ಗುಂಡ್ಲುಪೇಟೆ: ವಿಘ್ನ ನಿವಾರಕ ಗಣಪತಿ ಹಬ್ಬದ ಆಚರಣೆಗೆ ಇನ್ನೊಂದು ದಿನ ಬಾಕಿ ಇರುವಂತೆಯೇ ಪರಿಸರಕ್ಕೆ ಮಾರಕವಾದ ಪಿಒಪಿ ಗಣೇಶನ ವಿಗ್ರಹಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ರಾಜಾರೋಷವಾಗಿ ಪಿಒಪಿ ಮೂರ್ತಿಗಳನ್ನು ತರಲಾಗುತ್ತಿದ್ದು ಮಾರಾಟವೂ ನಡೆಯುತ್ತಿದೆ. ಆದರೆ, ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಪರಿಸರ ಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರಿಸರಕ್ಕೆ ಹಾನಿಕಾರಕ ಎಂಬ ಉದ್ದೇಶದಿಂದ ಜಿಲ್ಲಾಡಳಿತ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟಕ್ಕೆ ನಿಷೇಧ ಹೇರಿದ್ದರೂ ಪಟ್ಟಣದ ಹಲವೆಡೆ ಪಿಒಪಿ ಮೂರ್ತಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು, ಮಾರಾಟ ಮಾಡಲಾಗುತ್ತಿದೆ. ಹಗಲು ಹೊತ್ತಿನಲ್ಲೇ ಪಿಒಪಿ ಗಣಪತಿ ಮೂರ್ತಿಗಳನ್ನು ಸಾಗಿಸುತ್ತಿದ್ದರೂ ಪೊಲೀಸ್ ಇಲಾಖೆ, ಪುರಸಭೆ, ತಾಲ್ಲೂಕು ಆಡಳಿತದ ಕಣ್ಣಿಗೆ ಬೀಳದಿರುವುದು ವಿಪರ್ಯಾಸ ಎಂದು ದೂರುತ್ತಿದ್ದಾರೆ.
ಗಣೇಶನ ಮೂರ್ತಿ ಮಾರಾಟ ಮಾಡುವ ಕೆಲವು ವ್ಯಾಪಾರಿಗಳು ಲಾಭದಾಸೆಗೆ ಜಿಲ್ಲಾಡಳಿತದ ನಿಯಮಗಳನ್ನು ಗಾಳಿಗೆ ತೂರಿ ಪಟ್ಟಣದ ಹೊರವಲಯದಲ್ಲಿ ಪಿಒಪಿ ಗಣೇಶನ ವಿಗ್ರಹಗಳನ್ನು ತಯಾರು ಮಾಡುತ್ತಿದ್ದಾರೆ. ಪುರಸಭೆ ಹಾಗೂ ತಾಲ್ಲೂಕು ಕಚೇರಿ ಪಕ್ಕದಲ್ಲಿಯೇ ಪಿಒಪಿ ವಿಗ್ರಹಗಳು ಮಾರಾಟವಾಗುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳೂ ಅಕ್ರಮದ ಜೊತೆಗೆ ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ಸಾರ್ವನಿಕರಲ್ಲಿ ಮೂಡುತ್ತಿದೆ.
‘ಪಟ್ಟಣದ ಹೊರವಲಯ ಹಾಗೂ ಜನ ಸಂಚಾರ ಕಡಿಮೆ ಇರುವ ಜಾಗಗಳಲ್ಲಿ ಪಿಒಪಿ ಮೂರ್ತಿಗಳನ್ನು ತಯಾರಿಸಿ ಇರಿಸಲಾಗಿದೆ. ಪಿಒಪಿ ಮೂರ್ತಿಗಳ ಬಗ್ಗೆ ಎಲ್ಲರಿಗೂ ತಿಳಿಯಬಾರದು ಎಂದು ಪ್ಲಾಸ್ಟಿಕ್ ಹೂದಿಕೆ ಹೂದಿಸಲಾಗಿದೆ. ತಾಲ್ಲೂಕು ಆಡಳಿತ ಪರಿಶೀಲನೆ ನಡೆಸಿ ಪಿಒಪಿ ಮೂರ್ತಿಗಳ ಮಾರಾಟ, ತಯಾರಿಕೆಗೆ ತಡೆಯೊಡ್ಡಬೇಕು, ಮಣ್ಣಿನ ಮೂರ್ತಿಗಳ ತಯಾರಿಕೆಗೆ ಹಾಗೂ ಮಾರಾಟಕ್ಕೆ ಪ್ರೋತ್ಸಾಹಿಸಬೇಕು ಎನ್ನುತ್ತಾರೆ’ ಪರಿಸರ ಪ್ರೇಮಿ ಶ್ರೀಕಂಠ.
ಸಾರ್ವಜನಿಕರು ಮನೆಗಳಲ್ಲಿ ಪ್ರತಿಷ್ಠಾಪಿಸುವ ಮೂರ್ತಿಗಳು ಹೆಚ್ಚಾಗಿ ಮಣ್ಣಿನಿಂದ ತಯಾರಿಸಿದ್ದಾಗಿದೆ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪಿಸುವವರು ಪಿಒಪಿ ಮೂರ್ತಿಗಳತ್ತ ಆಕರ್ಷಿತರಾಗುತ್ತಿದ್ದಾರೆ. ಕೆಲವು ವ್ಯಾಪಾರಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಪಿಒಪಿ ಮೂರ್ತಿಗಳನ್ನು ತರಿಸಿ ಮಾರಾಟಕ್ಕೆ ಇರಿಸುತ್ತಿದ್ದಾರೆ.
ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಕಡೆಗಳಲ್ಲಿ ಸಾರ್ವಜನಿಕ ಗಣಪತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದ್ದು ಅಧಿಕಾರಿಗಳು ಪರಿಶೀಲಿಸಬೇಕು. ಪಿಒಪಿ ಬದಲಾಗಿ ಮಣ್ಣಿನ ಗಣಪತಿ ಪ್ರತಿಷ್ಠಾಪಿಸುವಂತೆ ಆಯೋಜಕರಿಗೆ ತಿಳಿಹೇಳಬೇಕು ಎನ್ನುವುದು ಪರಿಸರವಾದಿಗಳ ಒತ್ತಾಯವಾಗಿದೆ.
ಪಟ್ಟಣದಲ್ಲಿ ಎಲ್ಲೂ ಪಿಒಪಿ ಗಣಪತಿ ಮೂರ್ತಿಗಳ ಮಾರಾಟ ಕಂಡು ಬಂದಿಲ್ಲ. ಪಿಒಪಿ ಮೂರ್ತಿಗಳ ಪತ್ತೆಗೆ ಪರಿಶೀಲನೆಗೆ ತಂಡ ರಚನೆ ಮಾಡಲಾಗಿದೆ.–ವಸಂತ ಕುಮಾರಿ, ಪುರಸಭೆ ಮುಖ್ಯಾಧಿಕಾರಿ
ಪಿಒಪಿ ಮೂರ್ತಿಗಳನ್ನು ಕೆರೆಗಳಿಗೆ ವಿಸರ್ಜನೆ ಮಾಡಿದರೆ ನೀರು ವಿಷವಾಗಿ ಮೀನು ಸೇರಿದಂತೆ ಜಲಜರಗಳಿಗೆ ಕಂಟಕವಾಗುತ್ತದೆ. ಜಾನುವಾರು ಸೇವಿಸಿದರೆ ಅನಾರೋಗ್ಯ ಕಾಡಲಿದೆ. ಅಧಿಕಾರಿಗಳು ಕ್ರಮ ಜರುಗಿಸಬೇಕು.–ಶ್ರೀಕಂಠ, ಪರಿಸರ ಪ್ರೇಮಿ
ಪಿಒಪಿ ಗಣೇಶ ಮಾರಾಟ ಮಾಡುವುದು ಕಂಡುಬಂದರೆ ಪುರಸಭೆಯೊಂದಿಗೆ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಳ್ಳಲಾಗುವುದು.–ರಮೇಶ್ ಬಾಬು, ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.