ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಸಂಭ್ರಮ ಸಡಗರದ ವರಮಹಾಲಕ್ಷ್ಮಿ ವ್ರತ

ಮಹಿಳೆಯರಿಂದ ವ್ರತಾಚರಣೆ, ಮನೆಗಳಿಗೆ ತಳಿರು ತೋರಣಗಳ ಶೃಂಗಾರ
Published 25 ಆಗಸ್ಟ್ 2023, 13:08 IST
Last Updated 25 ಆಗಸ್ಟ್ 2023, 13:08 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ಹಿಂದೂಗಳು ಶುಕ್ರವಾರ ವರ ಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ/ವ್ರತವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನ ಮಹಾಲಕ್ಷ್ಮಿಯನ್ನು ಪೂಜಿಸಿದರೆ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ಅಷ್ಟೈಶ್ವರ್ಯ ಲಭಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹಾಗಾಗಿ, ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.  

ಹಬ್ಬದ ಅಂಗವಾಗಿ ಜಿಲ್ಲೆಯಾದ್ಯಂತ ಮನೆಗಳಲ್ಲಿ ಹಬ್ಬದ ವಾತಾವರಣ ಕಂಡು ಬಂತು. ಮಹಿಳೆಯರು ವರಮಹಾಲಕ್ಷ್ಮಿ ವ್ರತ ಆಚರಿಸಿದರು. 

ಬಾಳೆ ಕಂದು, ಮಾವಿನ ಸೊಪ್ಪು, ಕಬ್ಬಿನ ಪೈರುಗಳ ತೋರಣಗಳಿಂದ ಮನೆಗಳನ್ನು ಅಲಂಕರಿಸಲಾಗಿತ್ತು. ಮನೆ ಮುಂಭಾಗದಲ್ಲಿ ಮಹಿಳೆಯರು ಬಣ್ಣ ಬಣ್ಣದ ರಂಗೋಲಿಗಳು ಹಬ್ಬದ ಕಳೆಯನ್ನು ಹೆಚ್ಚಿಸಿತ್ತು.   

ಹೊಸ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಮಹಿಳೆಯರು ಮನೆಗಳಲ್ಲಿ ಬೆಳಿಗ್ಗೆಯಿಂದ ಉಪವಾಸ ಇದ್ದು, ಮಹಾಲಕ್ಷ್ಮಿಯ ಮೂರ್ತಿ ಸ್ಥಾಪಿಸಿ, ಹೂವು, ಚಿನ್ನಾಭರಣಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು. ಹೊಸ ಧಿರಿಸಿನಲ್ಲಿ ಮಿಂಚುತ್ತಿದ್ದ ಹೆಣ್ಣುಮಕ್ಕಳು, ಮಕ್ಕಳು ಪೂಜೆಯಲ್ಲಿ ಪಾಲ್ಗೊಂಡರು.

ವಿವಿಧ ಭಕ್ಷ್ಯಗಳ ನೈವೇದ್ಯ: ಮನೆಗಳಲ್ಲಿ ಒಬ್ಬಟ್ಟು, ಚಕ್ಕುಲಿ, ಕೋಡುಬಳೆ, ಕರ್ಜಿಕಾಯಿ, ಪಾಯಸ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ತಯಾರಿಸಿ ಮಹಾಲಕ್ಷ್ಮಿಗೆ ನೈವೇದ್ಯ ಮಾಡಿದರು. ನಗ, ನಾಣ್ಯಗಳನ್ನು ಲಕ್ಷ್ಮಿಯ ಮುಂದೆ ಇಟ್ಟು ಐಶ್ವರ್ಯಕ್ಕಾಗಿ ಪ್ರಾರ್ಥಿಸಿದರು. ಸುಮಂಗಲಿಯರನ್ನು ಮನೆಗೆ ಕರೆದು, ಅರಿಸಿನ– ಕುಂಕುಮ ಕೊಟ್ಟರು. 

ಹಬ್ಬದ ಅಡುಗೆ: ಹಬ್ಬದ ಅಂಗವಾಗಿ ಮನೆಗಳಲ್ಲಿ ವಿಶೇಷ ಅಡುಗೆಯನ್ನೂ  ಸಿದ್ಧಪಡಿಸಲಾಗಿತ್ತು. ನೆಂಟರಿಷ್ಟರು, ಸ್ನೇಹಿತರನ್ನು ಆಹ್ವಾನಿಸಿ ವಿಶೇಷ ಊಟ ಬಡಿಸಿದರು. 

ದೇವಾಲಯಗಳಲ್ಲೂ ಪೂಜೆ: ಹಬ್ಬದ ಅಂಗವಾಗಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಮಹಾಲಕ್ಷ್ಮಿ ಸೇರಿದಂತೆ ದೇವಿಯರ ಸಾನಿಧ್ಯ ಇರುವ ದೇಗುಲಗಳಲ್ಲಿ ದೇವತೆಗಳ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಕುಟುಂಬ ಸಮೇತರಾಗಿ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. 

ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳಲ್ಲಿ ಸರ್ಕಾರದ ಆದೇಶದಂತೆ, ದೇವರ ದರ್ಶನಕ್ಕೆ ಬಂದ ಮಹಿಳೆಯರಿಗೆ ಅರಿಸಿನ ಕುಂಕುಮ ನೀಡಲಾಯಿತು. 

ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆಯಿಂದ ನಡೆದ ವರಮಹಾಲಕ್ಷ್ಮಿ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರಿಗೆ ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್ ಅರಿಸಿನ ಕುಂಕುಮ ಹೂ –ಬಳೆಯನ್ನು ನೀಡಿದರು. ವೇದಿಕೆ ಪದಾಧಿಕಾರಿಗಳು ಇದ್ದರು
ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆಯಿಂದ ನಡೆದ ವರಮಹಾಲಕ್ಷ್ಮಿ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರಿಗೆ ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್ ಅರಿಸಿನ ಕುಂಕುಮ ಹೂ –ಬಳೆಯನ್ನು ನೀಡಿದರು. ವೇದಿಕೆ ಪದಾಧಿಕಾರಿಗಳು ಇದ್ದರು
ಚಾಮರಾಜನಗರ ಸಮೀಪದ ಹರದನಹಳ್ಳಿಯ ದಿವ್ಯಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷಿ ಹಬ್ಬದ ಅಂಗವಾಗಿ ಬಾವಿಗೆ ಪೂಜೆ ಸಲ್ಲಿಸಲಾಯಿತು
ಚಾಮರಾಜನಗರ ಸಮೀಪದ ಹರದನಹಳ್ಳಿಯ ದಿವ್ಯಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷಿ ಹಬ್ಬದ ಅಂಗವಾಗಿ ಬಾವಿಗೆ ಪೂಜೆ ಸಲ್ಲಿಸಲಾಯಿತು

ಅರಿಸಿನ ಕುಂಕುಮ ಸೀರೆ ವಿತರಣೆ

ಚಾಮರಾಜನಗರ: ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ನಗರದ ವರಮಹಾಲಕ್ಷ್ಮಿ ಸಾಂಸ್ಕೃತಿಕ ಕ್ರೀಡಾ ಸೇವಾ ಸಂಸ್ಥೆ ವತಿಯಿಂದ ಚಾಮರಾಜೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು  ಗೃಹಿಣಿಯರಿಗೆ ಅರಿಸಿನ ಕುಂಕುಮ ಹೂವು ಬಳೆ ರವಿಕೆ ಮತ್ತು ಸೀರೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ‘ದೇವಸ್ಥಾನಗಳಿಗೆ ಭೇಟಿ ನೀಡಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಬರುವ ಭಕ್ತಾದಿಗಳಿಗೆ ಅರಿಶಿನ ಕುಂಕುಮ ನೀಡಬೇಕು ಎಂದು ಸರ್ಕಾರ ಆದೇಶಿಸಿದ್ದು ಅದರಂತೆ ಹೆಣ್ಣುಮಕ್ಕಳಿಗೆ ಅರಿಸಿನ ಕುಂಕುಮ ನೀಡಲಾಗಿದೆ’ ಎಂದರು. 

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್ ಮಾತನಾಡಿ ‘ಪೋಷಕರು ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆ ಭಾರತೀಯ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ತಿಳಿವಳಿಕೆ ನೀಡಬೇಕು. ಗುರು ಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಅವರ ಭವಿಷ್ಯ ಉಜ್ವಲವಾಗುತ್ತದೆ’ ಎಂದರು. 

ನಗರಸಭೆ ಆಯುಕ್ತ ರಾಮದಾಸ್  ಇನ್ನರ್ ವೀಲ್ ಸಂಸ್ಥೆ ಸದಸ್ಯೆ ಲಕ್ಷ್ಮಿ ಶಿವಕುಮಾರ್ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್. ಅರ್ಚಕರಾದ ರಾಮಕೃಷ್ಣ ಭಾರದ್ವಾಜ್ ದರ್ಶನ್ ಅನಿಲ್ ಕುಮಾರ್  ವೇದಿಕೆ ಅಧ್ಯಕ್ಷ ಬಂಗಾರು ಪ್ರಧಾನ ಕಾರ್ಯದರ್ಶಿ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT