ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಾರ ಸಮಾಜ ಶಿಕ್ಷಣಕ್ಕೆ ಆದ್ಯತೆ ನೀಡಲಿ: ನಾರಾಯಣಸ್ವಾಮಿ

Published 15 ಮೇ 2024, 4:44 IST
Last Updated 15 ಮೇ 2024, 4:44 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತದಿಂದ ಭಗೀರಥ ಮಹರ್ಷಿ ಜಯಂತಿಯನ್ನು ಮಂಗಳವಾರ ಸರಳವಾಗಿ ಆಚರಿಸಲಾಯಿತು.

ಗ್ರೇಡ್ -2 ತಹಶೀಲ್ದಾರ್ ಜಯಪ್ರಕಾಶ್ ಹಾಗೂ ಸಮುದಾಯದ ಮುಖಂಡರು ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

ಉಪ್ಪಾರ ಸಮುದಾಯದ ಮುಖಂಡ ಕೊಡಹಳ್ಳಿ ಅಣ್ಣಯ್ಯಸ್ವಾಮಿ ಮಾತನಾಡಿ, ‘ಭಗೀರಥ ತನ್ನ ಸಾಹಸಕ್ಕೆ, ಗುರುಭಕ್ತಿ, ಪ್ರಯತ್ನಶೀಲತೆಗೆ ಆದರ್ಶವಾಗಿದ್ದಾರೆ. ಗಂಗೆಯನ್ನು ಹಿಮಾಲಯದಿಂದ ಭೂಮಿಗೆ ತಂದು ಭೂಮಿಯ ಜೀವಧಾತುಗಳಿಗೆ ಸನ್ಮಾರ್ಗವನ್ನು ತೋರಿಸಿದ್ದಾರೆ’ ಎಂದು ತಿಳಿಸಿದರು.

ಕೈಲಾಸ್ ಸತ್ಯಾರ್ಥಿ ಚಿಲ್ಡ್ರನ್ ಫೌಂಡೇಶನ್ ಜಿಲ್ಲಾ ಸಂಯೋಜಕ ನಾರಾಯಣಸ್ವಾಮಿ ಮಾತನಾಡಿ, ‘ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಬಹಳ ಹಿಂದುಳಿದಿದೆ. ಸಮಾಜವನ್ನು ಮುಖ್ಯವಾಹಿನಿಗೆ ತರಲು ಪ್ರತಿಯೊಬ್ಬರೂ ಭಗೀರಥ ಪ್ರಯತ್ನವನ್ನು ಪಕ್ಷಾತೀತವಾಗಿ ಮಾಡಬೇಕು. ಜೊತೆಗೆ ಪೋಷಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು’ ಎಂದು ಸಲಹೆ ನೀಡಿದರು.

‘ಭೂಮಿಗೆ ನೀರನ್ನು ತಂದುಕೊಟ್ಟವರು ಮಹಾ ಪುರುಷ ಭಗೀರಥ ಸ್ವಾಮೀಜಿ. ಅಂಬೇಡ್ಕರ್, ಬಸವಣ್ಣ, ಗಾಂಧೀಜಿ, ಬಾಬು ಜಗಜೀವನ ರಾಂ ಸಮಾಜದಲ್ಲಿ ನಿಸ್ವಾರ್ಥದಿಂದ ಕೆಲಸ ಮಾಡಿದವರು. ಮನುಷ್ಯ ಹುಟ್ಟು-ಸಾವಿನ ನಡುವೆ ಈ ಭೂಮಿಯಲ್ಲಿ ತನ್ನ ಹೆಜ್ಜೆ ಗುರುತನ್ನು ಬಿಟ್ಟು ಹೋಗಬೇಕು. ಆಗ ಸಮಾಜ ನಮ್ಮನ್ನು ನೆನೆಯುತ್ತದೆ’ ಎಂದರು.

‘ಸಮಾಜದಲ್ಲಿ ನಂಬಿಕೆ, ವಿಶ್ವಾಸ ಕಡಿಮೆಯಾಗುತ್ತಿದೆ. ಜಾತಿ-ಜಾತಿಗಳ ನಡುವೆ, ಧರ್ಮ-ಧರ್ಮಗಳ ನಡುವೆ ಹಾಗೂ ರಾಜಕೀಯ ಪಕ್ಷಗಳ ನಡುವೆ ಸಂಘರ್ಷಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ನಾವು ನಂಬಿಕೆ-ವಿಶ್ವಾಸದಿಂದ ಕೆಲಸ ಮಾಡಬೇಕಾಗುತ್ತದೆ. ಉಪ್ಪಾರ ಸಮಾಜದ ಬಂಧುಗಳು ಸ್ವಾಭಿಮಾನದಿಂದ ಸಂಘಟಿತರಾಗಿ ತಮ್ಮ ಸಾಮರ್ಥ್ಯವನ್ನು ಸರ್ಕಾರಕ್ಕೆ ತೋರಿಸಬೇಕು’ ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ, ಶಿರಸ್ತೇದಾರ್ ಮಹೇಶ್, ಕಸಾಪ ಜಿಲ್ಲಾಧ್ಯಕ್ಷ ಎಂ. ಶೈಲಾಕುಮಾರ್, ಎಪಿಎಂಸಿ ನಿರ್ದೇಶಕ ಅರಸಶೆಟ್ಟಿ, ತೊಂಡವಾಡಿ ರವಿ, ಮಹೇಶ್, ಕಾವಲು ಪಡೆ ತಾಲ್ಲೂಕು ಅಧ್ಯಕ್ಷ ಅಬ್ದುಲ್ ಮಾಲೀಕ್ ಸೇರಿದಂತೆ ಉಪ್ಪಾರ ಸಮುದಾಯದ ಮುಖಂಡರು ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT