ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಚರಂಡಿಯಲ್ಲಿ ಕುಡಿಯುವ ನೀರಿನ ಪೈಪ್‌!

ಕೊಳ್ಳೇಗಾಲ: 31ನೇ ವಾರ್ಡ್‌ನಲ್ಲಿ ಹಲವು ಸಮಸ್ಯೆ, ರಸ್ತೆ, ಚರಂಡಿ ವ್ಯವಸ್ಥೆಗೆ ಆಗ್ರಹ
Last Updated 5 ಮೇ 2022, 19:30 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಗರದ 31ನೇ ವಾರ್ಡ್‍ನ ನಿವಾಸಿಗಳು ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ನಗರಸಭೆ ಅಧ್ಯಕ್ಷೆ ಸುಶೀಲಾ ಅವರು ಪ್ರತಿನಿಧಿಸುವ ವಾರ್ಡ್‌ ಇದು.ಈ ವಾರ್ಡ್‌ನಲ್ಲಿ ಎರಡು ದೊಡ್ಡ ಬಡಾವಣೆಗಳು 1000ಕ್ಕೂ ಹೆಚ್ಚು ಕುಟುಂಬಗಳಿದ್ದು, 3000ಕ್ಕೂ ಹೆಚ್ಚು ಜನಸಂಖ್ಯೆ ಇದೆ. ನಾಯಕ ಜನಾಂಗ ಹಾಗೂ ಕುರುಬ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಕೂಲಿ ಹಾಗೂ ವ್ಯವಸಾಯ ಮಾಡುವವರೇ ಹೆಚ್ಚು.

ಚರಂಡಿ ಒಳಗೆ ನೀರಿನ ಪೈಪ್‌:ನಾಯಕರ ಬಡಾವಣೆಯಲ್ಲಿ ಆಗಾಗ ನೀರಿನ ಸಮಸ್ಯೆ ಕಂಡು ಬರುತ್ತದೆ. ಕುಡಿಯುವ ನೀರಿನ ಪೈಪ್‌ ಚರಂಡಿಯಲ್ಲೇ ಹಾದು ಹೋಗಿದೆ. ಈ ಪೈಪ್ ಮೇಲೆ ಕೊಳಚೆ ನೀರು ನಿತ್ಯವೂ ಹೋಗುತ್ತದೆ. ಪೈಪು ಒಡೆದ ಸಂದರ್ಭದಲ್ಲಿ ಶುದ್ಧ ನೀರು ಹಾಗೂ ಕೊಳಚೆ ನೀರು ಬೆರೆಯುವುದು ಇಲ್ಲಿ ಸಾಮಾನ್ಯ.

‘ಈ ಸಮಸ್ಯೆ ನಮ್ಮಲ್ಲಿ ತಪ್ಪಿದ್ದಲ್ಲ. ಪೈಪ್‌ ಒಡೆದ ಸಂದರ್ಭದಲ್ಲಿ ಕುಡಿಯುವ ನೀರಿಗೆ ಬಾರಿ ಸಮಸ್ಯೆ ಉಂಟಾಗುತ್ತದೆ. ದುರಸ್ತಿ ಮಾಡುವವರೆಗೂ ನೀರು ಬರುವುದಿಲ್ಲ. ವಾರ್ಡ್‌ ಅಧ್ಯಕ್ಷರ ಮನೆಯ ಮುಂದೆಯೇ ಈ ಸಮಸ್ಯೆ ಇದೆ. ಆದರೂ ಈ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ’ ಎಂಬುದು ನಿವಾಸಿಗಳು ಆರೋಪಿಸಿದರು.

ರಸ್ತೆ ಅಧ್ವಾನ: ಅಧ್ಯಕ್ಷೆ ಸುಶೀಲಾ ಅವರಿರುವ ಬಡಾವಣೆಯಲ್ಲೇ ಸಮಸ್ಯೆಗಳ ಸರಮಾಲೆ ಜೋರಾಗಿದೆ. ರಸ್ತೆ ಮೊದಲು ಇತ್ತು. ಈಗ ಸಂಪೂರ್ಣ ಹಾಳಾಗಿದೆ. ಬಡಾವಣೆಯ ಮುಖ್ಯ ರಸ್ತೆಯೇ ಹಾಳಾಗಿದೆ. ಮಳೆ ಬಂದರೆ ರಸ್ತೆ ಕೆಸರು ಗದ್ದೆಯಾಗುತ್ತದೆ. ವಾಹನ ಸವಾರರು ಈ ರಸ್ತೆಯಲ್ಲಿ ಬಿದ್ದು ಏಳುವುದು ಸಾಮಾನ್ಯ. ಮಳೆಯಲ್ಲಿ ವಾಹನಗಳು ಓಡಾಡಿದರೆ ಕೆಸರು ಅಕ್ಕಪಕ್ಕದ ಮನೆಯ ಗೋಡೆಗಳಿಗೆ ಎರಚುತ್ತದೆ.

‘ಬಡಾವಣೆಯ ಎಲ್ಲ ಚರಂಡಿಗಳು ಹಳೆಯದಾಗಿದ್ದು ಕುಸಿದು ಬಿದ್ದಿವೆ ಮತ್ತು ಕೊಳಚೆ ನೀರು ಸರಿಯಾಗಿ ಹೋಗುತ್ತಿಲ್ಲ. ಕಸಗಳನ್ನು ಬಡಾವಣೆಯವರು ಮನೆಯ ಮುಂದೆಯೇ ಹಾಕುತ್ತಾರೆ. ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದೆ. ರಸ್ತೆಯಲ್ಲಿ ಕಸದ ರಾಶಿಗಳು ಹಾಗೆ ಬಿದ್ದಿರುವ ನಿದರ್ಶನಗಳು ನಾವು ನೋಡಬಹುದಾಗಿದೆ. ಇನ್ನಾದರೂ ಈ ಬಡಾವಣೆಯನ್ನು ಅಭಿವೃದ್ದಿ ಪಡಿಸಬೇಕು’ ಎಂದು ಸ್ಥಳೀಯ ನಿವಾಸಿ ನಂಜಮ್ಮ ಹೇಳಿದರು.

‘ನಮ್ಮ ಬಡವಾಣೆಯಲ್ಲಿ ರಸ್ತೆ, ಚರಂಡಿಗಳದ್ದೇ ದೊಡ್ಡ ಸಮಸ್ಯೆ. ಅವುಗಳನ್ನು ಸರಿ ಮಾಡಲು, ವಾರ್ಡ್‌ ಸದಸ್ಯರೂ ಆಗಿರುವ ನಗರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ಗಮನಹರಿಸಬೇಕು’ ಎಂದು ನಿವಾಸಿ ಮಂಜುನಾಥ್‌ ಒತ್ತಾಯಿಸಿದರು.

***

ವಾರ್ಡ್‍ನಲ್ಲಿ ರಸ್ತೆ ಮತ್ತು ಚರಂಡಿ ಆಗಬೇಕಿದೆ. ಆದ್ಯತೆ ಮೇರೆಗೆ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ವಾರ್ಡ್‍ ಅಭಿವೃದ್ದಿಗೆ ಮತ್ತು ಸ್ವಚ್ಛತೆಗೆ ಒತ್ತು ನೀಡುತ್ತಿದ್ದೇನೆ.
-ಸುಶೀಲಾ, ವಾರ್ಡ್‌ ಸದಸ್ಯೆ ಹಾಗೂ ನಗರಸಭೆ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT