ಶುಕ್ರವಾರ, ಜನವರಿ 27, 2023
26 °C
ರೈಲ್ವೆ ಕಂಬಿ ತಡೆಬೇಲಿಯಿಂದ ಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ

ಮಲೆಮಹದೇಶ್ವರ ವನ್ಯಧಾಮ: ಪಾಳು ಬಿದ್ದಿದ್ದ ಭೂಮಿಯಲ್ಲಿ ಮತ್ತೆ ಚಿಗುರಿದ ಬೆಳೆ

ಬಿ. ಬಸವರಾಜು Updated:

ಅಕ್ಷರ ಗಾತ್ರ : | |

ಹನೂರು: ವನ್ಯಪ್ರಾಣಿಗಳ ದಾಳಿಯಿಂದ ಬೇಸತ್ತು ಕೃಷಿಯಿಂದ ವಿಮುಖರಾಗಿದ್ದ ತಾಲ್ಲೂಕಿನ ಗಡಿ ಗ್ರಾಮ ಅರ್ಧನಾರಿಪುರ, ಅರೆಕಡುವಿನದೊಡ್ಡಿ ಮತ್ತು ಕಂಬಿಗುಡ್ಡೆ ಗ್ರಾಮದ ರೈತರು ಪಾಳು ಬಿದ್ದ ಭೂಮಿಯಲ್ಲಿ ಕೃಷಿ ಮಾಡಿದ್ದಾರೆ. 

ಇದಕ್ಕೆ ಮುಖ್ಯ ಕಾರಣ, ವನ್ಯಜೀವಿಗಳ ಹಾವಳಿ ಗಣನೀಯವಾಗಿ ಇಳಿಕೆಯಾಗಿರುವುದು. ಆನೆ ಸೇರಿದಂತೆ ಇತರ  ಪ್ರಾಣಿಗಳು ಜಮೀನಿಗೆ ನುಗ್ಗುವುದನ್ನು ತಡೆಯುವುದಕ್ಕಾಗಿ ಅರಣ್ಯ ಇಲಾಖೆ ನಿರ್ಮಿಸಿರುವ ರೈಲ್ವೆ ಕಂಬಿಯ ಬೇಲಿ ರೈತರ ಪಾಲಿಗೆ ವರವಾಗಿ ಪರಿಣಮಿಸಿದೆ. ಇದರಿಂದಾಗಿ ಪಾಳು ಬಿದ್ದಿದ್ದ ನೂರಾರು ಎಕರೆ ಭೂಮಿಯಲ್ಲಿ ಫಸಲು ತಲೆ ಎತ್ತಿ ನಿಂತಿದೆ.

ಮಲೆಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯ ವನ್ಯಜೀವಿ ವಲಯದ ವ್ಯಾಪ್ತಿಗೆ ಬರುವ ಈ ಮೂರೂ ಗ್ರಾಮಗಳು ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತಿವೆ.

ಬಹುತೇಕ ಗಿರಿಜನರೇ ವಾಸಿಸುವ ಇಲ್ಲಿನ ಜನರ ಮುಖ್ಯ ಕಸುಬು ಕೃಷಿ. ಆದರೆ, ಅರಣ್ಯದಂಚಿನಲ್ಲಿ ನೂರಾರು ಎಕರೆ ಕೃಷಿ ಭೂಮಿಯಲ್ಲಿ ಯಾವುದೇ ಫಸಲು ಬೆಳೆದರೂ ಅದು ವನ್ಯಪ್ರಾಣಿಗಳ ತುತ್ತಾಗುತ್ತಿತ್ತು. ಪ್ರತಿ ವರ್ಷ ಬೆಳೆದ ಫಸಲು ಕೈ ಸೇರದಿದ್ದರಿಂದ ಹತ್ತು ವರ್ಷಗಳಿಂದ ಕೃಷಿಯನ್ನೇ ಕೈಚೆಲ್ಲಿ ಕುಳಿತಿದ್ದರು. ಕೆಲವರು ತುತ್ತಿನ ಚೀಲ ತುಂಬಿಸಿಕೊಳ್ಳಲು ತಮಿಳುನಾಡಿಗೆ ಹೋದರೆ ಮತ್ತೆ ಹಲವರು ಕೂಲಿ ಕೆಲಸಕ್ಕಾಗಿ ಬೇರೆ ಬೇರೆ ಊರುಗಳಿಗೆ ಹೋಗಿದ್ದರು.

ವನ್ಯಪ್ರಾಣಿಗಳ ಹಾವಳಿ ತಡೆಯುವ ಬಗ್ಗೆ ಸ್ಥಳೀಯ ರೈತರಿಂದ ವ್ಯಾಪಕ ಒತ್ತಡ ಬಂದ ಕಾರಣದಿಂದ ಅರಣ್ಯ ಇಲಾಖೆ ಈ ಭಾಗದಲ್ಲಿ ರೈಲ್ವೆ ಕಂಬಿಗಳ ಅಳವಡಿಕೆಗೆ ಮುಂದಾಯಿತು.  ಅರ್ಧನಾರಿಪುರದಿಂದ ಕಂಬಿಗುಡ್ಡೆಯವರೆಗೆ 1.7 ಕಿ.ಮೀ ಉದ್ದ ರೈಲ್ವೆ ಕಂಬಿತ ತಡೆ ಬೇಲಿ ನಿರ್ಮಿಸಲಾಗಿದೆ. ಇದರಿಂದಾಗಿ ಫಸಲು ನಾಶದ ಪ್ರಮಾಣ ಕಡಿಮೆಯಾಗುವುದರ ಜೊತೆಗೆ ಪ್ರಾಣ ಭಯವೂ ದೂರವಾಗಿದೆ ಎಂಬುದು ಇಲ್ಲಿನ ರೈತರ ಅಭಿಪ್ರಾಯ.

 ‘ಅರಣ್ಯಕ್ಕೆ ಹೊಂದಿಕೊಂಡಂತೆ 120 ಎಕರೆ ಜಮೀನಿದೆ. ಮೂರು ವರ್ಷಗಳ ಹಿಂದೆ ತೋಟಗಾರಿಕೆ ಇಲಾಖೆಯವರು ಮಾವು, ನಿಂಬೆ, ನೇರಳೆ ಮುಂತಾದ ಬೆಳೆಗಳನ್ನು ಹಾಕಿಕೊಟ್ಟಿದ್ದರು. ಆದರೆ ಕಾಡಾನೆ ದಾಳಿಯಿಂದ ಅವೆಲ್ಲವೂ ನಾಶವಾಗಿವೆ. ಕಳೆದ ವರ್ಷ ಮನೆಯ ಹತ್ತಿರವೇ ಬಂದಿದ್ದ ಕಾಡಾನೆಗಳ ಹಿಂಡು ಸುತ್ತಮುತ್ತಲಿನಲ್ಲಿದ್ದ ಫಸಲು ಹಾಳು ಮಾಡಿತ್ತು. ಇದರಿಂದ ಕೃಷಿ ಮಾಡುವುದನ್ನೇ ಕೈ ಬಿಟ್ಟಿದ್ದೆ. ಆದರೆ ಈ ವರ್ಷ ರೈಲ್ವೆ ಕಂಬಿ ಹಾಕಿದ ಬೇಲಿ ಹಾಕಿ ನಂತರ ಮುಸುಕಿನ ಜೋಳ ಬೆಳೆದಿದ್ದೇನೆ’ ಎಂದು ಅರ್ಧನಾರಿಪುರ ಗ್ರಾಮದ ರೈತ ಕಾಟರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಅರ್ಧನಾರಿಪುರದಿಂದ ಪ್ರಾರಂಭಿಸಿರುವ ರೈಲ್ವೆ ಕಂಬಿಯ ತಡೆ ಬೇಲಿಯನ್ನು ಅರಣ್ಯಾಧಿಕಾರಿಗಳು ಇನ್ನಷ್ಟು ವಿಸ್ತರಿಸಿದರೆ ಮತ್ತಷ್ಟು ರೈತರಿಗೆ ಅನುಕೂಲವಾಗಲಿದೆ. ಈಗ ಮಾಡಿರುವ ಕಾಮಗಾರಿಯನ್ನು ಕೆಲವು ಕಡೆ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಅದನ್ನು ಪೂರ್ಣಗೊಳಿಸಿದರೆ ಒಳ್ಳೆಯದು’ ಎಂದು ಅವರು ಹೇಳಿದರು. 

ಬಿಆರ್‌ಟಿಯಿಂದ ಬರುವ ಆನೆಗಳು: ‘ಬೇಲಿ ನಿರ್ಮಾಣಕ್ಕೂ ಮುನ್ನ ಆನೆಗಳು ಜಮೀನಿಗೆ ಲಗ್ಗೆಯಿಟ್ಟು ಬಳಿಕ ಗ್ರಾಮದತ್ತ ನುಸುಳುತ್ತಿದ್ದವು. ಈ ಆನೆಗಳ ಕಾಟ ನಿಂತಿದೆ. ಆದರೆ ಬಿಆರ್‌ಟಿ ಕಡೆ ತಡೆ ಬೇಲಿ ನಿರ್ಮಿಸದಿರುವುದರಿಂದ ಅಲ್ಲಿಂದ ಬರುವ ಆನೆಗಳು ನೇರವಾಗಿ ಗ್ರಾಮದೊಳಗೆ ನುಗ್ಗುತ್ತಿವೆ’ ಎಂದು ರೈತ ಮಾದೇವ ಅವರು ಮಾಹಿತಿ ನೀಡಿದರು. 

‘ಈ ಬಾರಿ ನಮ್ಮ ವನ್ಯಜೀವಿ ವಲಯದಲ್ಲಿ 1.7 ಕಿ.ಮೀ ಉದ್ದದ ರೈಲ್ವೆ ಕಂಬಿಯ ತಡೆ ಬೇಲಿ ಅಳವಡಿಕೆಗೆ ಕಾಮಗಾರಿ ಆರಂಭಿಸಲಾಗಿದೆ. ಕೆಲಸ ಬಹುತೇಕ ಮುಕ್ತಾಯವಾಗಿದೆ. ಕಂಬಿಗುಡ್ಡೆ ಬಳಿ ರೈತರು ಜಮೀನಿನಲ್ಲಿ ಬೆಳೆ ಬೆಳೆದಿರುವುದರಿಂದ 500 ಮೀಟರ್‌ ಕಾಮಗಾರಿ ಬಾಕಿ ಉಳಿದಿದೆ. ಶೀಘ್ರದಲ್ಲಿ ಅದನ್ನು ಪೂರ್ಣಗೊಳಿಸಲಾಗುವುದು’ ಎಂದು ಪಿ.ಜಿ.ಪಾಳ್ಯ ವಲಯ ಅರಣ್ಯಾಧಿಕಾರಿ ಸಯ್ಯಾದ್ ಸಾಬ್ ನದಾಫ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವನ್ಯಪ್ರಾಣಿಗಳ ಹಾವಳಿ ಹೆಚ್ಚು ಇರುವ ಕಡೆ ರೈಲ್ವೆ ಕಂಬಿಯ ತಡೆ ಬೇಲಿ ನಿರ್ಮಿಸಲಾಗಿದೆ. ಇದನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ವಹಿಸಲಾಗುವುದು’ ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ  ವಿ. ಏಡುಕುಂಡಲು ಅವರು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು