ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಮನೆಗೆ ಪ್ರಾಧಿಕಾರದಿಂದ ಬೀಗ; ಏಕಾಂಗಿಯಾಗಿ ಪ್ರತಿಭಟನೆಗಿಳಿದ ಮಹಿಳೆ

ಮಹದೇಶ್ವರ ಬೆಟ್ಟ; ತನ್ನ ಜಾಗದಲ್ಲಿ ಮನೆ ನಿರ್ಮಿಸಲಾಗಿದೆ–ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವಾದ
Last Updated 25 ಸೆಪ್ಟೆಂಬರ್ 2020, 16:57 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಇಲ್ಲಿನ ಊರ ಬಸಪ್ಪನ ಒಡ್ಡಿನಲ್ಲಿ ಜನಾಶ್ರಯ ಟ್ರಸ್ಟ್‌ ನಿರ್ಮಿಸಿಕೊಟ್ಟಿದ್ದ ಹೊಸ ಮನೆಗೆ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಬೀಗ ಜಡಿದಿರುವುದನ್ನು ಪ್ರತಿಭಟಿಸಿ ಕೆಂಪಮ್ಮ ಎಂಬ ಮಹಿಳೆ ಏಕಾಂಗಿಯಾಗಿ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಟ್ಟದ ಊರ ಬಸಪ್ಪನ ಒಡ್ಡಿನಲ್ಲಿ ಕೆಂಪಮ್ಮ ಎಂಬ ಮಹಿಳೆ ಹಲವು ದಶಕಗಳಿಂದ ವಾಸವಿದ್ದು, ಎಂಟು ವರ್ಷಗಳಿಂದ ಶೀಟಿನ ಚಾವಣಿ ಹಾಗೂ ಸುತ್ತಲೂ ಸೀರೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು.

ಜನಾಶ್ರಯ ಟ್ರಸ್ಟ್‌ ಇತ್ತೀಚೆಗೆ ಅವರಿಗೆ ಪುಟ್ಟ ಮನೆಯನ್ನು ನಿರ್ಮಿಸಿಕೊಟ್ಟಿತ್ತು. ಗುರುವಾರ ಅದರ ಉದ್ಘಾಟನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆದರೆ, ಕಾರ್ಯಕ್ರಮಕ್ಕೂ ಮೊದಲೇ ಪ್ರಾಧಿಕಾರದ ಅಧಿಕಾರಿಗಳು ಮನೆಗೆ ಬೀಗ ಜಡಿದಿದ್ದರು. ಮನೆ ನಿರ್ಮಿಸಿರುವ ಪ್ರದೇಶ ಪ್ರಾಧಿಕಾರಕ್ಕೆ ಸೇರಿದೆ ಎಂಬುದು ಅಧಿಕಾರಿಗಳ ವಾದ.

ಟ್ರಸ್ಟ್‌ನ ಮುಖ್ಯಸ್ಥ ವೆಂಕಟೇಶ್‌ ಅವರ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆಯೂ ನಡೆದಿತ್ತು. ಆ ಬಳಿಕ, ಕೆಂಪಮ್ಮ ಅದೇ ಮನೆಯ ಮುಂದೆ ಕುಳಿತಿದ್ದು, ನ್ಯಾಯ ಕೊಡಿಸುವಂತೆ ಪ್ರಾಧಿಕಾರದ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ. ಗುರುವಾರ ರಾತ್ರಿ ಇಡಿ ಅಲ್ಲೇ ಇದ್ದ ಮಹಿಳೆ ಶುಕ್ರವಾರವೂ ಅಲ್ಲೇ ಕುಳಿತಿದ್ದಾರೆ. ಮನೆಯ ಬಾಗಿಲು ತೆರೆಯುವರೆಗೆ ಊಟ ಮಾಡುವುದಿಲ್ಲ ಎಂದು ಹಟ ಹಿಡಿದಿದ್ದಾರೆ. ಪ್ರಾಧಿಕಾರದ ಸಿಬ್ಬಂದಿ ಆಕೆಯನ್ನು ಮನವೊಲಿಸಲು ಪ್ರಯತ್ನಿಸಿದರೂ ಪಟ್ಟು ಸಡಿಸಲಿಲ್ಲ.

ಕೆಂಪಮ್ಮ ಅವರಿಗೆ ಒಬ್ಬ ಮಗ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಆದರೆ, ಬೆಟ್ಟದಲ್ಲಿ ಇವರೊಬ್ಬರೇ ವಾಸಿಸುತ್ತಿದ್ದಾರೆ.

‘50–60 ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದೇನೆ. ಸರಿಯಾಗಿ ಮನೆ ಇರಲಿಲ್ಲ. ಟ್ರಸ್ಟ್‌ನವರು ನಿರ್ಮಿಸಿಕೊಟ್ಟಿದ್ದಾರೆ. ಈಗ ಯಾವುದೇ ಸೂಚನೆ ನೀಡದೆ ಪ್ರಾಧಿಕಾರದವರು ಬೀಗ ಹಾಕಿದ್ದಾರೆ. ನನಗೆ ಇರಲು ಜಾಗವಿಲ್ಲ’ ಎಂದು ಕೆಂಪಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು, ‘ಶನಿವಾರ ಬೆಳಿಗ್ಗೆ ಮಹಿಳೆಯೊಂದಿಗೆ ಮಾತನಾಡಿ ಮನವೊಲಿಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT