ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಕೊಟ್ಟ ಸಾಲ ಕೇಳಿದ್ದಕ್ಕೆ ಮಹಿಳೆಯನ್ನು ಕೊಂದು ಬಾವಿಗೆ ಎಸೆದರು

ಸಂಕ್ರಾಂತಿ ದಿನ ರಾತ್ರಿ ಹತ್ಯೆ ಮಾಡಿ ಪರಾರಿಯಾದ ಯುವಕರು, ಪತ್ತೆಗೆ ಬಲೆ ಬೀಸಿದ ಪೊಲೀಸರು
Last Updated 16 ಜನವರಿ 2021, 13:54 IST
ಅಕ್ಷರ ಗಾತ್ರ

‌ಕೊಳ್ಳೇಗಾಲ: ತಾಲ್ಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಹಣದ ವಿಷಯಕ್ಕೆ ಮಹಿಳೆಯೊಬ್ಬರ ಹತ್ಯೆ ಮಾಡಲಾಗಿದೆ. ಮೃತದೇಹದ ಕಾಲುಗಳಿಗೆ ಕಲ್ಲುಕಟ್ಟಿ ಶವವನ್ನು ಬಾವಿಗೆ ಎಸೆದಿರುವ ಆರೋಪಿಗಳು, ತಲೆ ಮರೆಸಿಕೊಂಡಿದ್ದಾರೆ.

ಗ್ರಾಮದ ಆಂಜನೇಯಪುರ ಬಡಾವಣೆಯ ನಿವಾಸಿ ಶಿವಮ್ಮ (57) ಕೊಲೆಯಾದ ಮಹಿಳೆ. ಅದೇ ಊರಿನ 19 ವರ್ಷದ ಶಿವು, 18 ವರ್ಷದ ರಾಜು ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ‌ಅವರ ಬಗ್ಗೆ ಮಹತ್ವದ ಸುಳಿವು ಸಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ.

ಹಣಕಾಸಿನ ವಿಚಾರದಲ್ಲಿ ಜಗಳ: ಅವಿವಾಹಿತೆ ಆಗಿದ್ದ ಶಿವಮ್ಮ ಅವರು ಆಂಜನೇಯಪುರ ಬಡಾವಣೆಯಲ್ಲಿ ಒಬ್ಬರೇ ವಾಸವಿದ್ದರು.ಪಕ್ಕದ ಮನೆಯ ನಂಜಮಣಿ ಎಂಬ ಮಹಿಳೆಗೆ ₹1.60 ಲಕ್ಷವನ್ನು ಸಾಲದ ರೂಪದಲ್ಲಿ ಕೆಲವು ತಿಂಗಳ ಹಿಂದೆ ನೀಡಿದ್ದರು ಎನ್ನಲಾಗಿದೆ.

ನಂಜಮಣಿ ಒಂದೆರಡು ತಿಂಗಳು ಬಡ್ಡಿಯನ್ನೂ ಕಟ್ಟಿದ್ದರು. ನಂತರ ಶಿವಮ್ಮ, ತನಗೆ ಹಣದ ಅವಶ್ಯಕತೆ ಇದ್ದು, ಹಣ ವಾಪಸ್‌ ಕೊಡುವಂತೆ ಕೇಳಿದ್ದರು. ಸಾಲ ತೀರಿಸಲು ಸ್ವಲ್ಪ ಸಮಯ ಬೇಕು ಎಂದು ನಂಜಮಣಿ ಅವರು ಕೇಳಿದ್ದರು. ಸಮಯದ ಅವಧಿ ಮುಕ್ತಾಯವಾದ ಬಳಿಕ ಶಿವಮ್ಮ ಅವರು ಹಣ ವಾಪಸ್‌ ನೀಡುವಂತೆ ಒತ್ತಾಯ ಮಾಡಿದ್ದರು. ಈ ವಿಷಯವಾಗಿ ಪ್ರತಿನಿತ್ಯ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ನಂಜಮಣಿ ಅವರ ಮಗ ಶಿವು ಶಿವಮ್ಮ ಅವರ ಮೇಲೆ ಹಲ್ಲೆಯನ್ನೂ ಮಾಡಿದ್ದರು. ಈ ವಿಷಯವಾಗಿ ರಾಜಿ ಪಂಚಾಯಿತಿಗಳೂ ನಡೆದಿದ್ದವು ಎಂದು ಮೂಲಗಳು ತಿಳಿಸಿವೆ.

ಸಂಕ್ರಾಂತಿ ದಿನವೇ ಹತ್ಯೆ: ಮುಖಂಡರ ಸಮ್ಮುಖದಲ್ಲಿ ಹಣ ನೀಡುವುದಾಗಿ ನಂಜಮಣಿ ಅವರು ತಿಳಿಸಿದ್ದರು.

ಆದರೆ, ಸಂಕ್ರಾತಿ ಹಬ್ಬದ ಮಧ್ಯರಾತ್ರಿ ಶಿವು ಮತ್ತು ಆತನ ಸ್ನೇಹಿತ ರಾಜು ಇಬ್ಬರೂ ಶಿವಮ್ಮ ಅವರ ಮನೆಗೆ ಹೋಗಿ ಕೊಲೆ ಮಾಡಿದ್ದಾರೆ. ಬಾವಿಗೆ ಶವವನ್ನು ಎಸೆಯಲು ನಿರ್ಧರಿಸಿದ್ದ ಅವರು, ಮೃತದೇಹ ನೀರಿನಲ್ಲಿ ತೇಲಬಾರದು ಎಂಬ ಉದ್ದೇಶದಿಂದ ಕಾಲುಗಳಿಗೆ ಕಲ್ಲು ಕಟ್ಟಿ ಬಾವಿಗೆ ಎಸೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಪತ್ತೆ ದೂರು:ಮರುದಿನ ಶಿವಮ್ಮ ಅವರ ಮನೆಯ ಬಾಗಿಲು ತೆರೆದಿತ್ತು. ಅನುಮಾನಗೊಂಡ ಅವರ ಸಂಬಂಧಿಕರು ಮನೆಯೊಳಗೆ ಹೋಗಿ ಪರಿಶೀಲನೆ ಮಾಡಿದಾಗ, ಶಿವಮ್ಮ ಇರಲಿಲ್ಲ. ನಂತರ ಇತರ ಸಂಬಂಧಿಕರು, ಪರಿಚಯಸ್ಥರಿಗೆ ಕರೆ ಮಾಡಿ ವಿಚಾರಿಸಿದರೂ ಶಿವಮ್ಮ ಅವರ ಸುಳಿವು ದೊರಕಲಿಲ್ಲ. ಆತಂಕಗೊಂಡ ಸಂಬಂಧಿಕರು ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು.

ಗ್ರಾಮದಲ್ಲಿ ಹರಡಿದ ವದಂತಿ: ನಂಜಮಣಿ ಹಾಗೂ ಶಿವಮ್ಮ ಅವರ ನಡುವಿನ ಜಗಳದ ಬಗ್ಗೆ ತಿಳಿದಿದ್ದ ಗ್ರಾಮಸ್ಥರು ಕೊಲೆಯಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಶಿವು ಮತ್ತು ರಾಜು ಅವರು ಕೂಡ ಗ್ರಾಮದಲ್ಲಿ ಇರಲಿಲ್ಲ. ಹಾಗಾಗಿ, ಕೊಲೆ ಮಾಡಿರುವ ಬಗ್ಗೆ ದಟ್ಟ ಗ್ರಾಮದಲ್ಲಿ ಗುಸು ಗುಸು ಮಾತುಗಳು ಕೇಳಿ ಬರುತ್ತಿತ್ತು.

ನಾಪತ್ತೆ ದೂರಿನ ಆಧಾರದಲ್ಲಿ, ಶಿವಮ್ಮ ಅವರಿಗಾಗಿ ಹುಡುಕಾಟ ಆರಂಭಿಸಿದ್ದ ಪೊಲೀಸರು, ಅನುಮಾನಗೊಂಡು ಗ್ರಾಮದ ಬಾವಿಯ ನೀರನ್ನು ಖಾಲಿ ಮಾಡಿಸಿದಾಗ ಶವ ಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಡಿವೈಎಸ್‌ಪಿ ನಾಗರಾಜು, ಸಬ್‌ ಇನ್‌ಸ್ಪೆಕ್ಟರ್‌ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಹಣದ ವಿಷಯಕ್ಕೆ ಗ್ರಾಮದ ಇಬ್ಬರು ಯುವಕರು ಮಹಿಳೆಯನ್ನು ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದೇವೆ. ಶೀಘ್ರದಲ್ಲಿ ಬಂಧಿಸುತ್ತೇವೆ’ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಶ್ರೀಕಾಂತ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT