ಬುಧವಾರ, ಆಗಸ್ಟ್ 17, 2022
23 °C
ಹೊನ್ನಶೆಟ್ಟರ ಹುಂಡಿಯಲ್ಲಿ ಕ್ರಮ ಕೈಗೊಂಡಿಲ್ಲ

ಗುಂಡ್ಲುಪೇಟೆ: ಹೊಲದಲ್ಲಿ ಇಬ್ಬರು ಕ್ವಾರಂಟೈನ್‌, ತಾಲೂಕಾಡಳಿತದ ವಿರುದ್ಧ ಆಕ್ರೋಶ

ಮಲ್ಲೇಶ ಎಂ. Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ತಾಲ್ಲೂಕಿನ ಹೊನ್ನಶೆಟ್ಟರ ಹುಂಡಿ ಗ್ರಾಮದಲ್ಲಿ ಮಹಿಳೆಯೊಬ್ಬರಿಗೆ ಮೂರು ದಿನಗಳ ಹಿಂದೆ ಕೋವಿಡ್‌–19 ದೃಢಪಟ್ಟಿರುವುದರಿಂದ ಅವರ ತೋಟದ ಮನೆಗೆ ಗಾರೆ ಕೆಲಸಕ್ಕೆ ಹೋಗಿದ್ದ ಇಬ್ಬರು, ತಮ್ಮ ಶೇಂಗಾ ಹೊಲದಲ್ಲಿ ಕಾವಲು ಕಾಯಲು ಹಾಕಿರುವ ಶೆಡ್‌ನಲ್ಲಿ ಕ್ವಾರಂಟೈನ್‌ ಆಗಿದ್ದಾರೆ. 

ಇಬ್ಬರು ಕೂಡ ಮಹಿಳೆಯೊಂದಿಗೆ ನೇರ ಸಂಪರ್ಕಕ್ಕೆ ಬಂದಿಲ್ಲ. ಆದರೆ, ಅವರ ಪ್ರಾಥಮಿಕ ಸಂಪರ್ಕಿತ ಪತಿಯೊಂದಿಗೆ ಹೆಚ್ಚು ಬೆರೆತಿದ್ದಾರೆ. ಹಾಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಕುಟುಂಬದ ಸದಸ್ಯರಿಂದ ದೂರ ಉಳಿಯುವುದಕ್ಕಾಗಿ ಹೊಲದಲ್ಲೇ ವಾಸ್ತವ್ಯ ಹೂಡಿದ್ದಾರೆ. 

ಮಹಿಳೆಯ ಮನೆಗೆ ಕೃಷಿ ಕೆಲಸಕ್ಕೆ ಹೋಗಿದ್ದ ಮೂವರು ಮಹಿಳೆಯರು ತಮ್ಮ ಮನೆಯಲ್ಲಿ ಕ್ವಾರಂಟೈನ್‌ ಆಗಿದ್ದಾರೆ. ಒಂದೇ ಮನೆಯಲ್ಲಿ ಮೂವರೂ ಇದ್ದಾರೆ. 

ಮೂಖಹಳ್ಳಿ ಗ್ರಾಮ ಪಂಚಾಯಿತಿಗೆ ಬರುವ ಈ ಊರಿನಲ್ಲಿ ಕ್ವಾರಂಟೈನ್‌ಗೆ ಒಳಗಾಗಿರುವರಿಗೆ ಅಗತ್ಯ ವ್ಯವಸ್ಥೆ ಮಾಡಲು ತಾಲ್ಲೂಕಿನ ಆಡಳಿತ ವಿಫಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 

ಅಧಿಕಾರಿಗಳು ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂಬುದು ಅವರ ದೂರು. ಕ್ವಾರಂಟೈನ್‌ನಲ್ಲಿರುವವರಿಗೆ ಕುಟುಂಬದವರೇ ಆತಂಕದಲ್ಲಿ ಆಹಾರ ಪೂರೈಕೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. 

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕುಲದೀಪ್ ಸಿಂಗ್ ಅವರಿಗೆ ಗುಂಡ್ಲುಪೇಟೆ ತಾಲ್ಲೂಕು ಗ್ರಾಮಾಂತರ ವಲಯದ ಜವಾಬ್ದಾರಿ ವಹಿಸಲಾಗಿದೆ.

ಈ ಬಗ್ಗೆ, ವಿಚಾರಿಸಲು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕುಲದೀಪ್ ಸಿಂಗ್ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಅವರಿಗೆ ದೂರವಾಣಿ ಕರೆ ಮಾಡಲಾಯಿತಾದರೂ ಸಂಪರ್ಕ ಸಾಧ್ಯವಾಗಲಿಲ್ಲ. ಮಾಡಿದರೆ ಕರೆ ಸ್ವೀಕರಿಸಲಿಲ್ಲ.

ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಕೋವಿಡ್‌–19 ದೃಢಪಟ್ಟ ಮಹಿಳೆಯ ಪತಿ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸಕ್ರಿಯರಾಗಿದ್ದು, ಗ್ರಾಮದ ಹಲವರೊಂದಿಗೆ ಹೆಚ್ಚು ಒಡನಾಟ ಹೊಂದಿದ್ದಾರೆ. ಅವರು ಪ್ರಾಥಮಿಕ ಸಂಪರ್ಕಿತರಾಗಿರುವುದರಿಂದ ಸ್ಥಳೀಯರಲ್ಲಿ ಭಯ ಹೆಚ್ಚಾಗಿದೆ.   

ಮಹಿಳೆಯು ಗುಂಡ್ಲುಪೇಟೆಯಲ್ಲಿರುವ ಸಂಬಂಧಿ ಮನೆ ಹಾಗೂ ಹೊನ್ನಶೆಟ್ಟರ ಹುಂಡಿಯ ತಮ್ಮ ತೋಟದ ಮನೆಗೆ ಭೇಟಿ ನೀಡಿದ್ದರು ಎಂದೂ ಹೇಳಲಾಗುತ್ತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು