ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಅರಣ್ಯದಲ್ಲಿ ಹೆಚ್ಚಿದ ರಣಹದ್ದುಗಳ ಸಂತತಿ

ಅಪರೂಪದ ಕೆಂಪು ತಲೆ ರಣಹದ್ದು ಗೋಚರ, ಬಿಆರ್‌ಟಿ, ಕಾವೇರಿ ಮಲೆ ಮಹದೇಶ್ವರ ವನ್
Last Updated 18 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಹನೂರು: ಅಳಿವಿನಂಚಿನಲ್ಲಿರುವ ಪಕ್ಷಿ ಎಂದು ಗುರುತಿಸಲಾಗಿರುವ ಕೆಂಪು ತಲೆ ರಣಹದ್ದು ಮಲೆಮಹದೇಶ್ವರ ವನ್ಯಧಾಮ ಹಾಗೂ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳತೊಡಗಿವೆ.

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಕೊಳ್ಳೇಗಾಲ ವನ್ಯಜೀವಿ ವಲಯದಲ್ಲಿ ಈಚೆಗೆ ಕೆಂಪು ತಲೆಯ ರಣಹದ್ದು ಹಾಗೂ ಮಲೆಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯ ವನ್ಯಜೀವಿ ವಲಯದಲ್ಲಿ ಈಚೆಗೆ ಅಳವಡಿಸಿದ್ದ ಕ್ಯಾಮೆರಾದಲ್ಲಿ ಐದಾರು ರಣಹದ್ದುಗಳ ಹಿಂಡೊಂದು ಮೃತ ಜಿಂಕೆಯನ್ನು ತಿನ್ನುತ್ತಿರುವ ಚಿತ್ರವೊಂದು ಸೆರೆಯಾಗಿದೆ. ಹಿಂದೆಯೂ ಕಾವೇರಿ ಹಾಗೂ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲೂ ರಣ ಹದ್ದುಗಳ ಕಾಣಿಸಿಕೊಂಡಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಇವು ಕ್ಯಾಮೆರಾಗಳಿಗೆ ಸೆರೆಯಾಗುತ್ತಿವೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

ಜಿಲ್ಲೆಯ ಅರಣ್ಯದಲ್ಲಿ ಕೆಂಪು ತಲೆಯ ರಣಹದ್ದು ಮಾತ್ರವಲ್ಲದೆ, ಈಜಿಪ್ಟಿಯನ್‌ ರಣಹದ್ದು, ವೈಟ್‌ ರಂಪ್ಡ್‌ ರಣಹದ್ದು (ಕುತ್ತಿಗೆಯ ನಂತರ ಬಿಳಿ ಬಣ್ಣ ಹೊಂದಿರುತ್ತದೆ) ಮತ್ತು ಭಾರತೀಯ ರಣಹದ್ದುಗಳು ಕಂಡು ಬಂದಿವೆ. ಈ ನಾಲ್ಕೂ ರಣಹದ್ದುಗಳು ಅಳಿವಿನಂಚಿನಲ್ಲಿದೆ. ಅದರಲ್ಲೂ ಕೆಂಪು ತಲೆಯ ರಣಹದ್ದುಗಳ ಸಂಖ್ಯೆ ತುಂಬಾ ಕಡಿಮೆ ಇವೆ.

ಹಿಂದೆ ಗ್ರಾಮೀಣ ಭಾಗದಲ್ಲಿ ಡೈಕ್ಲೋಫಿನಕ್ ಚುಚ್ಚುಮದ್ದು ಪಡೆದ ಜಾನುವಾರುಗಳು ಮೃತಪಟ್ಟರೆ ಅವುಗಳನ್ನು ಪ್ರಾಣಿ ಪಕ್ಷಿಗಳಿಗಾಗಿ ಹಾಗೇ ಬಿಡಲಾಗುತ್ತಿತ್ತು. ಅವುಗಳನ್ನು ತಿನ್ನುತ್ತಿದ್ದ ರಣಹದ್ದುಗಳು ಮೂತ್ರಪಿಂಡ ಸಮಸ್ಯೆಯಿಂದಾಗಿ ಅಸುನೀಗುತ್ತಿದ್ದವು. ಆದರೆ, 2005 ರಿಂದ ಪಶುಸಂಗೋಪನಾ ಇಲಾಖೆಯು ಜಾನುವಾರುಗಳಿಗೆ ಡೈಕ್ಲೊಫಿನಕ್ ಚುಚ್ಚುಮದ್ದು ನೀಡುವುದನ್ನು ನಿಷೇಧಿಸಿದೆ. ಹೀಗಾಗಿ,ವಿನಾಶದ ಅಂಚಿನಲ್ಲಿದ್ದ ರಣಹದ್ದುಗಳ ಸಂತತಿ ಇತ್ತೀಚಿನ ದಿನಗಳಲ್ಲಿ ಕೊಂಚ ಚೇತರಿಕೆ ಕಂಡಿವೆ ಎನ್ನುತ್ತಾರೆ ವನ್ಯಜೀವಿ ತಜ್ಞರು.

‘ಮಲೆಮಹದೇಶ್ವರ ವನ್ಯಧಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಣಹದ್ದುಗಳು ಕಾಣಿಸಿಕೊಂಡಿರುವುದು ಸಂತಸದ ವಿಷಯ. ಕ್ಯಾಮೆರಾ ಟ್ರ್ಯಾಪ್ನಲ್ಲಿ ಒಂದೇ ಚಿತ್ರದಲ್ಲಿ ಐದಾರು ರಣಹದ್ದುಗಳು ಕಾಣಿಸಿಕೊಂಡಿವೆ. ಮುಂದಿನ ದಿನಗಳಲ್ಲಿ ವನ್ಯಪ್ರಾಣಿಗಳು ಸತ್ತರೆ ಅವುಗಳ ಮರಣೋತ್ತರ ಪರೀಕ್ಷೆ ನಡೆಸಿ ಅದರಲ್ಲಿ ವಿಷ ಇಲ್ಲ ಎಂದು ಗೊತ್ತಾದರೆ ಅವುಗಳನ್ನು ಸುಡದೇ ಹಾಗೇ ಬಿಡುತ್ತೇವೆ. ಇದು ರಣಹದ್ದುಗಳಿಗೆ ಆಹಾರವಾಗುತ್ತದೆ. ಇದರಿಂದ ಅವುಗಳ ಸಂತತಿಯೂ ಹೆಚ್ಚಾಗಲಿದೆ’ ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕುಂಡಲು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

-----

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ರಣಹದ್ದುಗಳು ಕಾಣಿಸಿಕೊಂಡಿವೆ. 4 ವಿಧದ ರಣಹದ್ದುಗಳು ಬಿಆರ್‌ಟಿ, ಕಾವೇರಿ, ಮಲೆಮಹದೇಶ್ವರ ವನ್ಯಧಾಮಗಳಲ್ಲಿ ಕಾಣಿಸಿಕೊಂಡಿವೆ
ಮನೋಜ್ಕುಮಾರ್, ಸಿಸಿಎಫ್, ಚಾಮರಾಜನಗರ

--------

ವನ್ಯಧಾಮದಲ್ಲಿ ಕೆಂಪು ತಲೆ ರಣಹದ್ದು ಸೇರಿ ಒಟ್ಟು ಮೂರು ವಿವಿಧ ರಣಹದ್ದುಗಳು ಕಂಡು ಬಂದಿವೆ. ಅವುಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದೆ

ವಿ. ಏಡುಕುಂಡಲು, ಡಿಸಿಎಫ್, ಮಲೆಮಹದೇಶ್ವರ ವನ್ಯಧಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT