ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲೆಯಾದ್ಯಂತ ಪುನೀತ್‌ ಪುಣ್ಯಸ್ಮರಣೆ; ಅನ್ನಸಂತರ್ಪಣೆ

Last Updated 9 ನವೆಂಬರ್ 2021, 5:04 IST
ಅಕ್ಷರ ಗಾತ್ರ

ಚಾಮರಾಜನಗರ: ಇತ್ತೀಚೆಗೆ ನಿಧನರಾದ ನಟ ಪುನೀತ್‌ ರಾಜ್‌ಕುಮಾರ್‌ ಅವರ 11ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮ ಸೋಮವಾರ ಜಿಲ್ಲೆಯಾದ್ಯಂತ ನಡೆಯಿತು.

ನಗರ, ಪಟ್ಟಣ, ಹೋಬಳಿ ಮಟ್ಟದಲ್ಲಿ ಜಾತಿ ಧರ್ಮ ಭೇದ ಮರೆತು, ಪುನೀತ್‌ ಅಭಿಮಾನಿಗಳು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪುನೀತ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಿ, ಅಗಲಿದ ನಟನಿಗೆ ಗೌರವ ಸಲ್ಲಿಸಿದರು.

ಗೀತಗಾಯನ:ನಗರದ ಮಾರಿಗುಡಿಮುಂಭಾಗ ಪುನೀತ್ ರಾಜ್ ಕುಮಾರ್ ಅಭಿಮಾನಿಬಳಗ ಹಾಗೂ ಈಶ್ವರಿ ಮ್ಯೂಸಿಕಲ್ ಅಂಡ್ ಸೋಷಿಯಲ್ ಟ್ರಸ್ಟ್ ವತಿಯಿಂದ ಪುನೀತ್ ರಾಜ್‌ಕುಮಾರ್‌ಗೆ ನುಡಿನಮನ ಕಾರ್ಯಕ್ರಮ ನಡೆಯಿತು.

ಪುನೀತ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರು ಬಡವರ, ದೀನದಲಿತರ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡು ಒಂದು ಕೈಲಿಮಾಡಿದ ಸಹಾಯ ಇನ್ನೊಂದು ಕೈಗೆ ಗೊತ್ತಾಗಬಾರದು ಎನ್ನುವ ಹಾಗೆ ಕೆಲಸ ಮಾಡಿದರು. ಅವರ ಸಮಾಜಮುಖಿ ಕಾರ್ಯಕ್ರಮಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಅವರ ಸ್ಮರಣೆ ಮಾಡುವ ಸಲುವಾಗಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದರು.

ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ.ದಾನೇಶ್ವರಿ ಅವರು ಮಾತನಾಡಿ, ‘ಮನುಷ್ಯ ಎಂದಾಗ ಆತನಿಗೆ ಹುಟ್ಟಿನ ಜತೆ ಸಾವು ಖಂಡಿತ, ಕನ್ನಡದ ಕುವರ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಭೌತಿಕವಾಗಿ ಅಗಲಿದ್ದರೂ, ಮಾನಸಿಕವಾಗಿ ನಮ್ಮ ನಡುವೆ ಇದ್ದಾರೆ’ ಎಂದರು.

ಈಶ್ವರಿ ಸಂಗೀತ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಸಿ.ಎಂ.ವೆಂಕಟೇಶ್ ಅವರು ಮಾತನಾಡಿ, ‘ತಮ್ಮ ಸಂಸ್ಥೆಯಿಂದ ಸಂತೇಮರಹಳ್ಳಿ, ಚಾಮರಾಜನಗರ ಮುಖ್ಯ ರಸ್ತೆಯಲ್ಲಿ ಗಿಡನೆಡುವ ಕಾರ್ಯಕ್ರಮಕ್ಕೆ ಪುನೀತ್ ರಾಜ್‌ಕುಮಾರ್ ಅವರನ್ನು ಆಹ್ವಾನಿಸುವ ಚಿಂತನೆ ನಡೆಸಿದ್ದೆವು. ಆದರೆ, ಅಷ್ಟರಲ್ಲೇ ಅವರು ನಮ್ಮನ್ನು ಅಗಲಿದ್ದಾರೆ’ ಎಂದರು.

ಇದೇ ವೇಳೆ ಕಿರುತೆರೆನಟ ಬಸವಟ್ಟಿ ಲೋಕೇಶ್ ಅವರು ಪುನೀತ್ ಗೀತೆಗಳ ಒಳಗೊಂಡ ’ದೊಡ್ಮನೆ ಅರಸು’ ಆಲ್ಬಂ ಬಿಡುಗಡೆ ಮಾಡಿದರು.

ಸಾರ್ವಜನಿಕರಿಗೆ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ಇದೇ ವೇಳೆ ಪುನೀತ್ ರಾಜ್‌ಕುಮಾರ್ ಅಭಿನಯದ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.

ನಗರಸಭೆ ಆಯುಕ್ತ ಕರಿಬಸವಯ್ಯ, ಮುಖಂಡ ಸಿ.ಎಂ.ಮಹದೇವಶೆಟ್ಟಿ, ರಾಜರತ್ನ ಅಪ್ಪು ಯುವಸೇನಾ ಸಮಿತಿ ಅಧ್ಯಕ್ಷ ಮಂಜು, ಮುಖಂಡರಾದ ಸುರೇಶ್ ನಾಯಕ್, ಡಾ.ಸುಗಂಧರಾಜ್, ಗಾಯಕರಾದ ಸಿ.ಎಂ.ನರಸಿಂಹಮೂರ್ತಿ, ಬಸವರಾಜು, ಡಾ.ರಾಜ್‌ಕುಮಾರ್ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಉಮ್ಮತ್ತೂರು ಚಂದ್ರು, ಶಾಂತಿಪ್ರಸಾದ್, ಚಾ.ಹ.ಶಿವರಾಜು, ಮನು, ಅವತಾರ್ ಡ್ಯಾನ್ಸ್ ಸಂಸ್ಥೆಯ ಪ್ರವೀಣ್ ಸೇರಿದಂತೆ ಇತರರು ಇದ್ದರು.

ಅನ್ನಸಂತರ್ಪಣೆ:ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆ ಪ್ರಯುಕ್ತ ನಗರದ ಜೋಡಿರಸ್ತೆಯಲ್ಲಿರುವ ಶ್ರೀವೆಂಕಟೇಶ್ವರ ಹಿಂದೂ ಮಿಲ್ಟ್ರಿ ಹೋಟೆಲ್‌ನಲ್ಲಿ ಡಾ.ರಾಜ್ ಕುಮಾರ್ ಸಂಬಂಧಿಕರ ವತಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಹೋಟೆಲ್ ಮಾಲೀಕರಾದ ವಿ.ಶ್ರೀನಿವಾಸ ಅವರು ಮಾತನಾಡಿ, ‘ಪುನೀತ್ ರಾಜ್‌ಕುಮಾರ್ ಅವರಲ್ಲಿ ಡಾ.ರಾಜಣ್ಣನಲ್ಲಿರುವ ಗುಣಗಳನ್ನು ಕಾಣುತ್ತಿದ್ದೆವು. ಅವರ ಅಕಾಲಿಕ ನಿಧನದಿಂದ ತುಂಬಾ ನೋವು ಉಂಟಾಗಿದೆ. ಅವರು ಇನ್ನೂ ಇರಬೇಕಿತ್ತು. ಅವರ ಹೆಚ್ಚಿನ ಸೇವೆ ರಾಜ್ಯದಲ್ಲಿ ಆಗಬೇಕಿತ್ತು. ಅಷ್ಟರಲ್ಲಿ ಭಗವಂತ ಬೇಗನೆ ಅವರನ್ನು ಕರೆದುಕೊಂಡು ಬಿಟ್ಟ. ಅವರು ಎಂದೆಂದಿಗೂ ಅಜರಾಮರ, ಜಿಲ್ಲೆಯಲ್ಲಿ ಮತ್ತೆ ಹುಟ್ಟಿ ಬರಲಿ’ ಎಂದು ಆಶಿಸಿದರು.

ಆರ್ಚಕ ಅನಂತ್ ಪ್ರಸಾದ್ ಮಾತನಾಡಿ, ‘ಕಲಾವಿದರಿಗೆ ಎಂದು ಸಾವು ಇಲ್ಲ. ಪುನೀತ್ ರಾಜ್ ಕುಮಾರ್ ಅಲ್ಪಮರಣ. ಅವರ ಸೇವಾ ಕಾರ್ಯಗಳು ಮಾದರಿಯಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದರು.

ಲಕ್ಷ್ಮೀ ಶ್ರೀನಿವಾಸ, ಬಾಲಾಜಿ, ವೆಂಕಟೇಶ್, ಅಣ್ಣಯ್ಯ, ಪಾಪಣ್ಣ, ಸಿ.ಎಸ್.ಪುಟ್ಟಪ್ಪ, ಚಿನ್ನಸ್ವಾಮಿ ಇತರರು ಇದ್ದರು.

ಪದ್ಮಭೂಷಣ ಪ್ರಶಸ್ತಿ ನೀಡಲು ಒತ್ತಾಯ

ಪುನೀತ್‌ ರಾಜ್‌ಕುಮಾರ್ ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರವಾಗಿ ಪದ್ಮವಿಭೂಷಣ ಪುರಸ್ಕಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ಸೇನಾ ಪಡೆಯ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.

‘ರಾಜ್ಯದ ಇತಿಹಾಸದಲ್ಲೇ ಕಿರಿಯ ವಯಸ್ಸಿನಲ್ಲಿಯೇ ತಮ್ಮ ಪ್ರತಿಭೆ ಮೂಲಕ ಕರ್ನಾಟಕ ಚಲನಚಿತ್ರ ರಂಗದಲ್ಲಿ ಅವಿಸ್ಮರಣೆಯ ಸಾಧನೆಯನ್ನು ಮಾಡಿರುವವರು ಪುನೀತ್ ರಾಜ್‌ಕುಮಾರ್ ಅವರು ತಮ್ಮ ಸರಳ ಸಜ್ಜನಿಕೆ ವ್ಯಕ್ತಿತ್ವದಿಂದ ಮತ್ತು ತಮ್ಮ ಸಮಾಜಮುಖಿ ಸೇವೆಯಿಂದ ಇಡೀ ಕರ್ನಾಟಕ ರಾಜ್ಯದ ಜನರ ವಿಶ್ವಾಸಗಳಿಸಿ ದೇಶದಾದ್ಯಂತ ಕೋಟ್ಯಂತರ ಅಭಿಮಾನಿಗಳ ಸಮೂಹ ಹೊಂದಿದ್ದರು. ಅವರು ತಮ್ಮ ಸಮಾಜಮುಖಿ ಸೇವೆಯಿಂದ ಇಡೀ ವಿಶ್ವಮಟ್ಟದಲ್ಲೇ ಹೆಸರು ಮಾಡಿದ್ದರು. ಸಣ್ಣ ಮಕ್ಕಳಿಂದ ಹಿಡಿದು ಯುವಕರು ವಯೋವೃದ್ಧರವರೆಗೂ ಅಭಿಮಾನವನ್ನು ಹೊಂದಿದ್ದರು. ಅವರು, ಇಡೀ ರಾಜ್ಯದಾದ್ಯಂತ ಯಾವುದೇ ಪ್ರಚಾರ ತೆಗೆದುಕೊಳ್ಳದೆ ಸಾವಿರಾರು ಮಕ್ಕಳಿಗೆ ಶಿಕ್ಷಣ, ವಯೋವೃದ್ಧರಿಗೆ ಅನಾಥ ಶ್ರಮ, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಶುಲ್ಕವನ್ನು ಕಟ್ಟಿರುತ್ತಾರೆ. ಸಾವಿರಾರು ಜನರಿಗೆ ಸಹಾಯ ಮಾಡಿ ರಾಜ್ಯದಾದ್ಯಂತ ಮನೆಮಾತಾಗಿದ್ದರು. ದೇಶದಾದ್ಯಂತ ಅಸಂಖ್ಯಾತ ಅಭಿಮಾನಿಗಳ ಸಮೂಹ ಹೊಂದಿರುವ ಮತ್ತು ಸಮಾಜಸೇವೆಗಾಗಿ ತಮ್ಮ ಜೀವನ್ನೇ ಮುಡಿಪಾಗಿಟ್ಟಿರುವ ಅವರ ಸಾರ್ಥಕ ಸೇವೆಯನ್ನು ಪರಿಗಣಿಸಿ ಕೆಂದ್ರ ಸರ್ಕಾರ ಮರಣೋತ್ತರವಾಗಿ ಪದ್ಮಭೂಷಣ ಪುರಸ್ಕಾರ ನೀಡಬೇಕು’ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.

ಸೇನಾಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ,ಗಡಿನಾಡು ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ರಾ.ಕುಮಾರ್, ಸಾಗರ್ ರಾವತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT