ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಪಡೆದಾದರೂ ಅರಿಶಿನ ಖರೀದಿಸಿ; ಅಧಿಕಾರಿಗಳಿಗೆ ರೈತರ ಆಗ್ರಹ

Published 30 ಮೇ 2023, 14:17 IST
Last Updated 30 ಮೇ 2023, 14:17 IST
ಅಕ್ಷರ ಗಾತ್ರ

ಚಾಮರಾಜನಗರ: ಕೇಂದ್ರ ಸರ್ಕಾರವು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಅರಿಶಿನ ಖರೀದಿಸಲು ಆದೇಶ ಹೊರಡಿಸಿದ್ದರೂ, ಜಿಲ್ಲೆಯ ಅಧಿಕಾರಿಗಳು ರೈತರಿಂದ ಅರಿಶಿನ ಖರೀದಿಸದೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ರಾಜ್ಯ ಅರಿಶಿನ ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳು ನಗರದ ಜಿಲ್ಲಾಡಳಿತ ಭವನದ ಎದುರು ಅರಿಶಿನ ಸುರಿದು ಆಕ್ರೋಶ ವ್ಯಕ್ತಪಡಿಸಿದರು.  

ಅಲ್ಲದೇ, ‘ಎಲ್ಲ ರೈತರಿಂದ ಹಣ ಸಂಗ್ರಹಿಸಿ ನಿಮಗೆ ಲಂಚ ಕೊಡುತ್ತೇವೆ. ಅದನ್ನು ಪಡೆದಾದರೂ ಅರಿಶಿನ ಖರೀದಿಸಿ’ ಎಂದು ಆಗ್ರಹಿಸಿದ ರೈತರು, ಸ್ಥಳದಲ್ಲೇ ಎಲ್ಲ ಪ್ರತಿಭಟನಕಾರರಿಂದ  ಹಣ ಸಂಗ್ರಹಿಸಿ ಅಧಿಕಾರಿಯೊಬ್ಬರ ಜೇಬಿಗೆ ಹಾಕಲು ಯತ್ನಿಸಿದರು. 

ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸೇರಿದ ಪ್ರತಿಭಟನಕಾರರು ಅಲ್ಲಿಂದ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನದವರೆಗೂ ಮೆರವಣಿಗೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. 

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅರಿಶಿನ ಖರೀದಿಗೆ ಆದೇಶಿಸಿದ್ದರೂ ಜಿಲ್ಲೆಯ ಅಧಿಕಾರಿಗಳು ಖರೀದಿ ಮಾಡಲು ಮುಂದಾಗಿಲ್ಲ. ಅರಿಶಿನ ಖರೀದಿಗೆ ಕೇಂದ್ರ ಸರ್ಕಾರ ನೀಡಿದ್ದ ಗಡುವು ಮುಗಿದಿರುತ್ತದೆ. ಮೇ 21ರೊಳಗೆ 22 ಸಾವಿರ ಟನ್ ಅರಿಶಿನ ಖರೀದಿ ಮಾಡಲು ಸೂಚಿಸಿತ್ತು. ಆದರೆ, ಅಧಿಕಾರಿಗಳು ಚುನಾವಣೆಯ ನೆಪವೊಡ್ಡಿ ಖರೀದಿ ಮಾಡಿಲ್ಲ. ರೈತರು ಮಾರಾಟಕ್ಕಾಗಿ ಅರಿಶಿನವನ್ನು ಪಾಲಿಶ್‌ ಮಾಡಿ ಸಂಗ್ರಹಿಸಿಟ್ಟಿದ್ದು, ಇನ್ನೂ ‌ನಾಲ್ಕೈದು ದಿನಗಳು ಕಳೆದರೆ ಅರಿಸಿನಕ್ಕೆ ಹುಳ ಹಿಡಿದು ಹಾಳಾಗುತ್ತದೆ. ರೈತರು ನಷ್ಟ ಅನುಭವಿಸಬೇಕಾಗುತ್ತದೆ’ ಎಂದು ಆಕ್ರೋಶಗೊಂಡರು.    

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನಕ್ಕೆ ತಂದು ಖರೀದಿ ದಿನಾಂಕವನ್ನು ವಿಸ್ತರಣೆ ಮಾಡಿಸಿ ರೈತರಿಂದ ಅರಿಶಿನ ಖರೀದಿ ಮಾಡಬೇಕು ಎಂದು ಆಗ್ರಹಿಸಿದರು. 

ಪ್ರತಿಭಟನಕಾರರ ಅಹವಾಲು ಕೇಳಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಯೋಗಾನಂದ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಶಿವಪ್ರಸಾದ್‌, ಎಪಿಎಂಸಿ ಕಾರ್ಯದರ್ಶಿ ಪ್ರಕಾಶ್‌ ಕುಮಾರ್, ಜಿಲ್ಲೆಯ ಖರೀದಿ ಏಜೆನ್ಸಿಯಾದ  ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಲದ ಜಿಲ್ಲಾ ವ್ಯವಸ್ಥಾಪಕ ರವೀಂದ್ರ ಬಂದರು. 

ಪ್ರತಿಭಟನನಿರತ ರೈತರು, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 

‘ಚುನಾವಣೆಯ ಕಾರಣಕ್ಕೆ ಖರೀದಿ ಕೇಂದ್ರ ಆರಂಭಿಸಲು ಆಗಿಲ್ಲ. ದಿನಾಂಕ ವಿಸ್ತರಿಸಲಾಗುವುದು ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಶೀಘ್ರದಲ್ಲಿ ಅರಿಶಿನ ಖರೀದಿಸಲಾಗುವುದು’ ಎಂದು ಅಧಿಕಾರಿಗಳು ಭರವಸೆ ನೀಡಿದರು.

ರೈತ ಸಂಘದ ಜಿಲ್ಲಾ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ, ‘ತಕ್ಷಣವೇ ಖರೀದಿಗೆ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಯಾವೊಬ್ಬ ಅಧಿಕಾರಿಯನ್ನು ಊರುಗಳಿಗೆ ಬರುವುದಕ್ಕೆ ಬಿಡುವುದಿಲ್ಲ. ಯಾವುದೇ ತೆರಿಗೆಯನ್ನು ನಾವು ಪಾವತಿಸುವುದಿಲ್ಲ. ಅಸಹಕಾರ ಚಳವಳಿ ಹೂಡುತ್ತೇವೆ’ ಎಂದು ಎಚ್ಚರಿಸಿದರು.

‘ನೀತಿ ಸಂಹಿತೆ ಎಂದು ಹೇಳುತ್ತಿದ್ದೀರಿ. ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಗಳು ಕೋಟಿಗಟ್ಟಲೆ ರೂಪಾಯಿ ಹಂಚುವಾಗ ನೀತಿ ಸಂಹಿತೆ ಇರಲಿಲ್ಲವೇ? ರೈತರಿಗೆ ಮಾತ್ರ ನೀತಿ ಸಂಹಿತೆಯೇ’ ಎಂದು ಖಾರವಾಗಿ ಪ್ರಶ್ನಿಸಿದರು. 

ರೈತ ಮುಖಂಡರಾದ ಕುಂದಕೆರೆ ಚಂದ್ರು, ನಾಗಾರ್ಜುನಕುಮಾರ್, ಕುಂದಕೆರೆ ಸಂಪತ್ತು , ಚಂಗಡಿ ಕರಿಯಪ್ಪ, ಮಹೇಶ್, ಕುಮಾರ್ ಮೇಲಾಜಿಪುರ, ದಡದಹಳ್ಳಿ ಮಹೇಶ್, ಮಹದೇವಸ್ವಾಮಿ, ಶಾಂತಮೂರ್ತಿ, ಗುರುಪ್ರಸಾದ್ ಇತರರು ಇದ್ದರು. 

ಸಾಂಕೇತಿಕವಾಗಿ ಅರಿಶಿನ ಖರೀದಿ

ಸಾಂಕೇತಿಕವಾಗಿ ಖರೀದಿ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇರಲಿಲ್ಲ. ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಕಾತ್ಯಾಯಿನಿ ದೇವಿಯವರು ದೂರವಾಣಿ ಮೂಲಕ ಮುಖಂಡರೊಂದಿಗೆ ಮಾತನಾಡಿ ಬುಧವಾರದಿಂದ ಅರಿಶಿನ ಖರೀದಿಸಲು ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.  ರೈತರು ‘ಬುಧವಾರ ಹೇಗೂ ಖರೀದಿ ಮಾಡುತ್ತೀರಿ. ಇಂದಿನಿಂದಲೇ ಆ ಕೆಲಸ ಮಾಡಿ. ಸ್ಥಳದಲ್ಲೇ ಸಾಂಕೇತಿಕವಾಗಿ ಅರಿಶಿನ ಖರೀದಿ’ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳ ಮುಂದೆ ಪಟ್ಟು ಹಿಡಿದರು. ನಂತರ ಅಧಿಕಾರಿಗಳು ಅರಿಶಿನವನ್ನು ಸಾಂಕೇತಿಕವಾಗಿ ಖರೀದಿಸಿದರು. ಆ ಬಳಿಕ ರೈತರು ಪ್ರತಿಭಟನೆಯನ್ನು ಕೈಬಿಟ್ಟರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT