ಭಾನುವಾರ, ಏಪ್ರಿಲ್ 11, 2021
33 °C
ವಿಶ್ರಮಿಸಲು ಸಮಯವಿಲ್ಲ

ಮಾಸ್ಕ್ ಬಂತು, ಹೆಲ್ಮೆಟ್ ಹೋಯಿತು, ಪೊಲೀಸರಿಗೆ ಈಗ ಎರಡು ಕೆಲಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಕೋವಿಡ್‌–19 ತಡೆಗೆ ಲಾಕ್‌ಡೌನ್‌ ಜಾರಿಯಾದ ನಂತರ ಅವುಗಳ ನಿಯಮಗಳ ಕಟ್ಟುನಿಟ್ಟಿನ ಪಾಲನೆಯ ಮೇಲೆ ಪೊಲೀಸರು ನಿಗಾ ಇಟ್ಟಿರುವುದು ದ್ವಿಚಕ್ರ ಸವಾರರಿಗೆ ವರದಾನವಾಗಿದೆ. ಬಹುತೇಕ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸುವುದನ್ನು ಮರೆತಿದ್ದಾರೆ. ಪಟ್ಟಣದಲ್ಲಿ ಈಗ ಹೆಲ್ಮೆಟ್‌ ರಹಿತ ಸವಾರರೇ ಕಾಣಸಿಗುತ್ತಿದ್ದಾರೆ.    

ಲಾಕ್‌ಡೌನ್‌ಗೂ ಮೊದಲು ದ್ವಿಚಕ್ರ ವಾಹನ ಪ್ರಯಾಣಿಕರು ಹೆಲ್ಮೆಟ್‌ ಧರಿಸಿ ಪ್ರಯಾಣಿಸುತ್ತಿದ್ದರು. ಪೊಲೀಸರು ಹದ್ದಿನ ಕಣ್ಣಿಟ್ಟು ದಂಡ ವಿಧಿಸುತ್ತಿದ್ದರು. ಲಾಕ್‌ಡೌನ್‌ ನಂತರ ಪೊಲೀಸರು ಅದರ ನಿಯಮ ಪಾಲನೆ ಮೇಲೆ  ನಿಗಾ ಇಡಲು ಆರಂಭಿಸಿದರು. ಜನರು ಅನಗತ್ಯವಾಗಿ ಓಡಾಡುವುದನ್ನು ನಿಯಂತ್ರಿಸುವುದು, ಅಂತರ ಕಾಯ್ದಕೊಳ್ಳುವುದು, ಮಾಸ್ಕ್‌ ಧರಿಸುವಂತೆ ಮಾಡುವುದು.. ಮುಂತಾದವುಗಳ ಬಗ್ಗೆ ಹೆಚ್ಚು ಗಮನ ಹರಿಸಿದರು. ಜನ ಸಂಚಾರ ವಿರಳವಾಗಿದ್ದರಿಂದ ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.

ಇದನ್ನೇ ಜನರು ದುರ್ಬಳಕೆ ಮಾಡಲು ಆರಂಭಿಸಿದ್ದಾರೆ. ದಂಡದ ಭಯವಿಲ್ಲದೇ ಹೆಲ್ಮೆಟ್ ಧರಿಸದೇ ಸವಾರಿ ಮಾಡುತ್ತಿದ್ದಾರೆ. ಆದರೆ, ಮಾಸ್ಕ್‌ ಧರಿಸುತ್ತಿದ್ದಾರೆ. ಯಾಕೆಂದರೆ, ಮಾಸ್ಕ್‌ ಧರಿಸದಿದ್ದರೂ ದಂಡ ಬೀಳುತ್ತದೆ! 

ತಾಲ್ಲೂಕಿನಲ್ಲಿ ಜನವರಿಯಿಂದ ಅಪಘಾತ ನಿಯಂತ್ರಿಸುವ ದೆಸೆಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿದವರಿಗೆ ದಂಡ ವಿಧಿಸುತ್ತಿದ್ದರು. ಮಾರ್ಚ್ ತಿಂಗಳ ಮಧ್ಯದವರೆಗೂ ಅಪಘಾತ ಪ್ರಕರಣಗಳು ಕಡಿಮೆಯಾಗಿತ್ತು. ಹೆಲ್ಮೆಟ್ ಕಡ್ಡಾಯಗೊಳಿಸಿದ ನಂತರ ದ್ವಿಚಕ್ರ ವಾಹನ ಸವಾರರು ಬಿದ್ದು, ಪ್ರಾಣ ಕಳೆದುಕೊಳ್ಳುತ್ತಿದ್ದ ಪ್ರಮಾಣ ಇಳಿಕೆ ಆಗಿದೆ. ಇದೀಗ ಲಾಕ್‌ಡೌನ್ ಸಡಿಲಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡಿರುವುದರಿಂದ ಅಪಘಾತ ಪ್ರಮಾಣ ಹೆಚ್ಚುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನುತ್ತಾರೆ ಸಾರ್ವಜನಿಕರು. 

ಮಾಸ್ಕ್ ಧರಿಸಿದರೆ ಹೆಲ್ಮೆಟ್ ಹಾಕಿಕೊಳ್ಳುವುದು ಕಷ್ಟವಾಗುತ್ತದೆ ಎನ್ನುವುದು ದ್ವಿಚಕ್ರ ಸವಾರರ ವಾದ. ಮಾಸ್ಕ್ ಜತೆಗೆ ಹೆಲ್ಮೆಟ್ ಹಾಕುವುದರಿಂದ ಉಸಿರು ಕಟ್ಟಿದಂತೆ ಆಗುತ್ತದೆ. ಹಾಗಾಗಿ, ಕೆಲವು ದಿನ ಹೆಲ್ಮೆಟ್ ಧರಿಸದೆ ಪ್ರಯಾಣಿಸುವುದಕ್ಕೆ ಅವಕಾಶ ನೀಡಬೇಕು ಎನ್ನುವುದು ಸವಾರರ ಬೇಡಿಕೆ. 

‘ಬೇಸಿಗೆಯ ಉಷ್ಣಾಂಶ ಹೆಚ್ಚಿರುವುದರಿಂದ ಹೆಲ್ಮೆಟ್ ಧರಿಸುವುದಕ್ಕೆ ಕಿರಿಕಿರಿ ಆಗುತ್ತದೆ. ಉಷ್ಣಾಂಶ ಹೆಚ್ಚಾಗಿ ಚರ್ಮ ಕಾಯಿಲೆ ಬರುವ ಸಾಧ್ಯತೆ ಇದೆ. ಹಾಗಾಗಿ, ಬಿರು ಬೇಸಿಗೆಯಲ್ಲಿ ಹೆಲ್ಮೆಟ್‌ನಿಂದ ವಿನಾಯಿತಿ ನೀಡಬೇಕು’ ಎಂದು ಒತ್ತಾಯಿಸುತ್ತಾರೆ ಪಟ್ಟಣದ ಮರಿಸ್ವಾಮಿ ಮತ್ತು ಮಾಂಬಳ್ಳಿ ರಘು. 

‘ಮಾಸ್ಕ್ ಧರಿಸದಿದ್ದರೆ ಅಧಿಕಾರಿಗಳು ದಂಡ ಹಾಕುತ್ತಾರೆ. ಇದನ್ನು ತಪ್ಪಿಸಲು, ಹೆಲ್ಮೆಟ್ ಧರಿಸಿದ ದ್ವಿಚಕ್ರ ವಾಹನ ಸವಾರರಿಗೆ ಮಾಸ್ಕ್‌ನಿಂದ ವಿನಾಯಿತಿ ನೀಡಬೇಕು’ ಎನ್ನುತ್ತಾರೆ ಅಂಬಳೆ ರಂಗರಾಜು.

ವಿಮಾ ಪರಿಹಾರ ಲಭಿಸದು

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಟ್ಟಣ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಡಿ.ಆರ್‌.ರವಿಕುಮಾರ್ ಅವರು,  ‘ಈಗ ಹೆಲ್ಮೆಟ್‌ ಧರಿಸದೆ ಸಂಚರಿಸುವ ದ್ವಿಚಕ್ರ ಸವಾರರಿಗೆ ದಂಡ ವಿಧಿಸುತ್ತಿದ್ದೇವೆ. ಪೊಲೀಸ್‌ ಸಿಬ್ಬಂದಿ ಕೋವಿಡ್‌–19 ನಿಯಂತ್ರಣ ಮತ್ತು ವಾಹನ ತಪಾಸಣೆ ಕಡೆಯೂ ಹೆಚ್ಚಿನ ನಿಗಾ ವಹಿಸಬೇಕಿದೆ. ಹೆಲ್ಮೆಟ್ ಧರಿಸದೆ ಅಪಘಾತದಲ್ಲಿ ಮೃತಪಟ್ಟರೆ ವಿಮಾ ಪರಿಹಾರ ಸಿಗುವುದಿಲ್ಲ. ಹೈಕೋರ್ಟ್ ಸಹ ಐಎಸ್ಐ, ಬಿಐಎಸ್ ಗುರುತು ಇಲ್ಲದ ಅರ್ಧ ಹೆಲ್ಮೆಟ್ ಧರಿಸಿದ ವೇಳೆ ಅಪಘಾತ ಸಂಭವಿಸಿದರೆ ವಿಮಾ ಪರಿಹಾರ ಸಿಗುವುದಿಲ್ಲ ಎಂದು ತೀರ್ಪು ನೀಡಿದೆ. ಇದನ್ನು ಅರಿತ ಕೆಲವು ಸವಾರರು ಹೆಲ್ಮೆಟ್ ಧರಿಸುತ್ತಿದ್ದಾರೆ. ಮತ್ತೆ ಕೆಲವರು ಅನಾಹುತ ಲೆಕ್ಕಿಸದೆ ಯಾವುದೇ ಸುರಕ್ಷತಾ ಸಾಧನ ಬಳಸದೆ ಸಂಚರಿಸುತ್ತಿದ್ದಾರೆ. ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ಇಲ್ಲದಿದ್ದರೆ ದಂಡ ತೆರಬೇಕಾಗುತ್ತದೆ’ ಎಂದು ಹೇಳಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು