ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ನರೇಗಾ ಕೆರೆಯ ಮಣ್ಣನ್ನು ಕೆರೆಗೇ ಚೆಲ್ಲಿ!

ಒತ್ತುವರಿಗೆ ಅವಕಾಶ ಕೊಟ್ಟಂತೆ ಆಗುತ್ತದೆ: ಸ್ಥಳೀಯ ರೈತರ ಅಸಮಾಧಾನ
Last Updated 14 ಮೇ 2020, 19:45 IST
ಅಕ್ಷರ ಗಾತ್ರ

ಚಾಮರಾಜನಗರ:‌ ಕೋವಿಡ್‌–19 ತಡೆಗೆ ಜಾರಿ ಮಾಡಲಾದ ಲಾಕ್‌ಡೌನ್‌ ಅವಧಿಯಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿಯು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುತ್ತಿದೆ. ಆದರೆ, ಕೆಲವು ಕಡೆಗಳಲ್ಲಿ ಕಾಮಗಾರಿಯ ಗುಣಮಟ್ಟದ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಲ ಸಂರಕ್ಷಣೆ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಜಿಲ್ಲೆಯಲ್ಲಿರುವ ಕೆರೆಗಳಲ್ಲಿ ಹೂಳು ತೆಗೆಯುವ ಹಾಗೂ ಮಳೆ ನೀರು ಸಂಗ್ರಹಕ್ಕೆ ಗುಂಡಿ ತೆಗೆಯುವ ಕೆಲಸ ನಡೆಯುತ್ತಿದೆ. ಆದರೆ, ಕೆಲವು ಕೆರೆಗಳಲ್ಲಿ ಅಗೆದ ಮಣ್ಣನ್ನು ಕೆರೆಯ ಅಂಗಳದಲ್ಲೇ ರಾಶಿ ಹಾಕಲಾಗುತ್ತಿದ್ದು, ಮಳೆ ಬಂದ ಸಂದರ್ಭದಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಯೋಜನಕ್ಕೆ ಬಾರದಂತೆ ಆಗುವ ಸಾಧ್ಯತೆ ಇದೆ.

ತಾಲ್ಲೂಕಿನ ಕೋಡಿಮೋಳೆಯ ಕೆರೆಯಲ್ಲಿ ಹತ್ತು ದಿನಗಳಿಂದ 200ಕ್ಕೂ ಹೆಚ್ಚು ಕಾರ್ಮಿಕರು ಹೂಳು ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸುವುದಕ್ಕಾಗಿ ನಿರ್ದಿಷ್ಟ ಅಳತೆಯ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಹೊಂಡದಿಂದ ತೆಗೆದ ಮಣ್ಣನ್ನು ಕಾರ್ಮಿಕರು ಕೆರೆಯ ಅಂಗಳದ ಬದಿಯಲ್ಲಿ ರಾಶಿ ಹಾಕುತ್ತಿದ್ದಾರೆ. ಧಾರಾಕಾರ ಮಳೆ ಬಂದರೆ ರಾಶಿ ಹಾಕಿದ ಮಣ್ಣು ಮತ್ತೆ ಕೆರೆಗೆ ಸೇರಿ, ಆ ಹೊಂಡಗಳನ್ನು ಮುಚ್ಚುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇದರಿಂದಾಗಿ ಕೈಗೊಂಡಿರುವ ಕಾಮಗಾರಿ ಅನುಕೂಲಕ್ಕೆ ಬಾರದಂತೆ ಆಗುತ್ತದೆ ಎಂಬ ಅನುಮಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಹರದನಹಳ್ಳಿ, ದೊಡ್ಡಮೋಳೆ ಗ್ರಾಮದ ಕೆರೆಗಳಲ್ಲೂ ಇದೇ ರೀತಿಯಲ್ಲೇ ಕೆಲಸ ಮಾಡುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಾರ್ಮಿಕರಿಗೆ ಮಾರ್ಗದರ್ಶನ ಮಾಡಬೇಕು. ಕೆಲಸ ಮಾಡುವ ಕಾರ್ಮಿಕರಲ್ಲೂ ಹಿರಿಯರು ಇದ್ದಾರೆ. ಅವರಿಗೂ ಇದು ಗೊತ್ತಿಲ್ಲದ ವಿಚಾರ ಏನಲ್ಲ. ಹಾಗಿದ್ದರೂ ಯಾರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲು.

‘ನರೇಗಾ ಅಡಿಯಲ್ಲಿ ಹೂಳು ತೆಗೆಯುತ್ತಿರುವುದು ಒಳ್ಳೆಯದೇ. ಆದರೆ, ಮಣ್ಣನ್ನು ಸಮೀಪದಲ್ಲೇ ರಾಶಿ ಹಾಕಿದರೆ ಏನು ಪ್ರಯೋಜನ ಆಯಿತು? ಮಳೆ ಬಂದಾಗ ಈ ಮಣ್ಣು ನೀರಿನೊಂದಿಗೆ ಕೊಚ್ಚಿಕೊಂಡು ಹೋಗಿ ಕೆರೆಗೆ ಸೇರುತ್ತದೆ. ಆಗ ಮಾಡಿದ ಕೆಲಸವೆಲ್ಲ ನೀರಿನಲ್ಲಿ ಹೋಮ ಮಾಡಿದಂತೆ ಆಗುತ್ತದೆ. ಈ ರೀತಿ ಮಾಡುವುದಕ್ಕಿಂತ ಕೆರೆಯಲ್ಲಿ ಬೆಳೆದಿರುವ ಜಾಲಿ ಗಿಡಗಳನ್ನು ಪೂರ್ಣವಾಗಿ ತೆರವುಗೊಳಿಸಿದ್ದರೆ ಸಾಕಿತ್ತು’ ಎಂದು ಕೋಡಿಮೋಳೆ ಗ್ರಾಮದ ರೈತ ನಾಗೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದೇ ರೀತಿ ಕೆಲಸ ಮಾಡಿದರೆ ಯಾವ ಲಾಭವೂ ಇಲ್ಲ. ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಮಣ್ಣನ್ನು ಕೆರೆ ದಂಡೆಯ ಮೇಲೆ ಹಾಕುವುದಕ್ಕೆ ಕ್ರಮ ಕೈಗೊಳ್ಳಬೇಕು ಅಥವಾ ಆ ಮಣ್ಣನ್ನು ಬಳಸಿಕೊಳ್ಳಲು ರೈತರಿಗೆ ಅವಕಾಶ ಕೊಡಬೇಕು’ ಎಂದು ಕೋಡಿಮೋಳೆಯ ಮಾಗೇಶ್‌ ಒತ್ತಾಯಿಸಿದರು.

ಒತ್ತುವರಿಗೆ ಅವಕಾಶ: ಜಿಲ್ಲೆಯ ಹಲವು ಕೆರೆಗಳು ಈಗಾಗಲೇ ಒತ್ತುವರಿಯಾಗಿವೆ. ತೆಗೆದಿರುವ ಮಣ್ಣನ್ನು ಕೆರೆಯ ದಂಡೆಗೆ ಹೊಂದಿಕೊಂಡಂತೆ ಕೆರೆ ಅಂಗಳದಲ್ಲೇ ರಾಶಿ ಹಾಕಿದರೆ, ಒತ್ತುವರಿ ಮಾಡಿಕೊಳ್ಳುವವರಿಗೆ ಮತ್ತಷ್ಟು ಅವಕಾಶ ನೀಡಿದಂತಾಗುತ್ತದೆ ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಈ ವಾದಕ್ಕೆ ಪೂರಕವೆಂಬಂತೆ ಕೋಡಿಮೋಳೆ ಕೆರೆಯ ಇನ್ನೊಂದು ಬದಿಯಲ್ಲಿರುವ ರಸ್ತೆಯಿಂದ ಎರಡು– ಮೂರು ಮೀಟರ್‌ ಒಳಕ್ಕೆ (ಕೆರೆಯ ಬದಿಗೆ) ಹೂಳಿನ ಮಣ್ಣನ್ನು ರಾಶಿ ಹಾಕಲಾಗುತ್ತಿದೆ.

ರೈತರಿಗೆ ತೆಗೆದುಕೊಳ್ಳಲು ಅವಕಾಶ: ಸಿಇಒ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೋಯರ್‌ ನಾರಾಯಣರಾವ್‌, ‘ಇದು ಗಮನಕ್ಕೆ ಬಂದಿಲ್ಲ, ಪರಿಶೀಲಿಸುತ್ತೇನೆ. ಒಂದು ವೇಳೆ ಹೂಳಿನ ರಾಶಿ ಕೆರೆಯ ಅಂಗಳದಲ್ಲೇ ಇದ್ದರೆ, ಅದನ್ನು ತೆರವುಗೊಳಿಸಲು ಪಿಡಿಒಗೆ ಸೂಚಿಸಲಾಗುವುದು. ಈ ಮಣ್ಣು ಫಲವತ್ತಾಗಿದ್ದು, ರೈತರಿಗೆ ಕೃಷಿ ಉದ್ದೇಶಕ್ಕೆ ಬಳಸಲೂ ಅವಕಾಶ ನೀಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT