ಸೋಮವಾರ, ಸೆಪ್ಟೆಂಬರ್ 26, 2022
20 °C
ಚಾಮರಾಜನಗರ: ಮಳೆಗಾಲದಲ್ಲಿ ಮನೆಗೆ ನುಗ್ಗುವ ನೀರು, ನಿವಾಸಿಗಳ ಪರದಾಟ

ಚಾಮರಾಜನಗರ | 13ನೇ ವಾರ್ಡ್‌: ಚರಂಡಿಯದ್ದೇ ಸಮಸ್ಯೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಇಲ್ಲಿನ ನಗರಸಭೆ ವ್ಯಾಪ್ತಿಯ 13ನೇ  ವಾರ್ಡ್‌ನ ನಿವಾಸಿಗಳು ಜೋರಾಗಿ ಮಳೆ ಸುರಿದಾಗ ಪ್ರತಿ ಬಾರಿಯೂ ತೊಂದರೆ ಅನುಭವಿಸುತ್ತಾರೆ. ಅದಕ್ಕೆ ಕಾರಣ ಚರಂಡಿ. 

ಸಾಮಾನ್ಯವಾಗಿ ಕಸಕಡ್ಡಿಗಳು ತುಂಬಿ ಕಟ್ಟಿಕೊಂಡಿರುವ ಚರಂಡಿ ಸ್ವಚ್ಛವಾಗಲೂ ಇಲ್ಲಿ ಮಳೆಯೇ ಬರಬೇಕು. ನಿರಂತರ ಮಳೆ ಸುರಿದು ಕಸಗಳೆಲ್ಲ ಕೊಚ್ಚಿಕೊಂಡು ಹೋದ ನಂತರ ಚರಂಡಿಗಳು ತಕ್ಕ ಮಟ್ಟಿಗೆ ಸ್ವಚ್ಛವಾಗುತ್ತವೆ. ವಾರ್ಡ್‌ಗೆ ‘ಪ್ರಜಾವಾಣಿ’ ಭೇಟಿ ನೀಡಿದ ಸಂದರ್ಭದಲ್ಲೂ ಬಹುತೇಕ ಚರಂಡಿಗಳು ಸ್ವಚ್ಛವಾಗಿ ಇದ್ದಂತೆ ಕಂಡಿತು. ಕಳೆದ ವಾರ ಸುರಿದ ನಿರಂತರ ಮಳೆ ಇದಕ್ಕೆ ಕಾರಣ ಎಂದು ಹೇಳುತ್ತಾರೆ ಇಲ್ಲಿನ ನಿವಾಸಿಗಳು. 

13ನೇ ವಾರ್ಡ್‌ಗೆ ನಗರದ ಅಂಬೇಡ್ಕರ್‌ ಬಡಾವಣೆ ಬರುತ್ತದೆ. ಬಡಾವಣೆಯ ಇನ್ನರ್ಧ ಭಾಗ 14ನೇ ವಾರ್ಡ್‌ಗೆ ಸೇರುತ್ತದೆ. ಹಾಗಾಗಿ, ಇಲ್ಲಿ ಎರಡು ವಾರ್ಡ್‌ಗಳು ಗುರುತಿಸುವುದು ತ್ರಾಸ ದಾಯಕ. ಸುಲಭದಲ್ಲಿ ಗುರುತಿಸುವುದಕ್ಕೆ ಪೂರಕವಾದ ಫಲಕಗಳು ಎಲ್ಲೂ ಇಲ್ಲ. 

ಪರಿಶಿಷ್ಟ ಜಾತಿ ಹಾಗೂ ಮುಸ್ಲಿಮರು ಇಲ್ಲಿ ವಾಸವಿದ್ದಾರೆ. ಪರಿಶಿಷ್ಟರಿಗೆ ಸೇರಿದ 1200 ಮನೆಗಳು, ಮುಸ್ಲಿಂ ಸಮುದಾಯದವರ 300 ಮನೆಗಳಿವೆ. ಬಹುತೇಕರು ಬಡವರು. ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುವವರು. 

ಪುಟ್ಟ ಪುಟ್ಟ ಹೆಂಚಿನ ಮನೆಗಳಲ್ಲಿ ವಾಸ ಮಾಡುವವರೇ ಹೆಚ್ಚಿದ್ದಾರೆ. ಈಗೀಗ ಕಾಂಕ್ರೀಟ್‌ ಮನೆಗಳು ತಲೆ ಎತ್ತುತ್ತಿವೆ.

ವಾರ್ಡ್‌ನಲ್ಲಿ ಇರುವ ಸಮಸ್ಯೆ ಏನು ಎಂದು ನಿವಾಸಿಗಳನ್ನು ಕೇಳಿದರೆ ಅವರು ಚರಂಡಿಯನ್ನು ತೋರಿಸುತ್ತಾರೆ.

ವಾರ್ಡ್‌ನ ರಸ್ತೆಗಳು ಕಿರಿದಾಗಿದ್ದರೂ, ಕಾಂಕ್ರೀಟ್‌ ಹಾಕಲಾಗಿದೆ. ಜನ ವಸತಿ ಪ್ರದೇಶದ ಆಗಿರುವುದರಿಂದ ರಸ್ತೆಯಲ್ಲಿ ಅಲ್ಲಲ್ಲಿ ಉಬ್ಬುಗಳಿವೆ. ಹಾಗಾಗಿ ಸಂಚರಿಸಲು  ಕಾವೇರಿ ನೀರು ಸಮರ್ಪಕವಾಗಿ ಬಾರದೇ ಇದ್ದರೂ, ಕೊಳವೆ ಬಾವಿ ಮೂಲಕ ಮನೆಗಳಿಗೆ ನೀರು ಬರುತ್ತದೆ. ತೊಂಬೆ ಸೌಕರ್ಯವೂ ಇದೆ. 

ಚರಂಡಿಗಳೂ ಇವೆ. ಆದರೆ ಸಮರ್ಪಕವಾಗಿಲ್ಲ. ಬಹುತೇಕ ಎಲ್ಲ ಕಡೆ ಚಿಕ್ಕ ಚರಂಡಿಗಳು ಹೆಚ್ಚು ಆಳ ಇಲ್ಲ. ಬೇಸಿಗೆಯಲ್ಲಿ ಕಸ, ಹೂಳು ಕಟ್ಟಿಕೊಂಡಿರುತ್ತವೆ. ಚರಂಡಿ ಸ್ವಚ್ಛಗೊಳಿಸುವ ಕೆಲಸ ಸರಿಯಾಗಿ ನಡೆಯುತ್ತಿಲ್ಲ. ಮಳೆಗಾಲದಲ್ಲಿ ಚರಂಡಿ ತುಂಬಿ ನೀರು ಉಕ್ಕುತ್ತದೆ. ರಸ್ತೆಯಲ್ಲಿ ಸಂಚರಿಸುವುದಕ್ಕೆ ಆಗುವುದಿಲ್ಲ. ಮನೆಯ ಒಳಗೂ ನುಗ್ಗುತ್ತದೆ. ತಗ್ಗು ಪ್ರದೇಶದಲ್ಲಿರುವ ಬಹುತೇಕ ಎಲ್ಲ ಮನೆಗಳ ನಿವಾಸಿಗಳಿಗೆ ಮಳೆಗಾಲದಲ್ಲಿ ನೀರು ಒಳಗೆ ಬಾರದಂತೆ ತಡೆಯುವುದೇ ಕೆಲಸ.

‘ನಿಯಮಿತವಾಗಿ ಸ್ವಚ್ಛಗೊಳಿಸಿ’ 

‘ವಾರ್ಡ್‌ನ ರಸ್ತೆ ಚೆನ್ನಾಗಿದೆ. ನೀರು ಬರುತ್ತಿದೆ. ಕಸ ಸಂಗ್ರಹ ಮಾಡುವುದಕ್ಕೂ ದಿನ ಬಿಟ್ಟು ದಿನ ಸಿಬ್ಬಂದಿ ಬರುತ್ತಾರೆ. ಆದರೆ, ನಗರಸಭೆ ನಿಯಮಿತವಾಗಿ ಚರಂಡಿ ಸ್ವಚ್ಛಗೊಳಿಸುವುದಿಲ್ಲ. ಮಳೆಗಾಲದಲ್ಲಿ ನಾವು ತುಂಬಾ ತೊಂದರೆ ಅನುಭವಿಸುತ್ತೇವೆ’ ಎಂದು ನಿವಾಸಿ ಮಹೇಶ್‌ ಅವರು ಹೇಳಿದರು. 

ನಮ್ಮ ವಾರ್ಡ್‌ ಮಾತ್ರ ಅಲ್ಲ. ಸುತ್ತಮುತ್ತಲಿನ ಇತರ ವಾರ್ಡ್‌ಗಳಲ್ಲೂ ಇದೇ ಸಮಸ್ಯೆ. ಸಿಬ್ಬಂದಿ ಸಮರ್ಪಕವಾಗಿ ಸ್ವಚ್ಛ ಮಾಡುವುದಿಲ್ಲ. ಮಳೆಗಾಲದಲ್ಲೇ ಚರಂಡಿ ಸ್ವಲ್ಪ ಸ್ವಚ್ಛವಾಗಿ ಕಾಣುತ್ತದೆ. ಕಳೆದ ವಾರ ನಿರಂತರವಾಗಿ ಮಳೆ ಬಂದಿರುವುದಕ್ಕೆ ಚರಂಡಿಗಳು ಸ್ವಚ್ಛವಾಗುವಂತೆ ಕಾಣುತ್ತದೆ’ ಎಂದು ನಿವಾಸಿ ಅಮಿನ್‌ ಹೇಳಿದರು. 

---

ವಾರ್ಡ್‌ನಲ್ಲಿ ಚರಂಡಿಗಳು ಕಿರಿದಾಗಿರುವುದು ನಿಜ. ಸ್ವಚ್ಛತೆ ಮಾಡಲಾಗುತ್ತಿದೆ. ಹೊಸ ಚರಂಡಿ ಆಗಬೇಕಿದೆ. ನಗರೋತ್ಥಾನದ ಅಡಿ ಕಾಮಗಾರಿ ನಡೆಸಲಾಗುವುದು

-ಕಲಾವತಿ, 13ನೇ ವಾರ್ಡ್‌ ಸದಸ್ಯೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು