ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಗೆಲುವು ಯಾರಿಗೆ; ಲೆಕ್ಕಾಚಾರ ಶುರು, ಅಲ್ಲಲ್ಲಿ ರಹಸ್ಯ ಬೆಟ್ಟಿಂಗ್‌

ರಾಜಕೀಯ ಭವಿಷ್ಯ ಮತಯಂತ್ರಗಳಲ್ಲಿ ಭದ್ರ
Last Updated 24 ಏಪ್ರಿಲ್ 2019, 12:24 IST
ಅಕ್ಷರ ಗಾತ್ರ

ಚಾಮರಾಜನಗರ: ಕ್ಷೇತ್ರದ ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ಮತಯಂತ್ರಗಳಲ್ಲಿ ದಾಖಲಿಸುತ್ತಲೇ, ಯಾರು ಗೆಲ್ಲಲಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ, ಜನಸಾಮಾನ್ಯರ ನಡುವೆ ಆರಂಭವಾಗಿದೆ.

ಪಕ್ಷಗಳ ಮುಖಂಡರು, ರಾಜಕೀಯ ಕುತೂಹಲಿಗಳು ಕೂಡ ತಮ್ಮದೇ ರೀತಿಯಲ್ಲಿ ಫಲಿತಾಂಶದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಜನರು ಕೂಡ ಹೋಟೆಲ್‌, ಬಸ್‌ ನಿಲ್ದಾಣ, ಸಮಾರಂಭಗಳಲ್ಲಿ ಚುನಾವಣೆಯ ಬಗ್ಗೆಯೇ ಚರ್ಚೆ ನಡೆಸುತ್ತಿದ್ದಾರೆ.

ಈ ಬಾರಿ ಕ್ಷೇತ್ರದಲ್ಲಿ ದಾಖಲೆಯ ಶೇ 75.22ರಷ್ಟು ಮತದಾನ ನಡೆದಿರುವುದರಿಂದ ಇದರ ಲಾಭ ಯಾರ ಪಾಲಾಗಲಿದೆ ಎಂಬುದರ ಬಗ್ಗೆಯೂ ವಿಶ್ಲೇಷಣೆ ನಡೆಸಲಾಗುತ್ತಿದೆ.

ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆಯೇ ನೇರ ಸ್ಪರ್ಧೆ ನಡೆದಿದೆ ಎಂದು ರಾಜಕೀಯ ಮುಖಂಡರು ಹೇಳುತ್ತಿದ್ದಾರೆ. ಬಿಎಸ್‌ಪಿ ಬಗ್ಗೆ ಜನರು ಈ ಬಾರಿಯೂ ಹೆಚ್ಚು ಒಲವು ತೋರಿಲ್ಲ ಎಂಬುದು ಅವರ ಮಾತು.

ಜನ ಸಾಮಾನ್ಯರ ಮಾತುಗಳು ಕೂಡ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಆರ್‌.ಧ್ರುವನಾರಾಯಣ ಮತ್ತು ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್‌ ಅವರ ನಡುವೆಯೇ ಸುತ್ತುತ್ತಿದೆ. ‘ಎರಡು ಪಕ್ಷಗಳ ನಡುವೆ ಸಮಬಲದ ಹೋರಾಟ ನಡೆದಿದೆ. ಯಾರು ಗೆದ್ದರೂ ಮತಗಳ ಅಂತರ ಕಡಿಮೆ ಇರಲಿದೆ’ ಎಂದು ಅವರು ಹೇಳುತ್ತಿದ್ದಾರೆ.

ಮತದಾನ ಪ್ರಮಾಣ ಹೆಚ್ಚಾದರೆ ಬಿಜೆಪಿಗೆ ಅನುಕೂಲ ಹೆಚ್ಚು ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುತ್ತದೆ. ಆದರೆ, ಚಾಮರಾಜನಗರ ಕ್ಷೇತ್ರಕ್ಕೆ ಈ ಮಾತನ್ನು ಅನ್ವಯಿಸಲು ಸಾಧ್ಯವಿಲ್ಲ. 2009ರಲ್ಲಿ ಇಲ್ಲಿ ಶೇ 67.9ರಷ್ಟು ಮತದಾನವಾಗಿತ್ತು. ಆರ್‌.ಧ್ರುವನಾರಾಯಣ ಅವರು ಎ.ಆರ್‌.ಕೃಷ್ಣಮೂರ್ತಿ ವಿರುದ್ಧ ಕೇವಲ 4,002 ಮತಗಳಿಂದ ಗೆದ್ದಿದ್ದರು. 2014ರಲ್ಲಿ ಕ್ಷೇತ್ರದಲ್ಲಿ ಶೇ 72.83ರಷ್ಟು ಮಂದಿ ಮತ ಚಲಾಯಿಸಿದ್ದರು. ಆಗ ಧ್ರುವನಾರಾಯಣ ಅವರು 1.41 ಲಕ್ಷ ಮತಗಳ ಅಂತರದಿಂದ ಜಯಶಾಲಿಯಾಗಿದ್ದರು.

ಈ ಚುನಾವಣೆಯಲ್ಲಿ ಇನ್ನೂ ಹೆಚ್ಚಿನ ಮತದಾನ ಆಗಿರುವುದರಿಂದ ತಮಗೇ ಲಾಭ ಎಂದು ಎರಡೂ ಪಕ್ಷದವರು ಹೇಳುತ್ತಿದ್ದಾರೆ.

‘ಹೋದ ಸಲ ಹೆಚ್ಚು ಮತದಾನ ಆಗಿದ್ದಾಗ ನಮಗೆ ಹೆಚ್ಚು ಮತಗಳು ಬಿದ್ದಿದ್ದವು. ಈ ಬಾರಿಯೂ ಅದೇ ಪುನರಾವರ್ತನೆ ಆಗಲಿದೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ಬಿಜೆಪಿ ಮುಖಂಡರು ಕೂಡ ತಮ್ಮ ಪಕ್ಷಕ್ಕೇ ಲಾಭವಾಗಲಿದೆ ಎಂದು ಹೇಳುತ್ತಿದ್ದಾರೆ.

ತಿ.ನರಸೀಪುರ ಕ್ಷೇತ್ರ ಬಿಟ್ಟರೆ ಉಳಿದ ಏಳೂ ಕ್ಷೇತ್ರಗಳಲ್ಲಿ ಶೇ 72ಕ್ಕಿಂತಲೂ ಹೆಚ್ಚು ಮತದಾನವಾಗಿದೆ.

ಎಲ್ಲಿ ಯಾರಿಗೆ ಮುನ್ನಡೆ?: ಎಂಟು ಕ್ಷೇತ್ರಗಳ ಪೈಕಿ ಎಲ್ಲಿ ಯಾರು ಮುನ್ನಡೆ ಗಳಿಸುತ್ತಾರೆ ಎಂಬ ಬಗ್ಗೆಯೇ ಹೆಚ್ಚು ವಿಶ್ಲೇಷಣೆ ಮಾಡಲಾಗುತ್ತಿದೆ.

ಗುಂಡ್ಲುಪೇಟೆ ಬಿಟ್ಟು ಎಲ್ಲ ಕ್ಷೇತ್ರಗಳಲ್ಲಿ ಏಳೂ ಕ್ಷೇತ್ರಗಳಲ್ಲಿ ಧ್ರುವನಾರಾಯಣ ಅವರಿಗೆ ಮುನ್ನಡೆ ಖಚಿತ ಎಂದು ಕೆಲವು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರೆ. ಗುಂಡ್ಲುಪೇಟೆ, ಚಾಮರಾಜನಗರ, ನಂಜನಗೂಡುಗಳಲ್ಲಿ ಬಿಜೆಪಿಗೆ ಮುನ್ನಡೆ ಸಿಗಲಿದೆ ಎಂದು ಇನ್ನೂ ಕೆಲವರು ಖಾಸಗಿಯಾಗಿ ಹೇಳುತ್ತಿದ್ದಾರೆ.

‘ಕೊಳ್ಳೇಗಾಲ, ತಿ.ನರಸೀಪುರದಲ್ಲಿ ಸಮಬಲದ ಹೋರಾಟ ಇದೆ. ಹನೂರು, ವರುಣಾ, ಎಚ್‌.ಡಿ.ಕೋಟೆಯಲ್ಲಿ ನಮ್ಮ ಪಕ್ಷಕ್ಕೆ ಮುನ್ನಡೆ ಸಿಗುತ್ತದೆ’ ಎಂಬ ದೃಢ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅಲೆ ಕ್ಷೇತ್ರದಲ್ಲಿ ಕೆಲಸ ಮಾಡಿದೆ. ನಮಗೂ ಗೆಲ್ಲುವ ಅವಕಾಶ ಇದೆ‘ ಎಂಬುದು ಬಿಜೆಪಿ ಮುಖಂಡರ ಅಭಿಪ್ರಾಯ.

‘ಯುವ ಸಮುದಾಯ ಬಿಜೆಪಿಯತ್ತ ಮುಖ ಮಾಡಿದೆ. ಜೊತೆಗೆ ಸಾಂಪ್ರದಾಯಿಕ ಮತಗಳೂ ಶ್ರೀನಿವಾಸ ಪ್ರಸಾದ್‌ ಅವರಿಗೆ ಬಿದ್ದಿವೆ. ಚಾಮರಾಜನಗರದಲ್ಲಿ ಉಪ್ಪಾರ ಸಮುದಾಯ ನಮ್ಮ ಕೈಹಿಡಿದಿದೆ’ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.

‘ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ ಪಕ್ಷದ ಅಭ್ಯರ್ಥಿಗೆ ಮುನ್ನಡೆ ಸಿಗಲಿದೆ. ತಿ.ನರಸೀಪುರದಲ್ಲಿ ಸಮಬಲದ ಹೋರಾಟ ಇದೆ’ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

ಕ್ಷೇತ್ರದ ಜನರು ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ ಎಂಬ ಆಶಾಭಾವನೆಯನ್ನು ಬಿಎಸ್‌ಪಿ ಮುಖಂಡರು ವ್ಯಕ್ತಪಡಿಸುತ್ತಿದ್ದಾರೆ.

‘ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿರುವ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಮತದಾರರ ಸ್ಪಂದನೆ ಉತ್ತಮವಾಗಿದೆ ಎಂದು ಅವರು ಹೇಳಿದ್ದಾರೆ’ ಎಂದು ಮುಖಂಡರೊಬ್ಬರು ತಿಳಿಸಿದರು.

ರಾಜಕೀಯ ಮುಖಂಡರ ಹಾಗೂ ಜನ ಸಾಮಾನ್ಯರ ಲೆಕ್ಕಾಚಾರ ಸರಿಯಾಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲುಮೇ 23ರವರೆಗೆ ಕಾಯಲೇಬೇಕಾಗಿದೆ.

ಬೆಟ್ಟಿಂಗ್‌: ಈ ಮಧ್ಯೆ, ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಯಾರು ಗೆಲ್ಲಬಹುದು ಎಂದು ಬೆಟ್ಟಿಂಗ್‌ ಕೂಡ ಆರಂಭವಾಗಿದೆ. ಮೊದಲೆಲ್ಲ ರಾಜಾರೋಷವಾಗಿ ನಡೆಯುತ್ತಿದ್ದ ಬೆಟ್ಟಿಂಗ್‌ ಈಗ ರಹಸ್ಯವಾಗಿ ನಡೆಯುತ್ತಿದೆ.

ಮನೆಯಲ್ಲೇ ಉಳಿದ ಅಭ್ಯರ್ಥಿಗಳು, ಮುಖಂಡರು

ಚುನಾವಣಾ ವೇಳಾಪಟ್ಟಿ ಪ್ರಕಟವಾದ ದಿನದಿಂದ (ಮಾರ್ಚ್‌ 10) ನಿರಂತರವಾಗಿ ಪ್ರಚಾರದಲ್ಲಿ ನಿರತರಾಗಿದ್ದ ಅಭ್ಯರ್ಥಿಗಳು ಹಾಗೂ ಪಕ್ಷಗಳ ಮುಖಂಡರು ಮತದಾನದ ಮಾರನೇ ದಿನ ಮನೆಯಲ್ಲೇ ಉಳಿದು ಕೊಂಚ ವಿಶ್ರಾಂತಿ ತೆಗೆದುಕೊಂಡರು.

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಆರ್‌.ಧ್ರುವನಾರಾಯಣ ಅವರು ಶುಕ್ರವಾರ ಮೈಸೂರಿನ ತಮ್ಮ ನಿವಾಸದಲ್ಲಿ ಇಡೀ ದಿನ ಕಳೆದರು.

ನಾಳೆಯಿಂದ ಎರಡು ದಿನ (ಏ. 20 ಮತ್ತು ಏ. 21) ಅವರು ನೆರೆಯ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಗಡಿ ಪ್ರದೇಶವಾದ ಸುಲ್ತಾನ್‌ ಬತ್ತೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅವರು ರಾಹುಲ್‌ ಗಾಂಧಿ ಪರ ಮತಯಾಚಿಸಲಿದ್ದಾರೆ.

ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್‌ ಅವರು ಮನೆಯಲ್ಲಿ ಇದ್ದರೂ, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ಬೆಳಿಗ್ಗೆಯಿಂದಲೇ ಸಭೆ ನಡೆಸುವುದರಲ್ಲಿ ನಿರತರಾಗಿದ್ದರು.

ಬಿಎಸ್‌ಪಿಯ ಡಾ.ಶಿವಕುಮಾರ್‌ ಅವರು ಮಧ್ಯಾಹ್ನದವರೆಗೆ ಮನೆಯಲ್ಲಿ ಕಾಲ ಕಳೆದು ಸಂಜೆ ಹೊತ್ತಿಗೆ ತಿ.ನರಸೀಪುರದ ಸೋಸಲೆಯಲ್ಲಿ ಹೊನ್ನಾದೇವಿ ರಥೋತ್ಸವದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT