ಮಂಗಳವಾರ, ಜನವರಿ 19, 2021
21 °C

ಚಾಮರಾಜನಗರಕ್ಕೆ ಯಡಿಯೂರಪ್ಪ ಭೇಟಿ ನೀಡಲು ಆಗ್ರಹಿಸಿ ವಾಟಾಳ್‌ ನಾಗರಾಜ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಾಮರಾಜನಗರಕ್ಕೆ ಬರಬೇಕು. ಇಲ್ಲೇ ಸಚಿವ ಸಂಪುಟ ಸಭೆ ನಡೆಸಬೇಕು ಎಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಮುಖಂಡ ವಾಟಾಳ್‌ ನಾಗರಾಜ್‌ ಹಾಗೂ ಅವರ ಬೆಂಬಲಿಗರು ಶನಿವಾರ ಪ್ರತಿಭಟನೆ ನಡೆಸಿದರು. 

ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಅವರು,  ‘ಯಡಿಯೂರಪ್ಪ ಅವರು ಹೆಲಿಕಾಪ್ಟರ್‌ನಲ್ಲಿ ಶಿವಮೊಗ್ಗ, ಇತರ ಕಡೆಗಳಿಗೆ ಪ್ರವಾಸ ಮಾಡುತ್ತಾರೆ. ಚಾಮರಾಜನಗರಕ್ಕೆ ಭೇಟಿ ನೀಡದೆ ಅಧಿಕಾರಕ್ಕೆ ಏರುವಾಗ ಸ್ವೀಕರಿಸಿದ ಪ್ರಮಾಣ ವಚನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುತ್ತಾರೆ ಎಂದು ಅವರ ವಿರುದ್ದ ನ್ಯಾಯಾಲಯದ ಮೊರೆ ಹೋಗುವೆ’ ಎಂದರು.

‘ಕರ್ನಾಟಕದ ಅಂಚಿನಲ್ಲಿರುವ ಚಾಮರಾಜನಗರ ಜಿಲ್ಲಾ ಕೇಂದ್ರ ಯಾರಿಗೂ ಬೇಡವಾಗಿದೆ. ಜಿಲ್ಲೆ ಎಂದ ಮೇಲೆ ಅಧಿಕಾರಿಗಳು ಇಲ್ಲೇ ಇರಬೇಕು. ಪವಿತ್ರವಾದ ಚಾಮರಾಜನಗರ ಜಿಲ್ಲೆಗೆ ಯಡಿಯೂರಪ್ಪ ಬಂದಿಲ್ಲ. ಯಾವುದೋ ಗೊಡ್ಡು ಅಂಜಿಕೆಗೆ ಮಾರುಹೋಗಿ ಅವರು ಜಿಲ್ಲಾ ಕೇಂದ್ರಕ್ಕೆ ಬರದಿರುವುದು ದೊಡ್ಡ ದುರಂತ’ ಎಂದರು. ‌

ಬಸವನಾಡು ಮಾಡಿ: ‘ಚಾಮರಾಜನಗರ ರಾಜ್ಯದ ದಕ್ಷಿಣದ ಗಡಿಯಾಗಿದೆ.  ಜಿಲ್ಲೆಯನ್ನು ಅಭಿವೃದ್ಧಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಗಡಿ ಜಿಲ್ಲೆಯನ್ನು ಬಸವನಾಡು ಎಂಬ ಪ್ರತ್ಯೇಕ ರಾಜ್ಯ ಮಾಡಲಿ. ಪ್ರತ್ಯೇಕ ರಾಜ್ಯಕ್ಕೆ ನನ್ನ ಬೆಂಬಲವಿಲ್ಲ. ಆದರೆ ಸರ್ಕಾರದ ತಾರತಮ್ಯ ಧೋರಣೆಯನ್ನು ಖಂಡಿಸಿ ಈ ಮಾತು ಹೇಳಲೇಬೇಕಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಚಾಮರಾಜನಗರಕ್ಕೆ ಎರಡನೇ ಹಂತದ ಕಾವೇರಿ ನೀರು ಪೂರೈಕೆ ಯೋಜನೆ ಅನುಷ್ಠಾನಕ್ಕೆ ತರಬೇಕು. ಚಾಮರಾಜನಗರದಲ್ಲಿ ಐತಿಹಾಸಿಕ ಮೋಳೆಗಳಿವೆ. ಮನೆಗಳಿಲ್ಲದೆ ಗುಡಿಸಲಿನಲ್ಲಿ ವಾಸಮಾಡುವ ಜನರು ಹೆಚ್ಚು ಇದ್ದಾರೆ. ಅವರಿಗೆಲ್ಲ ಸರ್ಕಾರ ಮನೆಗಳನ್ನು ನೀಡಬೇಕು’ ಎಂದು ವಾಟಾಳ್‌ ನಾಗರಾಜ್‌ ಆಗ್ರಹಿಸಿದರು. 

ಗ್ರಾ.ಪಂ. ಸದಸ್ಯರ ವೇತನ ಹೆಚ್ಚಿಸಲು ಆಗ್ರಹ: ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ನೀಡುತ್ತಿರುವ ವೇತನವನ್ನು ಪರಿಷ್ಕರಿಸಬೇಕು. ಸದಸ್ಯರಿಗೆ ಕನಿಷ್ಠ ₹10 ಸಾವಿರ, ಉಪಾಧ್ಯಕ್ಷರಿಗೆ ₹15 ಸಾವಿರ, ಅಧ್ಯಕ್ಷರಿಗೆ ₹20 ಸಾವಿರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು. 

ಕಾರ್ ‌ನಾಗೇಶ್, ಚಾ.ರಂ.ಶ್ರೀನಿವಾಸಗೌಡ, ನಾಗರಾಜಮೂರ್ತಿ, ಅಜಯ್ ಸುರೇಶ್‌ನಾಗ್, ಶಿವಲಿಂಗಮೂರ್ತಿ, ಶಂಕರನಾಯಕ ಇತರರು ಭಾಗವಹಿಸಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು