ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮತಯಾಚನೆಗೆ ಬರಲಿದ್ದಾರೆಯೇ ವಾಟಾಳ್‌ ನಾಗರಾಜ್‌?

ವಿಧಾನಸಭಾ ಚುನಾವಣೆಯಲ್ಲಿ ಸೋತರೆ ಮತ್ತೆ ಚಾಮರಾಜನಗರಕ್ಕೆ ಬರಲಾರೆ ಎಂದಿದ್ದ ಹೋರಾಟಗಾರ
Published 25 ಮೇ 2024, 7:53 IST
Last Updated 25 ಮೇ 2024, 7:53 IST
ಅಕ್ಷರ ಗಾತ್ರ

ಚಾಮರಾಜನಗರ: ವಿಧಾನ ಪರಿಷತ್‌ನ ದಕ್ಷಿಣ ಶಿಕ್ಷಣ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಗೆ ಇನ್ನು ವಾರವಷ್ಟೇ ಇದೆ. ವಿವಿಧ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು ಜಿಲ್ಲೆಗೆ ಭೇಟಿ ನೀಡಿ ಮತಯಾಚಿಸುತ್ತಿದ್ದಾರೆ. ಕನ್ನಡ ಹೋರಾಟಗಾರ ಮತ್ತು ಕನ್ನಡ ಚಳವಳಿ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ಕೂಡ ಕಣದಲ್ಲಿದ್ದು, ಮತಯಾಚನೆಗಾಗಿ ಅವರು ಚಾಮರಾಜನಗರಕ್ಕೆ ಬರುತ್ತಾರಾ ಎಂಬ ಪ್ರಶ್ನೆ ಈಗ ಎದ್ದಿದೆ.

ಕ್ಷೇತ್ರ ಶಿಕ್ಷಕರ ಮತದಾರರೇ ಈ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ವಾಟಾಳ್‌ ನಾಗರಾಜ್‌ ಅವರು ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಮೂರು ಅವಧಿಗೆ (1989, 1994, 2004) ಆಯ್ಕೆಯಾಗಿದ್ದವರು. ಐದಾರು ದಶಕಗಳಿಂದ ಅವರು ಜಿಲ್ಲೆ ಹಾಗೂ ಕ್ಷೇತ್ರದೊಂದಿಗೆ ಅವರ ನಂಟು ಹೊಂದಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲೂ ಅವರು ಸ್ಪರ್ಧಿಸಿದ್ದರು. ಈ ಬಾರಿ ಕ್ಷೇತ್ರದ ಜನರು ತಮ್ಮನ್ನು ಬೆಂಬಲಿಸದಿದ್ದರೆ ಮುಂದೆಂದೂ ಚಾಮರಾಜನಗರಕ್ಕೆ ಬರಲಾರೆ ಎಂಬ ಘೋಷಣೆಯನ್ನು ಮಾಡಿದ್ದರು.

ಚುನಾವಣೆಯಲ್ಲಿ ಅವರು ಹೀನಾಯವಾಗಿ ಸೋತಿದ್ದರು. ಚುನಾವಣೆ ಕಳೆದು ವರ್ಷವಾಗಿದೆ. ತಾವು ಮಾಡಿರುವ ಘೋಷಣೆಯಂತೆ ಈವರೆಗೂ ಚಾಮರಾಜನಗರಕ್ಕೆ ಅವರು ಬಂದಿಲ್ಲ. ಇಲ್ಲದಿದ್ದರೆ, ರಾಜಕೀಯ ಕಾರ್ಯಕ್ರಮಗಳಿಲ್ಲದಿದ್ದರೂ, ಸ್ನೇಹಿತರು, ಬೆಂಬಲಿಗರ ಕುಟುಂಬದಲ್ಲಿ ನಡೆಯುವ ಮದುವೆ ಇನ್ನಿತರ ಶುಭ ಸಮಾರಂಭಗಳಿಗೆ ಬರುತ್ತಿದ್ದರು. 

ಈಗ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವುದರಿಂದ ಮತಯಾಚನೆಗಾಗಿ ಅವರು ಭೇಟಿ ನೀಡುತ್ತಾರೆಯೇ ಎಂಬ ಕುತೂಹಲ ಜನರಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ.

‘ವಾಟಾಳ್‌ ನಾಗರಾಜ್‌ ಚಾಮರಾಜನಗರದೊಂದಿಗೆ ದೀರ್ಘ ಅವಧಿಯ ನಂಟು ಹೊಂದಿದ್ದಾರೆ. ಶಾಸಕರಾಗಿದ್ದವರು. ಚುನಾವಣೆಗಳಲ್ಲೂ ಸ್ಪರ್ಧಿಸಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 2100ಕ್ಕೂ ಹೆಚ್ಚು ಮತದಾರರಿದ್ದಾರೆ. ಅವರನ್ನು ಭೇಟಿ ಮಾಡಿ ಮತಯಾಚನೆ ಮಾಡಲು ವಾಟಾಳ್‌ ನಾಗರಾಜ್‌ ಬರುತ್ತಾರೆಯೇ ಎಂಬ ಕುತೂಹಲ ಮತದಾರನಾಗಿ ನನ್ನಲ್ಲಿದೆ’ ಎಂದು ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಂಗಾರು ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು. 

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 21,549 ಮತದಾರರಿದ್ದು, ಈ ಪೈಕಿ 2,181 ಮಂದಿ ಚಾಮರಾಜನಗರ ಜಿಲ್ಲೆಯಲ್ಲಿದ್ದಾರೆ. ಇವರಲ್ಲಿ 1448 ಪುರುಷರು ಮತ್ತು 733 ಮಹಿಳೆಯರು. 

ನಾನ್ಯಾಕೆ ಬರಲಿ: ವಾಟಾಳ್‌

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಾಟಾಳ್‌ ನಾಗರಾಜ್‌ ‘ಚಾಮರಾಜನಗರ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನಾಗಿ ಜಿಲ್ಲಾ ಕೇಂದ್ರ ಹಾಗೂ ಕ್ಷೇತ್ರವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನರು ನನಗೆ ಮತಹಾಕಿಲ್ಲ. ಇಷ್ಟೆಲ್ಲಾ ಕೆಲಸ ಮಾಡಿದರೂ ಕ್ಷೇತ್ರದ ಜನರು ನನ್ನನ್ನು ಸೋಲಿಸಿದರಲ್ಲಾ ಎಂಬ ನೋವು ನನಗಿದೆ. ಹೀಗಿರುವಾಗ ನಾನ್ಯಾಕೆ ಅಲ್ಲಿಗೆ ಬರಲಿ’ ಎಂದು ಪ್ರಶ್ನಿಸಿದರು.

‘ನಾನು ಚುನಾವಣೆಯಲ್ಲಿ ಸೋತರೆ ಮತ್ತೆ ಚಾಮರಾಜನಗರಕ್ಕೆ ಕಾಲಿಡುವುದಿಲ್ಲ ಎಂದು ಹೇಳಿದ್ದೆ. ಅದು ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಸೀಮಿತ. ಪ್ರಚಾರ ಮಾಡಲು ಬರುತ್ತಿದ್ದರೆ ಗುಂಡ್ಲುಪೇಟೆ ಹನೂರು ಕೊಳ್ಳೇಗಾಲಕ್ಕೆ ಭೇಟಿ ನೀಡುವೆ’ ಎಂದು ಹೇಳಿದರು.  ‘ನಾನು ನಗರಕ್ಕೆ ಬಾರದಿದ್ದರೂ ಎಲ್ಲ ಮತದಾರರನ್ನು ಸಂಪರ್ಕಿಸಿದ್ದೇನೆ. ಮತ ನೀಡುವಂತೆ ಮನವಿ ಮಾಡಿದ್ದೇನೆ. ನನ್ನ ಬೆಂಬಲಿಗರು ಕೂಡ ನನ್ನ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ’ ಎಂದು ವಾಟಾಳ್‌ ಹೇಳಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT