ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣ: ಸಚಿವ ಎಸ್. ಸುರೇಶ್‍ ಕುಮಾರ್

ಬಿಳಿಗಿರಿರಂಗನಬೆಟ್ಟಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‍ ಕುಮಾರ್
Last Updated 27 ಜನವರಿ 2021, 3:24 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗ ನಬೆಟ್ಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‍ ಕುಮಾರ್ ಮಂಗಳವಾರ ಭೇಟಿ ನೀಡಿ ದೇವಾಲಯ ಜೀರ್ಣೋದ್ಧಾರ ಕಾಮಗಾರಿಯನ್ನು ಪರಿಶೀಲಿಸಿದರು.

ದೇವಾಲಯದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಮಾಹಿತಿ ಪಡೆದ ಸಚಿವರು, ಶೀಘ್ರವೇ ಬಾಕಿ ಇರುವ ಎಲ್ಲಾ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

‘ಪಾಕಶಾಲೆ ನಿರ್ಮಾಣ ಆಗಿದೆ. ದೇವಾಲಯ ವಿದ್ಯುತ್ ವ್ಯವಸ್ಥೆ ಕೆಲಸವು ಶೇ 90ರಷ್ಟು ಪೂರ್ಣಗೊಂಡಿದೆ. ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯದ ನೂತನ ಬ್ರಹ್ಮರಥದ ನಿರ್ಮಾಣ ಕಾರ್ಯವು ಬೆಂಗಳೂರಿನಲ್ಲಿ ನಡೆಯುತ್ತಿದ್ದು, ನಾನೇ ಭೇಟಿ ನೀಡಿ ರಥದ ಕಾರ್ಯವನ್ನು ಪರಿಶೀಲಿಸುತ್ತೇನೆ’ ಎಂದು ತಿಳಿಸಿದರು.

‘ದೇವಾಲಯದ ಕಾಮಗಾರಿ ಪ್ರಗತಿಯನ್ನು ಉಪವಿಭಾಗಾಧಿಕಾರಿ ಪ್ರತಿ ವಾರ ಪರಿಶೀಲಿಸಬೇಕು. ದೇವಾಲಯದ ಅಭಿವೃದ್ಧಿ ಕುರಿತು ಸಮಗ್ರವಾಗಿ ಪರಾಮರ್ಶಿಸಬೇಕು. ಮಹಾಸಂಪ್ರೋಕ್ಷಣೆಗೆ ಮಾರ್ಚ್ ತಿಂಗಳಿನಲ್ಲಿ ದಿನಾಂಕ ನಿಗದಿ ಆಗಬೇಕಿರುವುದರಿಂದ ಈಗಾಗಲೇ ಆರಂಭವಾಗಿರುವ ಎಲ್ಲಾ ಕಾಮಗಾರಿಗಳು ಪೂರ್ಣ ಆಗುವಂತೆ ಗಮನ ಹರಿಸಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಮಾತನಾಡಿ, ‘ದೇವಾಲಯ ಸಮಗ್ರ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲಾನ್ ಸಿದ್ಧಮಾಡಬೇಕಿದೆ. ಇದರಿಂದ ಕ್ಷೇತ್ರದಲ್ಲಿ ಯಾವ ಯಾವ ಸೌಲಭ್ಯಗಳನ್ನು ಒದಗಿಸಬೇಕಿದೆ ಎಂಬ ಬಗ್ಗೆ ಕ್ರಮ ತೆಗೆದುಕೊಳ್ಳಬಹುದಾಗಿದೆ. ಅತ್ಯಂತ ವ್ಯವಸ್ಥಿತವಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕಿದೆ’ ಎಂದರು.

ಬಲಿಪೀಠ ಹೆಸರು ಬದಲಾಯಿಸಿ: ಸಭೆಯಲ್ಲಿ ‘ದೇವಾಲಯದ ಸಮೀಪ ಬಲಿಪೀಠ ನಿರ್ಮಿಸಬೇಕು’ ಎಂದು ಅರ್ಚಕರು ಹೇಳುತ್ತಿದ್ದಂತೆ ಪ್ರತಿಕ್ರಿಯಿಸಿದ ಶಾಸಕ ಎನ್ ಮಹೇಶ್, ‘ಕೂಡಲೇ ಆ ಹೆಸರನ್ನು ಬದಲಿಸಿ ಬೇರೆ ಹೆಸರಿನಿಂದ ಕರೆಯಿರಿ’ ಎಂದು ಸೂಚಿಸಿದರು.

‘ಬಲಿಪೀಠ ಎಂದು ಕರೆಯುವುದರಿಂದ ಜಿಲ್ಲೆಯ ಜನರಿಗೆ ಮತ್ತು ಭಕ್ತರಿಗೆ ತಪ್ಪುಕಲ್ಪನೆ ಮೂಡುತ್ತದೆ. ಆದ್ದರಿಂದ ಕೂಡಲೇ ಆರ್ಚಕರು ಅದನ್ನು ಬದಲಾಯಿಸಬೇಕು’ ಎಂದರು.

ಇದಕ್ಕೆ ಪತಿಕ್ರಿಯಿಸಿದ ಪ್ರಧಾನ ಆರ್ಚಕ ರವಿಕುಮಾರ್, ‘ಹಿಂದಿನಿಂದಲೂ ಅದೇ ಹೆಸರಿನಿಂದ ಕರೆಯುವುದರಿಂದ ಈಗ ಆ ಹೆಸರನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ತಹಶೀಲ್ದಾರ್ ಸುದರ್ಶನ್, ಮುಜರಾಯಿ ಇಲಾಖೆಯ ಮೋಹನ್, ಪ್ರಮುಖ ದಾನಿಗಳಾದ ರಮೇಶ್, ಲಕ್ಷ್ಮೀನಾರಾಯಣ ಕಡಂಬಿ, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನ ವೇದ ವಿದ್ವಾಂಸ ಎಸ್. ಗೋವಿಂದಭಟ್, ಚಿಕ್ಕರಾಜು, ವೇದಮೂರ್ತಿ, ಆಗಮಿಕರಾದ ರಮೇಶ್ ಬಾಬು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT