ಶನಿವಾರ, ಏಪ್ರಿಲ್ 1, 2023
29 °C
ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿ; ರಾಜಕೀಯ ವಲಯದಲ್ಲಿ ಮೂಡಿದ ಕುತೂಹಲ

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಲಿದ್ದಾರೆಯೇ ಸೋಮಣ್ಣ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲಾಡಳಿತದ ವತಿಯಿಂದ ಸೋಮವಾರ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಸತಿ ಸಚಿವ ವಿ.ಸೋಮಣ್ಣ ಅವರು ಧ್ವಜಾರೋಹಣ ನೆರೆವೇರಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. 

ಸಾಮಾನ್ಯವಾಗಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸುತ್ತಾರೆ. ಸದ್ಯ ಎಸ್‌.ಟಿ.ಸೋಮಶೇಖರ್‌ ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ಮೈಸೂರು ಜಿಲ್ಲೆಯೊಂದಿಗೆ ಗಡಿ ಜಿಲ್ಲೆಯ ಹೆಚ್ಚುವರಿ ಹೊಣೆಯನ್ನು ಅವರಿಗೆ ವಹಿಸಲಾಗಿದೆ. ಸೋಮಶೇಖರ್‌ ಅವರು ಸೋಮವಾರ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 

ಸ್ವಾತಂತ್ರ್ಯ ದಿನಾಚರಣೆಯಂದು ಜಿಲ್ಲಾ ಉಸ್ತುವಾರಿ ಸಚಿವರು ಬಾರದೇ ಇದ್ದುದರಿಂದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರೇ ಧ್ವಜಾರೋಹಣ ನೆರವೇರಿಸಿದ್ದರು. 

ಈಗ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಸೋಮಣ್ಣ ಅವರು ಭಾಗವಹಿಸಿರುವುದು, ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಲಿದ್ದಾರೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.  

‘ಮುಖ್ಯಮಂತ್ರಿ ಅವರ ಸೂಚನೆ ಮೇರೆಗೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ’ ಎಂದು ಸೋಮಣ್ಣ ಅವರು ಸ್ಪಷ್ಟನೆ ನೀಡಿದ್ದಾರೆ. 

ಸೋಮಣ್ಣ ಅವರು ಈ ಹಿಂದೆ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದವರು. ಇಲ್ಲಿನ ರಾಜಕೀಯ ಮುಖಂಡರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಬಿಜೆಪಿಯ ಒಂದು ಗುಂಪು ಅವರೇ ಉಸ್ತುವಾರಿ ಸಚಿವರಾಗಬೇಕು ಎಂದು ಮೊದಲಿನಿಂದಲೂ ಒತ್ತಾಯಿಸುತ್ತಲೇ ಬಂದಿದೆ. ಕಾಂಗ್ರೆಸ್‌ ಶಾಸಕ ಸಿ.ಪುಟ್ಟರಂಗಶೆಟ್ಟಿ ಸೇರಿದಂತೆ ಕಾಂಗ್ರೆಸ್‌ನ ಕೆಲವು ಸ್ಥಳೀಯ ಮುಖಂಡರು ಸೋಮಣ್ಣ ಅವರು ಉಸ್ತುವಾರಿಯಾದರೆ ಜಿಲ್ಲೆಗೆ ಅನುಕೂಲ ಎಂದು ಬಹಿರಂಗವಾಗಿ ಹೇಳಿಕೆಯನ್ನೂ ನೀಡಿದ್ದಾರೆ.  

ಎಸ್‌.ಟಿ.ಸೋಮಶೇಖರ್‌ ಅವರಿಗೆ ಹೆಚ್ಚುವರಿವಾಗಿ ಜಿಲ್ಲೆಯ ಹೊಣೆ ವಹಿಸಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇನ್ನೊಬ್ಬ ಸಚಿವರಿಗೆ ಗಡಿ ಜಿಲ್ಲೆಯ ಉಸ್ತುವಾರಿ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಬರುತ್ತಿದೆ. 

ಹೊಣೆ ನೀಡಿದರೆ ನಿಭಾಯಿಸುವೆ: ಸೋಮಣ್ಣ

ಸೋಮವಾರ ಮಾಧ್ಯಮಗಳು ಈ ಬಗ್ಗೆ ಪದೇ ಪದೇ ಕೇಳಿದ ಪ್ರಶ್ನೆಗೆ ಸೋಮಣ್ಣ ಅವರು ಸ್ಪಷ್ಟವಾದ ಉತ್ತರ ನೀಡಲಿಲ್ಲ. ನಗುತ್ತಲೇ, ‘ಕೇಳುವವರನ್ನು ಕೇಳಬೇಕು. ನನ್ನನ್ನು ಕೇಳುವುದರಲ್ಲಿ ಅರ್ಥ ಇಲ್ಲ.  ವಿವಾದ ಸೃಷ್ಟಿ ಮಾಡಬೇಡಿಯಪ್ಪ’ ಎಂದು ಹೇಳಿದರು. 

‘ನಾನು ಹಿರಿಯ ಶಾಸಕ, ಆರೇಳು ಬಾರಿ ಗೆದ್ದಿದ್ದೇನೆ. ಯಾರದೋ ಬಳಿ ಹೋಗಿ ಮನವಿ ಮಾಡುವ ಸ್ಥಿತಿಯಲ್ಲಿ ನಾನಿಲ್ಲ. ಆರೇಳು ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ರಾಜ್ಯದ ಹಿತದ ಜೊತೆಗೆ ನಾನು ಎಲ್ಲಿ ಕೆಲಸ ಮಾಡುತ್ತೇನೋ ಆ ಜಿಲ್ಲೆಯ ಹಿತಕ್ಕಾಗಿ ಕಾರ್ಯನಿರ್ವಹಿಸುವೆ. ನಾನು ಭಾನುವಾರ ದಾವಣೆಗೆರೆಯಲ್ಲಿದ್ದಾಗ ಮುಖ್ಯಮಂತ್ರಿ ಕರೆ ಮಾಡಿ, ಚಾಮರಾಜನಗರಕ್ಕೆ ಹೋಗಿ ಧ್ವಜಾರೋಹಣ ಮಾಡಬೇಕು ಎಂದು ಸೂಚಿಸಿದ್ದರು. ಅದರಂತೆ ಬಂದಿದ್ದೇನೆ. ಮುಖ್ಯಮಂತ್ರಿ ಅವರು ಹೊಣೆ ನೀಡಿದರೆ ನಿಭಾಯಿಸುವೆ’ ಎಂದು ಹೇಳಿದರು. 

ಜನರ ಸ್ವಾಭಿಮಾನ ಬಲ್ಲೆ: ‘ಸರ್ಕಾರ ನಿಂತ ನೀರಲ್ಲ. ಹರಿಯುವ ನೀರು. ಅದು ಎಲ್ಲರಿಗೂ ತಲುಪಬೇಕು. ಚಾಮರಾಜನಗರ ಎಷ್ಟು ಬೆಳೆಯುತ್ತದೆಯೋ, ಕನ್ನಡಿಗರಲ್ಲಿ ಅಷ್ಟು ಹೃದಯ ಶ್ರೀಮಂತಿಗೆ ಬೆಳೆಯುತ್ತದೆ ಎಂಬ ನಂಬಿಕೆ ನನ್ನದು. ಇಲ್ಲಿನ ಜನರ ಮುಗ್ಧತೆ, ಸ್ವಾಭಿಮಾನವನ್ನು ಚೆನ್ನಾಗಿ ಬಲ್ಲೆ’ ಎಂದು ಸೋಮಣ್ಣ ಹೇಳಿದರು. 

ಬಡ ವಸತಿ ರಹಿತರಿಗೆ ಮನೆ

‘ಚಾಮರಾಜನಗರದಲ್ಲಿ ಹಲವು ಬಡವರಿಗೆ ಮನೆಗಳಿಲ್ಲ. ಇದೇ ಕಾರಣಕ್ಕೆ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿ ಚಾಮರಾಜನಗರ ಹಾಗೂ ಯಾದಗಿರಿಯ ಎಲ್ಲ ವಸತಿ ರಹಿತರಿಗೆ ಮನೆ ನಿರ್ಮಿಸಲು ತೀರ್ಮಾನಿಸಲಾಗಿದೆ’ ಎಂದು  ಅವರು ಹೇಳಿದರು. 

‘ಇನ್ನು 8–10 ದಿನಗಳಲ್ಲಿ ಇಲಾಖೆಯ ಕೆಲಸಕ್ಕಾಗಿ ಇಲ್ಲಿ ಎರಡು ದಿನಗಳಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಿಡಿಒಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಶಾಸಕರೊಂದಿಗೆ ಸಭೆ ನಡೆಸುತ್ತೇನೆ. ಬಡವರಿಗೆ ಮನೆಗಳನ್ನು ನೀಡಲು ಆದ್ಯತೆ ನೀಡಲಾಗುವುದು’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು