದಿದೆ.

ಹೂವುಗಳಿಗೆ ಕುಸಿಯದ ಬೇಡಿಕೆ: ಕಾರ್ತಿಕ ಮಾಸ ಹಾಗೂ ಶುಭಸಮಾರಂಭಗಳು ಹೆಚ್ಚು ನಡೆಯುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಹೂವಿನ ದರ ಗಗನಮುಖಿಯಾಗಿಯೇ ಇದೆ. ಮಳೆಯ ಕಾರಣದಿಂದ ಕಡಿಮೆ ಹೂವು ಬರುತ್ತಿರುವುದು ಕೂಡ ಬೆಲೆ ಏರುಗತಿಗೆ ಕಾರಣ ಎಂದು ಹೇಳುತ್ತಾರೆ ಹೂವಿನ ವ್ಯಾ‍ಪಾರಿಗಳು.

ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕೆಜಿ ಕನಕಾಂಬರಕ್ಕೆ ₹2000ದವರೆಗೆ ಬೆಲೆ ಇದೆ. ಕಾಕಡ, ಮರ್ಲೆಗೆ ₹400, ಸೇವಂತಿಗೆಗೆ ₹160, ಸುಗಂಧರಾಜಕ್ಕೆ ₹80, ಚೆಂಡು ಹೂವಿಗೆ ₹80 ಇದೆ.

ಮರ್ಲೆ ಸೇರಿದಂತೆ ಕೆಲವು ಹೂವುಗಳ ಬೆಲೆ ಭಾನುವಾರ ಹೆಚ್ಚಿತ್ತು. ಸೋಮವಾರ ಇಳಿದಿದೆ. ಕಾರ್ತಿಕ ಮಾಸ ಮುಗಿಯುವವರೆಗೂ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗದು ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT